Advertisement
ದುರ್ದೈವದ ಸಂಗತಿಯೆಂದರೆ, ಅತ್ತ ಸರ್ಕಾರ ರಚನೆಯಲ್ಲಿ ಮಹಾರಾಷ್ಟ್ರ, ಇತ್ತ ಉಪಚುನಾವಣೆಯ ಕಾವಿನಲ್ಲಿ ಕರ್ನಾಟಕ ವ್ಯಸ್ತವಾಗಿರುವುದರಿಂದ, ಬೆಲೆ ಏರಿಕೆಯ ವಿಷಯದಲ್ಲಿ ಯಾವೊಬ್ಬ ಜನನಾಯಕನೂ ಮಾತನಾಡುತ್ತಿಲ್ಲ, ಸಮಸ್ಯೆಯ ಪರಿಹಾರಕ್ಕೆ ಯೋಚಿಸುತ್ತಿಲ್ಲ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೂ ಚುನಾವಣೆಯ ಚರ್ಚೆಯ ಸುತ್ತಲೇ ಗಿರಕಿ ಹೊಡೆಯುತ್ತಿರುವುದರಿಂದ, ಜನಸಾಮಾನ್ಯರನ್ನು ಕಂಗೆಡಿಸಿರುವ ಈ ಪ್ರಮುಖ ಸಮಸ್ಯೆಯನ್ನು ನೋಡುವವರೇ ಇಲ್ಲವಾಗಿದೆ.
Related Articles
Advertisement
ತತ್ತರಿಸಿದ ನೇಪಾಳ-ಬಾಂಗ್ಲಾದೇಶಇನ್ನು ಇದೇ ಸಂದರ್ಭದಲ್ಲಿ ಅನ್ಯ ದೇಶಗಳಿಗೆ ಈರುಳ್ಳಿ ಕಳ್ಳಸಾಗಣೆ ಆರಂಭವಾಗಿದ್ದು, ಭಾರತೀಯ ಗಡಿಭದ್ರತಾಪಡೆಗಳು ಕಟ್ಟೆಚ್ಚರಿಕೆ ವಹಿಸಿವೆ. ಹೀಗಿದ್ದರೂ ಬೆಲೆ ಇಳಿಕೆಯಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇವೆಲ್ಲದರ ಪರಿಣಾಮವು ಭಾರತವಷ್ಟೇ ಅಲ್ಲದೇ, ಭಾರತದ ಈರುಳ್ಳಿಯ ಮೇಲೆ ಅವಲಂಬಿತವಾಗಿರುವ ಸುತ್ತಮುತ್ತಲ ರಾಷ್ಟ್ರಗಳಿಗೂ ತಟ್ಟುತ್ತಿದೆ. ಕಳೆದ ವರ್ಷವಷ್ಟೇ ಭಾರತದಿಂದ 562 ಕೋಟಿ ರೂಪಾಯಿಯಷ್ಟು ಈರುಳ್ಳಿ ಖರೀದಿಸಿದ್ದ ನೇಪಾಳವೀಗ ತತ್ತರಿಸುತ್ತಿದೆ. ಮಂಗಳವಾರವಷ್ಟೇ ಆ ದೇಶದಲ್ಲಿ ಈರುಳ್ಳಿಯ ಬೆಲೆ ಏಕಾಏಕಿ 50 ರೂಪಾಯಿ(ನೇಪಾಳಿ ಹಣ) ಅಧಿಕವಾಗಿದ್ದು , ಈಗ ಕೆ.ಜಿ.ಗೆ 250 ರೂಪಾಯಿ ತಲುಪಿದೆ. ಕೆಲವೇ ದಿನಗಳ ಹಿಂದಷ್ಟೇ ನೇಪಾಳಕ್ಕೆ ಅಕ್ರಮವಾಗಿ ಈರುಳ್ಳಿ ಸಾಗಿಸುತ್ತಿದ್ದ 14 ಟ್ರಕ್‌ಗಳನ್ನು, 40 ಟನ್ ಈರುಳ್ಳಿಯನ್ನು ಭಾರತೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗ ನೇಪಾಳಕ್ಕೆ ಚೀನಾ ಈರುಳ್ಳಿಯನ್ನು ರಫ್ತು ಮಾಡಲಾರಂಭಿಸಿದ್ದು, ಅಲ್ಲೂ ಬೆಲೆ ಇಳಿಕೆಯಾಗುತ್ತಿಲ್ಲ. ಭಾರತದ ರಫ್ತು ನಿಷೇಧದಿಂದಾಗಿ ಬಾಂಗ್ಲಾದೇಶದಲ್ಲೂ ಹಾಹಾಕಾರ ಎದ್ದಿದ್ದು ಕೆ.ಜಿ. ಈರುಳ್ಳಿಯ ಬೆಲೆ 250 ಬಾಂಗ್ಲಾದೇಶಿ ಟಾಕಾ(210 ರೂಪಾಯಿ) ತಲುಪಿದೆ. ಈರುಳ್ಳಿ- ಬೆಳ್ಳುಳ್ಳಿಯಂಥ ತರಕಾರಿಗಳ ಅತಿದೊಡ್ಡ ಗ್ರಾಹಕರು ರೆಸ್ಟಾರೆಂಟ್‌ಗಳು ಹಾಗೂ ಚಿಕ್ಕ ಪುಟ್ಟ ಹೋಟೆಲ್‌ಗಳಾಗಿರುತ್ತವೆ. ಹೀಗಾಗಿ, ಇವುಗಳೂ ಕೂಡ ಆಹಾರದ ಬೆಲೆ ಏರಿಸಲಾರಂಭಿಸಿವೆ. ಇದರ ಜತೆಗೆ ಕೆಲ ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಕೂಡ ನಿರಂತರ ಏರಿಕೆ ಕಾಣುತ್ತಿದೆ. ಇಂಧನ ಬೆಲೆಯಲ್ಲಿನ ಏರಿಕೆ ದಿನೋಪಯೋಗಿ ಸಾಮಗ್ರಿಗಳು ಮತ್ತು ತರಕಾರಿಗಳ ಬೆಲೆ ಏರಿಕೆಯ ಮೇಲೂ ಪರಿಣಾಮ ಬೀರುತ್ತವಾದ್ದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆಯೇ ಎಂಬ ಪ್ರಶ್ನೆ-ಆತಂಕ ಎದುರಾಗುತ್ತಿದೆ. ಬೆಲೆ ಏರಿಕೆಯ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು(ಮುಖ್ಯವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ) ಜತೆಯಾಗಿ ಶ್ರಮಿಸಬೇಕಿದೆ. ಜನನಾಯಕರು ತಮ್ಮ ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಜನರತ್ತ ದೃಷ್ಟಿ ಹರಿಸಬೇಕಿದೆ.