Advertisement

ರಾಜ್ಯ ಸರಕಾರದ ಮೇಲೆ ಹೆಚ್ಚುತ್ತಿರುವ ಮೀಸಲಾತಿ ಒತ್ತಡ

11:10 PM Aug 21, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಹತ್ತಿರವಾಗುತ್ತಿರುವಂತೆ ಮೀಸಲಾತಿ ಬೇಡಿಕೆಯ ಒತ್ತಡ ಹೆಚ್ಚಾಗುತ್ತಿದ್ದು, ಸರಕಾರ ಗೊಂದಲಕ್ಕೆ ಸಿಲುಕುವಂತಾಗಿದೆ.

Advertisement

ವಿವಿಧ ಸಮುದಾಯಗಳು ಮೀಸಲಾತಿಯ ಬೇಡಿಕೆ ಇಟ್ಟಿದ್ದು, ಅದನ್ನು ನಿಭಾಯಿಸುವುದು ಸರಕಾರಕ್ಕೆ ಸವಾಲಾಗಿದೆ.

ಒಬಿಸಿಗೆ ಸೇರ್ಪಡೆ ಮಾಡಿ
ಪ್ರಮುಖವಾಗಿ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತೀ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ಬೇಸರ ಮುಖಂಡರಲ್ಲಿ ಮೂಡಿದೆ ಎನ್ನಲಾ ಗಿದೆ. ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಒತ್ತಡ ಹೇರಲು ಕಾರ್ಯತಂತ್ರ ರೂಪಿಸಲಾಗುತ್ತಿದೆ.

2ಎಗೆ ಸೇರಿಸಿ
ರಾಜ್ಯದ ಅತೀ ದೊಡ್ಡ ಸಮುದಾಯವಾಗಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವಂತೆ ನಿರಂತರ ಗಡುವು ನೀಡುತ್ತಾ ಬರಲಾಗಿದೆ. ಆ. 22ಕ್ಕೆ ಗಡುವು ಮುಕ್ತಾಯವಾಗಲಿದ್ದು, ಈ ಬಾರಿಯೂ ಸ್ಪಷ್ಟ ನಿಲುವು ತಿಳಿಸಲು ಆಗದಿರುವುದರಿಂದ ಸರಕಾರ ಮತ್ತಷ್ಟು ಸಮಯ ಕೇಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಆ. 22ರ ಬಳಿಕ ಹೋರಾಟದ ರೂಪರೇಖೆ ಕುರಿತು ಚರ್ಚಿಸಲು ಪಂಚಮಸಾಲಿ ಸಮುದಾಯದ ಮುಖಂಡರು ಹಾಗೂ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಸ್‌ಟಿಗಾಗಿ ಆಗ್ರಹ
ಕುರುಬ ಸಮುದಾಯವನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸಲು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದೆ. ಈ ಬೇಡಿಕೆಯನ್ನು ಪರಿಶೀಲಿಸುವ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರಕಾರ ಸೂಚಿಸಿದೆ.

Advertisement

ಮೀಸಲು ಹೆಚ್ಚಿಸಿ
ವಾಲ್ಮೀಕಿ (ಎಸ್ಟಿ) ಮೀಸಲಾತಿಯನ್ನು ಜನಸಂಖ್ಯೆಗೆ ಅನು ಗುಣವಾಗಿ ಹೆಚ್ಚಿಸುವಂತೆ ಆ ಸಮುದಾಯದ ಸ್ವಾಮೀಜಿ ಅನಿರ್ದಿ ಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ. 3ರಿಂದ 7.5ಕ್ಕೆ ಹೆಚ್ಚಿಸುವ ಕುರಿತು ನ್ಯಾ| ನಾಗಮೋಹನ ದಾಸ್‌ ಸಮಿತಿ ವರದಿ ಕೊಟ್ಟಿದೆೆ.

3 ಬಿಯಿಂದ 2ಎಗೆ ಸೇರಿಸಿ
ಮರಾಠ ಸಮುದಾಯವೂ ತಮ್ಮ ಸಮುದಾಯವನ್ನು ಪ್ರವರ್ಗ 3ಬಿಯಿಂದ 2ಎ ಗೆ ಸೇರಿಸುವಂತೆ ಆಗ್ರಹಿಸುತ್ತಿದೆ. ಈ ಕುರಿತು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿರುವುದರಿಂದ ಸರಕಾರ ಆ ವರದಿಯನ್ನು ಜಾರಿಗೊಳಿಸಬೇಕೆಂಬ ಒತ್ತಡ ಹೆಚ್ಚಿದೆ.

ಜಂಗಮರಿಗೆ ಜಾತಿ ಪ್ರಮಾಣ ಪತ್ರ
ರಾಜ್ಯದಲ್ಲಿರುವ ಜಂಗಮ ಸಮುದಾಯಕ್ಕೆ “ಬೇಡ ಜಂಗಮ ಜಾತಿ ಪ್ರಮಾಣ ಪತ್ರ’ ನೀಡುವಂತೆ ಜಂಗಮ ಸಮುದಾಯ ದವರೂ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ರಾಜ್ಯ ಸರಕಾರ ಈ ವಿಚಾರದಲ್ಲಿಯೂ ಜಂಗಮ ಸಮುದಾಯಕ್ಕೆ ತಾಳ್ಮೆ ವಹಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ಹಲವರಿಗೆ ಶುಭ ಸುದ್ದಿ ನಿರೀಕ್ಷೆ
ಸರಕಾರ ಎಲ್ಲ ಸಮುದಾಯಗಳ ಬೇಡಿಕೆಗಳನ್ನು ಪರಿಗಣಿಸುವ ಕುರಿತಂತೆ ನ್ಯಾ| ಸುಭಾಷ್‌ ಆಡಿ ನೇತೃತ್ವದ ಸಮಿತಿ ರಚನೆ ಮಾಡಿದ್ದು, ಈ ಸಮಿತಿಯು ಇನ್ನೂ ವರದಿ ಸಲ್ಲಿಸಿಲ್ಲ. ಆದರೆ, ಎಲ್ಲ ಸಮುದಾಯಗಳೂ ಚುನಾವಣೆಗೆ ಮುನ್ನವೇ ಮೀಸಲಾತಿಯ ಬೇಡಿಕೆ ಈಡೇರಿಸಬೇಕೆಂಬ ಒತ್ತಡ ಹಾಕುತ್ತಿರುವುದರಿಂದ ಸರಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿದೆ ಎನ್ನಲಾಗಿದೆ. ಈಗಿರುವ ಮೀಸಲಾತಿ ಪ್ರಮಾಣದ ಶೇ. 50ರ ಮಿತಿ ದಾಟದಂತೆ ಯಾವ ಸಮುದಾಯಗಳಿಗೆ ನ್ಯಾಯ ಒದಗಿಸಲು ಸಾಧ್ಯವಿದೆ ಎನ್ನುವ ಕುರಿತು ಸರಕಾರ ಚಿಂತಿಸುತ್ತಿದ್ದು, ವಿಧಾನಸಭೆ ಚುನಾವಣೆಗೂ ಮುನ್ನ ಮೀಸಲಾತಿ ಬೇಡಿಕೆ ಇಟ್ಟಿರುವ ಕೆಲವು ಸಮುದಾಯಗಳಿಗೆ ಶುಭ ಸುದ್ದಿ ನೀಡಲು ಸರಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಹಿಂದುಳಿದ ವರ್ಗದ ಆಯೋಗದವರು ನೀಡುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಜರಗಿಸಬೇಕಾಗುತ್ತದೆ. ಎಲ್ಲ ಜಿಲ್ಲೆಗಳಲ್ಲಿ ಆಯೋಗ ಸಮೀಕ್ಷೆ ನಡೆಸುತ್ತಿದೆ. ಆಯೋಗದಿಂದ ಸಂಪೂರ್ಣ ವರದಿ ಬಂದ ಮೇಲೆ ಅದರ ಶಿಫಾರಸುಗಳು ಏನು ಎಂಬುದನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

– ಶಂಕರ ಪಾಗೋಜಿ

 

Advertisement

Udayavani is now on Telegram. Click here to join our channel and stay updated with the latest news.

Next