Advertisement

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: ಬರಿದಾಗುತ್ತಿವೆ ರಕ್ತನಿಧಿಗಳು

10:08 AM Mar 18, 2020 | Lakshmi GovindaRaj |

ಬೆಂಗಳೂರು: ಕೊರೊನಾ ವೈರಸ್‌ ಸೋಂಕಿಗೂ, ರಕ್ತದಾನಕ್ಕೂ ಸಂಬಂಧ ಇದೆಯೇ? “ಹೌದು ನಿಕಟ ಸಂಬಂಧವಿದೆ” ಎನ್ನುತ್ತಿವೆ ರಕ್ತನಿಧಿ ಕೇಂದ್ರಗಳು. ಅತ್ತ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇತ್ತ ರಕ್ತನಿಧಿಗಳು ಬರಿದಾಗುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ರಕ್ತದ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ರಕ್ತ ನಿಧಿಕೇಂದ್ರಗಳ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಕೊರೊನಾ ಸೋಂಕು ಭೀತಿಯಿಂದ ರಾಜ್ಯವೇ ವಾರದ ಮಟ್ಟಿಗೆ ಶಟ್‌ಡೌನ್‌ ಆಗಿದೆ. ರಕ್ತದಾನಿಗಳ ಸಂಗ್ರಹಕ್ಕೆ ಆಕರವಾಗಿದ್ದ ಪದವಿ ಕಾಲೇಜುಗಳು, ತಾಂತ್ರಿಕ ಮಹಾವಿದ್ಯಾಲಯಗಳು, ವಿವಿಗಳು ಸರ್ಕಾರ ಸೂಚನೆ ಮೇರೆಗೆ ಸಂಪೂರ್ಣ ಬಂದ್‌ ಆಗಿದೆ. ರಕ್ತದಾನ ಶಿಬಿರಗಳನ್ನು ಮುಂದೂಡಲಾಗುತ್ತಿದೆ. ಇದರಿಂದಾಗಿದೆ ರಾಜ್ಯದ ಖಾಸಗಿ ಹಾಗೂ ಸರ್ಕಾರಿ ರಕ್ತ ನಿಧಿ ಕೇಂದ್ರಗಳಲ್ಲಿ ಶೇ.70 ರಷ್ಟು ರಕ್ತ ಸಂಗ್ರಹ ಪ್ರಮಾಣ ಕುಸಿದಿದೆ.

ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳ ಕೆಲ ಹಾಗೂ ಟ್ರಸ್ಟ್‌ಗಳ ರಕ್ತ ನಿಧಿ ಕೇಂದ್ರಗಳು ಕನಿಷ್ಠ ಒಂದು ಯುನಿಟ್‌ ರಕ್ತ ಸಂಗ್ರಹವೂ ಇಲ್ಲದೇ “ನೋ ಸ್ಟಾಕ್‌’ ಎನ್ನುತ್ತಿವೆ. ಇದರಿಂದಾಗಿ ರಕ್ತ ಸೇರಿದಂತೆ ರಕ್ತದ ಇತರೆ ಭಾಗಗಳಾದ ಬಿಳಿ ರಕ್ತಕಣಗಳು, ಪ್ಲೇಟ್‌ಲೆಟ್‌ಗಳು ಸಿಗದೆ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ರೋಗಿಗಳ ಸಂಬಂಧಿಗಳು ರಕ್ತ ಲಭ್ಯವಿರುವ ರಕ್ತನಿಧಿ ಕೇಂದ್ರಗಳನ್ನು ಹುಡುಕುತ್ತಾ ಅಲೆದಾಡುತ್ತಿದ್ದಾರೆ.

ಇಳಿಕೆ ಪ್ರಮಾಣ ಮುಂದುವರಿದರೆ ಕಷ್ಟ: ರಾಜ್ಯ ಪ್ರಮುಖ ರಕ್ತ ನಿಧಿ ಸಂಸ್ಥೆಯಾದ ರೆಡ್‌ ಕ್ರಾಸ್‌ ಸಂಸ್ಥೆಯಲ್ಲಿ ಮಾಸಿಕ 4000 ಸಾವಿರ ಯುನಿಟ್‌ ರಕ್ತ ಸಂಗ್ರಹವಾಗುತ್ತಿತ್ತು. ಮಾರ್ಚ್‌ ಆರಂಭದಿಂದ ಸಾಕಷ್ಟು ಇಳಿಕೆ ಕಂಡಿದೆ. ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ ನಿತ್ಯ 120 ರಿಂದ 150 ಯುನಿಟ್‌ ರಕ್ತ ಸಂಗ್ರಹವಾಗುತ್ತಿತ್ತು, ಒಂದು ವಾರದಿಂದ ಆ ಪ್ರಮಾಣ 20-30ಕ್ಕೆ ಇಳಿಕೆಯಾಗಿದೆ. ಇದೇ ಪರಿಸ್ಥತಿ ಬೆಂಗಳೂರಿನ 20ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ರಕ್ತನಿಧಿಕೆಂದ್ರಗಳಲ್ಲಿ ಇದೆ.

ಅದೇ ರೀತಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ರಕ್ತನಿಧಿ ಕೇಂದ್ರಗಳಲ್ಲೂ ಸ್ವಯಂಪ್ರೇರಿತ ದಾನಿಗಳ ಸಂಖ್ಯೆ ಅರ್ಧದಷ್ಟು ಕುಸಿದಿದೆ ಎಂಬ ಮಾಹಿತಿ ಸ್ಥಳೀಯ ಸಿಬ್ಬಂದಿಗಳಿಂದ ಲಭ್ಯವಾಗಿದೆ. ಸದ್ಯ ಬಹುತೇಕ ರಕ್ತನಿಧಿ ಕೇಂದ್ರಗಳು ಹಿಂದಿನ ತಿಂಗಳಿನಲ್ಲಿ ಸಂಗ್ರಹವಿದ್ದ ರಕ್ತವನ್ನು ಬಳಿಸಿಕೊಂಡು ಕೊರತೆ ಸ್ಥಿತಿ ನಿಭಾಯಿಸುತ್ತಿವೆ ಎನ್ನುತ್ತಾರೆ ರೆಡ್‌ ಕ್ರಾಸ್‌ ಸಂಸ್ಥೆ ಪ್ರಧಾನ ಕಾರ್ಯದರ್ಶಿ ನವೀನ ಚಂದ್ರಶೇಖರ್‌.

Advertisement

ರಕ್ತದಾನ ಶಿಬಿರಕ್ಕೆ ಸರ್ಕಾರದ ಆದೇಶ ಅಡ್ಡಿ: ರಾಜ್ಯದಲ್ಲಿ ಯಾವುದೇ ಸಭೆ ಸಮಾರಂಭ, ಶಿಬಿರ ಸಮ್ಮೇಳನಗಳು ನಡೆಸಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಯಾರೂ ರಕ್ತದಾನ ಶಿಬಿರಗಳು ನಡೆಸುತ್ತಿಲ್ಲ. ನಿಗದಿಯಾಗಿದ್ದ ಶಿಬಿರಗಳೂ ಮುಂದಿನ ತಿಂಗಳಿಗೆ ಮುಂದೂಡಲಾಗುತ್ತಿದೆ. ರಕ್ತದಾನ ಶಿಬಿರಗಳಿಂದಲೇ ಶೇ.50 ರಷ್ಟು ರಕ್ತ ಸಂಗ್ರಹವಾಗುತ್ತಿದ್ದರಿಂದ ಸಾಕಷ್ಟು ಹಿನ್ನಡೆಯಾಗುತ್ತಿದೆ ಎಂಬುದು ರಕ್ತನಿಧಿ ಕೇಂದ್ರಗಳ ಮುಖ್ಯಸ್ಥರ ಅಭಿಪ್ರಾಯ.

ಥಲಸ್ಸೇಮಿಯಾದಂತಹ ರೋಗಿಗಳಿಗೆ ತೀವ್ರ ಸಮಸ್ಯೆ: ಥಲಸ್ಸೇಮಿಯಾದಂತಹ ರಕ್ತಸಂಬಂಧಿ ರೋಗಗಳಿಂದ ಬಳಲುತ್ತಿರವವರಿಗೆ ನಿತ್ಯ ಒಂದು ಅಥವಾ ಎರಡು ಯುನಿಟ್‌ ರಕ್ತ ಅಗತ್ಯವಿರುತ್ತದೆ. ಸದ್ಯ ಬೆಂಗಳೂರಿನಲ್ಲಿ ಎರಡು ಥಲಸ್ಸೇಮಿಯಾ ಡೇ ಕೇರ್‌ಗಳಿಗೆ ರಕ್ತಕೊರತೆ ಎದುರಾಗಿದೆ. ಚಾಮರಾಜಪೇಟೆಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರವು ಥಲಸ್ಸೇಮಿಯಾದಿಂದ ಬಳಲುತ್ತಿರುವ ಮಕ್ಕಳ ಡೇ ಕೇರ್‌ಗೆ ನಿತ್ಯ 40 ರಿಂದ 50 ಯುನಿಟ್‌ ರಕ್ತ ನೀಡುತ್ತಿದ್ದು, ಸದ್ಯ ಕೊರತೆ ಹಿನ್ನೆಲೆ ಅಗತ್ಯ ಪ್ರಮಾಣದಲ್ಲಿ ಪೂರೈಸಲು ಆಗುತ್ತಿಲ್ಲ. ಬೆಂಗಳೂರು ಮೆಡಿಕಲ್‌ ಸರ್ವಿಸ್‌ ಟ್ರಸ್ಟ್‌ನ ಟಿಟಿಕೆ ಬ್ಲಿಡ್‌ ಬ್ಯಾಂಕ್‌ನಲ್ಲೂ ಈ ಡೇ ಕೇರ್‌ ವ್ಯವಸ್ಥೆ ಇದ್ದು, ಇಲ್ಲಿಯೂ ರಕ್ತದ ಕೊರತೆ ಎದುರಾಗಿದೆ.

ಕೊರೊನಾ ಭೀತಿಯಿಂದ ಶಿಬಿರಗಳು ನಡೆಯುತ್ತಿಲ್ಲ. ರಕ್ತ ಸಂಗ್ರಹ ತೀವ್ರ ಇಳಿಕೆ ಕಂಡಿದೆ. ರಕ್ತದ ಕೊರತೆಯಿಂದ ಥಲಸ್ಸೇಮಿಯಾದಂತಹ ರೋಗಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ದಾನಿಗಳು ಭಯಬಿಟ್ಟು ಮುಂದೆ ಬರಬೇಕು.
-ನರಸಿಂಹ ಶಾಸ್ತ್ರಿ, ಸಂಯೋಜಕರು, ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ

ಭವಿಷ್ಯದಲ್ಲಿ ತೊಂದರೆಯಾಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಚಿಕ್ಕ ಪ್ರಮಾಣದಲ್ಲಿ ರಕ್ತದಾನ ಶಿಬಿರ ನಡೆಸಲು ಸೂಚಿಸಲಾಗಿದೆ. ಎಲ್ಲಾ ರಕ್ತನಿಧಿ ಕೇಂದ್ರಗಳು ಸುರಕ್ಷಿತವಾಗಿದ್ದು, ಸಿಬ್ಬಂದಿಗಳಿಗೂ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
-ಡಾ.ಜಯರಾಜ್‌, ಉಪನಿರ್ದೇಶಕ, ಕೆಎಸ್‌ಎಪಿಎಸ್‌

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next