Advertisement

ಹೆಚ್ಚುತ್ತಿದೆ ವಿದೇಶಿ ವ್ಯಾಮೋಹ

03:43 PM Oct 30, 2017 | |

ದಾವಣಗೆರೆ: ಇಂದಿನ ಯುವ ಜನಾಂಗದಲ್ಲಿ ನಮ್ಮ ತನದ ಪರಿಚಯ, ವಿವೇಕ ಇಲ್ಲವಾಗಿ, ವಿದೇಶಿ ವ್ಯಾಮೋಹಕ್ಕೆ 
ಬಲಿಯಾಗುತ್ತಿದ್ದಾರೆ ಎಂದು ಬೇಲೂರು ರಾಮಕೃಷ್ಣ ಮಿಷನ್‌, ಅದ್ವೈತಾಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌ ಹೇಳಿದ್ದಾರೆ.

Advertisement

ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮಕೃಷ್ಣ ಆಶ್ರಮದಿಂದ ಸಹೋದರಿ ನಿವೇದಿತಾರ 150ನೇ ಜನ್ಮದಿನದ ನಿಮಿತ್ತ ಭಾನುವಾರ ನಡೆದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ತುತ್ತಾಗಿದ್ದಾರೆ. ಆಂತರಿಕ ಚೇತನ, ವಿವೇಕದ ಜಾಗೃತಿ ಕಳೆದುಕೊಂಡಿದ್ದಾರೆ. ಇದರಿಂದ ಆಚೆ ಬಂದು ಸ್ವದೇಶಿ ಹಿರಿಮೆಯನ್ನು ಎತ್ತಿಹಿಡಿಯಬೇಕು ಎಂದರು. ನಮ್ಮ ಸನಾತನ ಪರಂಪರೆಗಳ ಮಹತ್ವ ಇದೀಗ  ದೇಶಿಗರಿಗೆ ಅರ್ಥವಾಗುತ್ತಿವೆ. ಯೋಗದ ಮಹತ್ವನ್ನು ನಾವು ಯಾರೂ ಅರಿತಿರಲಿಲ್ಲ. ಇದೀಗ ವಿದೇಶಿಯರು ಮನಗಂಡಿದ್ದಾರೆ. ಅದನ್ನು ನೋಡಿ ನಾವೀಗ ಯೋಗ ಮಾಡಲು ಮುಂದಾಗುತ್ತಿದ್ದೇವೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮ ತನವನ್ನು ನಾವೇ ಕಡೆಗಣಿಸುತ್ತಿದ್ದೇವೆ. ಸಹೋದರಿ ನಿವೇದಿತಾರ ಜೀವನ ಸಂದೇಶ ಓದಿ, ಅವರ ಆರ್ದಶ, ತತ್ವಗಳನ್ನು ಅರಿತರೆ ನಮ್ಮ ತನದ ಹೆಮ್ಮೆ ನಮಗೆ ತಿಳಿಯುತ್ತದೆ ಎಂದು ಹೇಳಿದರು. 

ಎಲ್ಲರೂ ಶಿಕ್ಷಣವೆಂಬ ಬಂಧನದಲ್ಲಿಯೇ ಉಳಿದಿದ್ದಾರೆ. ಅದಕ್ಕಿಂತ ಹೆಚ್ಚಿನ ವಿಚಾರ ತಿಳಿಯುವ ಮನಸ್ಥಿತಿಯೇ ನಮ್ಮ 
ಯುವಜನಾಂಗದಲ್ಲಿ ಸಿದ್ಧಗೊಂಡಿಲ್ಲ. ಇಡೀ ಪ್ರಪಂಚವೇ ಭಾರತದ ಮಹತ್ವ ಅರಿತು ಹೆಮ್ಮೆಯಿಂದ ನೋಡುತ್ತದೆ. ಆದರೆ, ಭಾರತೀಯರಿಗೆ ನಮ್ಮ ದೇಶ, ಮಹತ್ವದ ಅರಿವಿನ ಕೊರತೆ ಕಂಡು ಬರುತ್ತಿದೆ ಎಂದು ವಿಷಾದಿಸಿದರು. ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್‌ ಮಾತನಾಡಿ, ದಾಸ್ಯತ್ವದ ಮನೋಭಾವದಿಂದ ಇಂದಿನ ಯುವಜನತೆ ಸಮೂಹ ಸನ್ನಿಗೆ ಒಳಗಾದವರಂತಾಗಿದ್ದಾರೆ. ಇಂತಹ ಮನೋಭಾವ ತೊಡೆದುಹಾಕಿ ಶ್ರೇಷ್ಠ ವ್ಯಕ್ತಿಗಳ ಸಾಧನೆ, ಶ್ರಮ, ಉಪದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ದೇಶ, ಭಾಷೆ ಬೇರೆಯಾದರೂ ಪರಿಪೂರ್ಣ ಭಾರತೀಯರಾಗಿ ಸೋದರಿ ನಿವೇದಿತಾರು ದೇಶ ಸೇವೆಗೈದಿದ್ದಾರೆ. ಆದರೆ, ನಾವು ಮಾತ್ರ ಪಾಶ್ಚತ್ಯ ಸಂಸ್ಕೃತಿಗೆ ಮಾರುಹೋಗಿದ್ದೇವೆ. ನಮ್ಮನ್ನು, ನಮ್ಮ ದೇಶವನ್ನು ನಾವೇ ಗೌರವಿಸಿಕೊಳ್ಳದಿದ್ದರೆ ಬೇರಾರೂ ಗೌರವಿಸಲು ಸಾಧ್ಯ ಎಂದು ಪ್ರಶ್ನಿಸಿದರು.  ನಾವು, ನಮ್ಮ ಕೆಲಸ, ನಮ್ಮ ಭಾಷೆ, ದೇಶವನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ವಿದೇಶದಲ್ಲಿ ನೆಲಸಿರುವ ನಮ್ಮ ಭಾರತೀಯರ ಜಾಣ್ಮೆ, ಬುದ್ದಿಯನ್ನು ಮಾತ್ರ ಬಳಸಿಕೊಂಡು ತಮ್ಮ ಕೆಲಸ ನಿರ್ವಹಿಸುತ್ತಾರೆ. ಆದರೆ, ಎಂದಿಗೂ ಅವರನ್ನು ತಮ್ಮ ಸರಿಸಮ ಗೌರವ ನೀಡುವುದಿಲ್ಲ. ಇದೇ ಸ್ವಾಭಿಮಾನ ಭಾರತೀಯರಿಗೆ ಇಲ್ಲದಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು. ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ
ಜಿತಕಾಮಾನಂದಜೀ ಮಹಾರಾಜ್‌ ಅಧ್ಯಕ್ಷತೆ ವಹಿಸಿದ್ದರು.

ಊಟಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ರಾಘವೇಶಾನಂದಜೀ, ದಾವಣಗೆರೆ ರಾಮಕೃಷ್ಣ ಮಠದ ಅಧ್ಯಕ್ಷ ಆರ್‌.ಆರ್‌. ರಮೇಶ್‌ ಬಾಬು, ಹೇಮಂತ್‌ ಮಹಾರಾಜ್‌, ಕೊಡಗಿನ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪನಂದಜೀ ಮಹಾರಾಜ್‌ ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next