Advertisement

ಗುಜ್ಜರಕೆರೆಯ ನೀರಿನಲ್ಲಿ ಹೆಚ್ಚುತ್ತಿದೆ ಬ್ಯಾಕ್ಟೀರಿಯ ಪ್ರಮಾಣ!

05:07 AM Feb 07, 2019 | |

ಮಹಾನಗರ : ಒಂದು ಕಾಲದಲ್ಲಿ ತೀರ್ಥವಾಗಿ ಬಳಕೆಯಾಗುತ್ತಿದ್ದ ಗುಜ್ಜರಕೆರೆ ನೀರು ಈಗ ಆ ಭಾಗದ ಜನರ ಪಾಲಿಗೆ ವಿಷವಾಗಿ ಬದಲಾಗುತ್ತಿದೆ. ಹೌದು ವರ್ಷದಿಂದ ವರ್ಷಕ್ಕೆ ಈ ಕೆರೆಯ ನೀರು ಹೆಚ್ಚು ಮಲಿನವಾಗುತ್ತಿದೆ.

Advertisement

ಮಾತ್ರವಲ್ಲದೆ ಕೆರೆಯ ಆಸುಪಾಸಿನ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲದಂತಾಗಿದೆ. ಕೆರೆಯ ನೀರಿನಲ್ಲಿ ಇರುವಷ್ಟೇ ಬ್ಯಾಕ್ಟೀರಿಯಗಳು ಆಸುಪಾಸಿನ ಮನೆಗಳ ಬಾವಿಯಲ್ಲೂ ಇದೆ. ಇದರಿಂದ ಸ್ಥಳೀಯರು ರೋಗ ಭೀತಿಗೊಳಗಾಗಿದ್ದಾರೆ.

ಬ್ಯಾಕ್ಟೀರಿಯ ಪ್ರಮಾಣ ಏರಿಕೆ
ಗುಜ್ಜರಕೆರೆಯ ಸಮೀಪದಲ್ಲಿರುವ ಒಳ ಚರಂಡಿ, ಚರಂಡಿ ಲೋಪದೋಷಗಳಿಂ ದಾಗಿ ಮಲಿನ ನೀರು ಸೋರಿಕೆಯಾಗಿ ಗುಜ್ಜರಕೆರೆಯ ಅಂತರ್ಜಲದೊಂದಿಗೆ ಬೆರೆತು ಕೆರೆ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಹಲವಾರು ವರ್ಷಗಳಿಂದಾಗಿ ಗುಜ್ಜರಕೆರೆ ಮತ್ತು ಆಸುಪಾಸಿನ ಬಾವಿ ನೀರು ಕುಡಿಯಲು ಯೋಗವಾಗಿಲ್ಲ. ಸ್ಥಳೀಯರು ಇಲ್ಲಿನ ಬಾವಿ ನೀರನ್ನು ಪರೀಕ್ಷೆ ಗೊಳಪಡಿಸಿದಾಗ ವರ್ಷದಿಂದ ವರ್ಷಕ್ಕೆ ಬ್ಯಾಕ್ಟೀರಿಯ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿನ ನೀರನ್ನು 2014, 2015, 2016ರಲ್ಲಿ ನಿರಂತರವಾಗಿ ಪರೀಕ್ಷೆಗೊಳಪಡಿಸಿದಾಗ 1,100ರಷ್ಟು ಬ್ಯಾಕ್ಟೀರಿಯ ಪ್ರಮಾಣ ಇತ್ತು. 2019 ಜನವರಿಯಲ್ಲಿ ಪರಿ ಶೀಲಿಸಿದಾಗ ಬ್ಯಾಕ್ಟಿರಿಯಾ ಪ್ರಮಾಣ 1,600 ಏರಿಕೆ ಯಾಗಿದೆ. ತಜ್ಞರ ಪ್ರಕಾರ ಸಾಮಾನ್ಯ ವಾಗಿ ನೀರು ಪರೀಕ್ಷೆ ಮಾಡುವಾಗ ಅದರಲ್ಲಿ ರುವ ಟೋಟಲ್‌ ಕಾಲಿಫಾರ್ಮ್ (ಎಲ್ಲ ರೀತಿಯ ಬ್ಯಾಕ್ಟೀರಿಯಾ) ಮತ್ತು ಫೀಕಲ್‌ ಕಾಲಿ ಫಾರಂ ನ್ನು (ಒಳಚರಂಡಿ ಮತ್ತು ಶೌಚಾಲಯ ತ್ಯಾಜ್ಯ) ನೋಡಲಾಗುತ್ತದೆ.

100 ಮೀ.ಲೀ ನೀರಿನಲ್ಲಿ ಟೋಟಲ್‌ ಕಾಲಿಫಾರ್ಮ್ ಪ್ರಮಾಣವು ಶೂನ್ಯ ಇದ್ದರೆ ಅತ್ಯುತ್ತಮ ನೀರು, 1-3 ಇದ್ದರೆ ಸಮಾ ಧಾನಕರ, 4-10 ಇದ್ದರೆ ಅಷ್ಟೊಂದು ಉತ್ತಮವಲ್ಲ ಮತ್ತು 10ಕ್ಕಿಂತ ಮೇಲೆ ಇದ್ದರೆ ಕುಡಿಯಲು ಯೋಗ್ಯವಲ್ಲದ ನೀರು ಎಂದು ಪರಿಗಣಿಸಲಾಗುತ್ತದೆ. ಫೀಕಲ್‌ ಕಾಲಿಫಾರ್ಮ್ ಶೂನ್ಯ ಪ್ರಮಾಣ ದಲ್ಲಿದ್ದರೆ ಮಾತ್ರ ಕುಡಿಯಲು ಯೋಗ್ಯವಾಗಿರುತ್ತದೆ. ಆದರೆ ಆಸುಪಾಸಿನ ಬಾವಿಗಳ ನೀರಿನಲ್ಲಿ ಈ ಎರಡೂ ಪರೀಕ್ಷೆಗಳಲ್ಲಿಯೂ 1,600 ಪ್ರಮಾ ಣದಲ್ಲಿ ಬ್ಯಾಕ್ಟೀರಿಯಾ ಕಂಡು ಬಂದಿವೆ. 100 ಮಿಲಿ ಲೀಟರ್‌ ನೀರನ್ನು ಪರೀಕ್ಷೆಗೆ ಬಳಸಲಾಗಿತ್ತು.

ಆಸುಪಾಸಿನ ಬಾವಿ ನೀರಿನಲ್ಲಿ ಅಡಕವಾಗಿರುವ ಬ್ಯಾಕ್ಟೀರಿಯಾ ಪ್ರಮಾಣ ನೋಡಿದರೆ ಅದನ್ನು ಹಾಗೇ ಕುಡಿಯುವುದಿರಲಿ, ಕುದಿಸಿ ಆರಿಸಿ ಕುಡಿಯುವುದಕ್ಕೂ ಯೋಗ್ಯವಲ್ಲ ಎನ್ನುತ್ತಾರೆ ತಜ್ಞರು. ಈ ಪರಿಸರದಲ್ಲಿ ಮಲೇರಿಯಾದಂತಹ ರೋಗಗಳು ಸಾಮಾನ್ಯ. ಇನ್ನು ಈ ನೀರನ್ನು ಕುದಿಸದೆ ಸೇವಿಸಿದರೆ ಇನ್‌ಫೆಕ್ಷನ್‌ಗಳು, ಡಯರಿಯಾ, ವಿಷಮಶೀತ ಜ್ವರ, ರಕ್ತಭೇದಿ, ಅತಿಸಾರ ಭೇದಿಯಂತಹ ಕಾಯಿಲೆ ಬರುವುದು ಖಂಡಿತಾ. ಐದು ವರ್ಷಗಳೊಳಗಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ತಣ್ಣೀರನ್ನು ನೀಡಲೇಬಾರದು ಎಂದು ತಜ್ಞರು ಹೇಳುತ್ತಾರೆ.

Advertisement

ಹಂತ ಹಂತವಾಗಿ ಇತ್ಯರ್ಥ
ಗುಜ್ಜರಕೆರೆ ಸಮಸ್ಯೆಯನ್ನು ಮನಗಂಡು ಈಗಾಗಲೇ ಪಾಲಿಕೆ ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕಾಮಗಾರಿಯು ಹಂತ ಹಂತವಾಗಿ ನಡೆಯುತ್ತಿದೆ. ಇದು ಪೂರ್ಣವಾದ ಬಳಿಕ ಗುಜ್ಜರಕೆರೆಯ ಸಮಸ್ಯೆ ಇತ್ಯರ್ಥವಾಗುವ ನಿರೀಕ್ಷೆ ಇದೆ.
– ಭಾಸ್ಕರ್‌ ಕೆ., ಮೇಯರ್‌

ಒಳಚರಂಡಿ ಕಾಮಗಾರಿಗೆ ಒತ್ತು
60 ವರ್ಷಗಳ ಹಿಂದಿನ ಹಳೆಯ ಒಳಚರಂಡಿ ಸಂಪರ್ಕ ಇದ್ದುದರಿಂದ ಅಲ್ಲಲ್ಲಿ ಪೈಪ್‌ ತುಂಡಾಗಿ ಒಳಚರಂಡಿ ನೀರು ಭೂಮಿಗೆ ಸೇರುತ್ತಿತ್ತು. ಇದು ಕೆರೆಯ ಅಂತರ್ಜಲದೊಂದಿಗೆ ಬೆರೆತು ನೀರು ಕಲುಷಿತಗೊಳ್ಳುತ್ತಿತ್ತು. ಪ್ರಸ್ತುತ ಯುಜಿಡಿ ಅನುದಾನದಲ್ಲಿ ಗುಜ್ಜರೆಕೆರೆ ಆಸುಪಾಸಿನಲ್ಲಿ ಒಳಚರಂಡಿ, ಕಾಮಗಾರಿ ನಡೆಯುತ್ತಿದೆ.
– ರತಿಕಲಾ, ಪಾಲಿಕೆ ಸದಸ್ಯೆ

ವರ್ಷದಿಂದ ವರ್ಷಕ್ಕೆ ಬ್ಯಾಕ್ಟೀರಿಯಾ ಪ್ರಮಾಣ ಏರಿಕೆ
ಗುಜ್ಜರಕೆರೆ ನೀರು ಕಲುಷಿತವಾಗಿದೆ ಎಂದು ಸ್ಥಳೀಯರು ಹಲವು ಬಾರಿ ಜನಪ್ರತಿನಿಧಿಗಳ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮಾಜಿ ಶಾಸಕರು ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗೆ ಮಾಡಿದ್ದಾರೆ. ಆದರೆ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಆಗದೆ ಕೆರೆ ಅಭಿವೃದ್ಧಿ ಅಸಾಧ್ಯ. ವರ್ಷದಿಂದ ವರ್ಷಕ್ಕೆ ಬ್ಯಾಕ್ಟಿರೀಯಾ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ರೋಗ ಭೀತಿ ಕಾಡುತ್ತಿದೆ. 
– ನೇಮು ಕೊಟ್ಟಾರಿ,
ಕಾರ್ಯದರ್ಶಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next