ಮಂಗಳೂರು: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ)ಯಲ್ಲಿ 2024-25ರ ವೇಳೆಗೆ ದೇಶದ ಮೀನು ಉತ್ಪಾದನೆಯನ್ನು 22 ದಶಲಕ್ಷ ಮೆಟ್ರಿಕ್ ಟನ್ ಹಾಗೂ ಮೀನು ರಫ್ತು ಆದಾಯ ಪ್ರಮಾಣವನ್ನು ಒಂದು ಲಕ್ಷ ಕೋಟಿ ರೂ.ಗೇರಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ) ಹಿರಿಯ ಸಲಹೆಗಾರ ಡಾ| ರಾಜೀವ್ ರಂಜನ್ ಹೇಳಿದ್ದಾರೆ.
ಸಹಕಾರಿ ವಲಯ ರಫ್ತು ಉತ್ತೇಜನ ಕೌನ್ಸಿಲ್, ಎನ್‌ಸಿಡಿಸಿ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಬಿ), ಕೇಂದ್ರ ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಮೀನು ರಫ್ತು ಉತ್ತೇಜನ ಕುರಿತು ನಗರದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ಮೀನುಗಾರಿಕೆ ಪ್ರತಿನಿಧಿಗಳಿಗೆ ಶನಿ ವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಜಿಡಿಪಿಯಲ್ಲಿ ಸಹಕಾರಿ ಕ್ಷೇತ್ರದ ಭಾಗೀದಾರಿಕೆ ಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌನ್ಸಿಲ್ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೀನುಗಾರಿಕೆ ವಲಯದಲ್ಲಿ ರಫ್ತು ವ್ಯವಹಾರಕ್ಕೆ ಎನ್‌ಡಿಸಿಸಿ ಅಗತ್ಯ ನೆರವು ನೀಡುತ್ತಿದೆ ಎಂದು ಸಹಕಾರಿ ವಲಯ ರಫ್ತು ಉತ್ತೇಜನ ಕೌನ್ಸಿಲ್ ಅಧ್ಯಕ್ಷ ಹಾಗೂ ಎನ್‌ಸಿಡಿಸಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಕುಮಾರ್ ನಾಯಕ್ ಹೇಳಿದರು.
ಮೀನುಗಾರಿಕೆಯಲ್ಲಿ ಸಹಕಾರ ಹೆಚ್ಚಿಸಬೇಕು ಎಂದು ಸಹಕಾರ ಭಾರತಿಯ ಮಾಜಿ ಅಧ್ಯಕ್ಷ ರಮೇಶ್ ವೈದ್ಯ ಹೇಳಿದರು. ಎನ್‌ಎಫ್‌ಡಿಬಿಯ ರಾಜೇಂದ್ರ ನಾೖಕ್, ರಾಜ್ಯ ಮೀನುಗಾರಿಕೆ ಇಲಾಖೆ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಮೀನು ಗಾರಿಕೆ ಕಾಲೇಜಿನ ಡೀನ್ ಡಾ| ಶಿವ ಕುಮಾರ್ ಮಗದ, ಸಿಎಂಎಫ್‌ಆರ್‌ಐಯ ಡಾ| ಪ್ರತಿಭಾ ಉಪನ್ಯಾಸ ನೀಡಿದರು. ಸಹಕಾರಿ ವಲಯ ರಫ್ತು ಉತ್ತೇಜನ ಕೌನ್ಸಿಲ್, ಎನ್‌ಸಿಡಿಸಿ ನಿರ್ದೇಶಕ ಪ್ರಭು ಪೌಲ್‌ರಾಜ್ ಸ್ವಾಗತಿಸಿದರು. ಸಲಹೆಗಾರ ಡಾ| ಕೆ.ಟಿ. ಚನ್ನೇಶಪ್ಪ ನಿರೂಪಿಸಿದರು.
ಮೀನು ಸಂಸ್ಕರಣ ತಂತ್ರಜ್ಞಾನ ಪಾರ್ಕ್ ಅಗತ್ಯ
ಕರ್ನಾಟಕವು 320 ಕಿ.ಮೀ. ಸಮುದ್ರ ತೀರವನ್ನು ಹೊಂದಿದೆ. ಗಣನೀಯ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಮೀನು ರಫ್ತಿಗೂ ವಿಪುಲ ಅವಕಾಶವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಮಾನದಂಡಕ್ಕೆ ಅನುಗುಣವಾಗಿ ಮೀನು ಸಂಸ್ಕರಣೆಗೆ ಪೂರಕವಾಗಿ ಕರಾವಳಿಯಲ್ಲಿ ಮೀನು ಸಂಸ್ಕರಣ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯ ಅಗತ್ಯವಿದೆ ಎಂದು ಮೀನುಗಾರಿಕೆ ಕಾಲೇಜಿನ ಡೀನ್ ಡಾ| ಶಿವಕುಮಾರ್ ಮಗದ ಅಭಿಪ್ರಾಯಪಟ್ಟರು.