ಕುಷ್ಟಗಿ: ರಾಜ್ಯದಲ್ಲಿ ಗಂಗಾವತಿ, ಶಿರಗುಪ್ಪ, ಸಿಂಧನೂರು ನೀರಾವರಿ ಪ್ರದೇಶಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಯೂರಿಯಾ, ಡಿಎಪಿ ಇನ್ನಿತರ ವಿಷಗಳನ್ನು ಬಳಸಲಾಗುತ್ತಿದೆ ಎಂದು ಕಲಬುರಗಿಯ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ವಜ್ರಬಂಡಿ ಕ್ರಾಸ್‌ನಲ್ಲಿರುವ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರ ತೋಟದಲ್ಲಿ ಶ್ರೀ ಕೊತ್ತ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಕಲಬುರಗಿ ವಿಕಾಸ ಅಕಾಡೆಮಿ ಆಶ್ರಯದಲ್ಲಿ ನಡೆದ ಸಾವಯವ ಸಮಗ್ರ ಕೃಷಿ ಸಂತೃಪ್ತ ರೈತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಷ್ಟು ದಿನಗಳವರೆಗೆ ಪಂಜಾಬ್‌ನಲ್ಲಿ ಕ್ಯಾನ್ಸರ್ ರೋಗಿಗಳು ಹುಟ್ಟುತ್ತಿದ್ದರು. ಇದೀಗ ಗಂಗಾವತಿ, ಸಿಂಧನೂರ, ನೀರಾವರಿ ಪ್ರದೇಶಗಳಿಂದ ಮನೆ ಮನೆಗೆ ಒಬ್ಬರು ಕ್ಯಾನ್ಸರ್ ರೋಗಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಭೂಮಿಗೆ ವಿಷ ಹಾಕುವುದಕ್ಕೂ ಮಿತಿ ಇದ್ದು, ಮಿತಿ ಮೀರಿದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭೂಮಿಯನ್ನು ಉಳಿಸಬೇಕಾದರೆ ಗೋಕೃಪಾಮೃತ ಏಕಮಾತ್ರವಾಗಿದೆ. ಆದರೆ ನಮ್ಮ ರೈತರು ಮಾರುಕಟ್ಟೆಯಿಂದ ತಂದು ಸಿಂಪಡಿಸುವುದು ರೂಢಿಯಾಗಿದ್ದು, ತಾವೇ ತಯಾರಿಸಲು ಮುಂದಾಗುವುದಿಲ್ಲ. ಊರಲ್ಲಿ ಎಲ್ಲ ರೈತರಿಗೆ ಗೋಕೃಪಾಮೃತ ತಯಾರಿಸಲು ಸಾಧ್ಯವಾಗದೇ ಇದ್ದರೆ ಊರಲ್ಲಿ ಯಾರಿಗಾದರೂ ಜವಾಬ್ದಾರಿ ವಹಿಸಿ ಅವರಿಂದ ಪಡೆದುಕೊಳ್ಳಿ. ಆ ರೈತನು ಬದುಕುತ್ತಾನೆ ನಿಮ್ಮ ಕೆಲಸವೂ ಆಗುತ್ತದೆ.
ದೇಶದಲ್ಲಿ ರಾಸಾಯನಿಕ ಔಷ ಧಿಯ ಹೆಚ್ಚುವರಿ ಖರ್ಚು ತಗ್ಗಿಸಲು ಗೋಕೃಪಾಮೃತವಾಗಿದೆ. ಕಬ್ಬು, ಭತ್ತ ಇತರೆ ಬೆಳೆಗೆ ಪ್ರಯೋಗ ಮಾಡಲಾಗಿದ್ದು ಉತ್ತಮ ಬೆಳೆ ಬಂದಿದೆ ಎಂದರು. ಸಂಸದ ಕರಡಿ ಸಂಗಣ್ಣ ಮಾತನಾಡಿ, ಇತ್ತೀಚಿಗೆ ಕೃಷಿಕರಿಗೆ ಬೆಲೆ ಇಲ್ಲ ಎನ್ನುವ ಕೀಳರಿಮೆ ಇದೆ. ಕೃಷಿಗೆ ಇರುವ ಗೌರವ, ಪ್ರಾಧಾನ್ಯತೆ ಯಾರಿಗೂ ಇಲ್ಲ. ಯಾರು ಕೃಷಿಯತ್ತ ಮುಖ ಮಾಡುವವರು ಕೇವಲ ವ್ಯಕ್ತಿ ಅಲ್ಲ ದೇವರು ಎಂದರೆ ತಪ್ಪಗಲಾರದು ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಮಾತನಾಡಿ, ವಿದ್ಯಾವಂತರಿಗೆ ದುಶ್ಚಟ ಎನ್ನುವ ರೋಗದಿಂದ ಬಿಡುಗಡೆಯಾದರೆ ಮಾತ್ರ ಸ್ವಲ್ಪ ಮಟ್ಟಿನ ಸಂತೃಪ್ತರಾಗುವ ಸಾಧ್ಯತೆಗಳಿವೆ. ಯಾಕೆಂದರೆ ಈ ದುಶ್ಚಟದಿಂದ ಯಾರೂ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ಸರ್ಕಾರ ಇದಕ್ಕೆ ಬೆಂಬಲಿಸುತ್ತಿದೆ ಎಂದು ವಿಷಾದಿಸಿದರು. ನವದೆಹಲಿ ಐಸಿಎಆರ್ ನಿಕಟಪೂರ್ವ ನಿರ್ದೇಶಕ ಡಾ| ಎಸ್.ಎ. ಪಾಟೀಲ ಮಾತನಾಡಿ,ಒಕ್ಕಲುತನ ಎಲ್ಲ ತತ್ವಗಳಿಗೆ ಮೂಲವಾಗಿದೆ. ರೈತ ಮೆಹಂದಿ ಬೆಳೆದರೆ ಮೆಹಂದಿ ಹಾಕುವವರು ಶ್ರೀಮಂತರಾಗಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರಗಿಂತ ಸ್ವೀಟ್ ಕಾರ್ನ್, ಹುರಿದು ಮಾರುವವರು ಹೆಚ್ಚು ಹಣಗಳಿಸುತ್ತಿರುವುದು ಇಂದಿನ ಪರಿಸ್ಥಿತಿಯಾಗಿದೆ ಎಂದರು.
ರೋಣ ಗುಲಗಂಜಿಮಠದ ಗುರುಪಾದ ದೇವರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಶಿವರಾಮೇಗೌಡ, ಐಎಫ್‌ಎಸ್ ಅಧಿಕಾರಿ ಕೃಷ್ಣ ಉದುಪುಡಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲಕ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವಿ.ಎಸ್. ಭೂಸನೂರುಮಠ, ಪ್ರಭುರಾಜ ಕಲಬುರಗಿ, ವಿ.ಶಾಂತರಡ್ಡಿ, ಲೀಲಾ ಕಾರಟಗಿ ಮತ್ತೀತರಿದ್ದರು.
ಸಮಗ್ರ ಕೃಷಿ ಮಾಡುವವರು ಜಗತ್ತನ್ನು ಸಾಕುತ್ತಾರೆ ತಾವೂ ಬದುಕುತ್ತಾರೆ. ಈ ರೈತರು ಕೇವಲ ಮನುಷ್ಯರಿಗೆ ಮಾತ್ರ ಅನ್ನ ಹಾಕುವುದಿಲ್ಲ. ಸಮಸ್ತ ಜೀವ ಸಂಕುಲಕ್ಕೆ ಅನ್ನ ಹಾಕುತ್ತಾರೆ. ದೇವರು ಬಿಟ್ಟ ಮೇಲೆ ಎರಡನೇ ದೇವರು ರೈತರಾಗಿದ್ದಾರೆ. ಏಕ ಬೆಳೆ ಬೆಳೆಯುವುದು ಜೂಜಿನಂತೆ, ಹೀಗಾಗಿ ಸಮಗ್ರ ಕೃಷಿಗೆ ಬಳಸಿಕೊಳ್ಳಬೇಕಿದೆ.
ಬಸವರಾಜ ಪಾಟೀಲ ಸೇಡಂ,
ಅಧ್ಯಕ್ಷರು ಕ.ಕ. ಮಾನವ ಸಂಪನ್ಮೂಲ
ಕೃಷಿ ಸಾಂಸ್ಕೃತಿಕ ಸಂಘ ಕಲಬುರಗಿ