Advertisement

ಪಶು ಆಹಾರ ದರ ಏರಿಕೆಗೆ ವಿರೋಧ; ಚರ್ಮಗಂಟು ರೋಗದ ಕಾಲದಲ್ಲೂ ಬೇಕಿತ್ತಾ?: ಕೆಶಿನ್ಮನೆ ಪ್ರಶ್ನೆ

09:58 AM Oct 23, 2022 | Team Udayavani |

ಶಿರಸಿ: ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಹೈನುಗಾರರ ಗಾಯದ ಮೇಲೆ ಬರೆ ಎಳೆಯುವಂತೆ ಪಶು ಆಹಾರ ದರದ ಏರಿಕೆ ಮಾಡಿದ ಕರ್ನಾಟಕ ಹಾಲು ಮಹಾ ಮಂಡಳದ ತೀರ್ಮಾನಕ್ಕೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಂಕರ ಹೆಗಡೆ ಖಂಡನೆ ವ್ಯಕ್ತಪಡಿಸಿದ್ದಾರೆ.

Advertisement

ಅತಿಯಾಗಿ ಮಳೆಯಾದ ಕಾರಣದಿಂದ ರೈತರು ಬೆಳೆ ನಷ್ಟದ ಸಂಕಟದಲ್ಲಿದ್ದಾರೆ. ಇತ್ತ ಚರ್ಮಗಂಟು ರೋಗ ಕೂಡ ವ್ಯಾಪಕವಾಗುತ್ತಿದೆ. ಇಂಥ ಸಂದರ್ಭದಲ್ಲಿ ದರ ಏರಿಸಿದ್ದು, ಪಶು ಸಂಗೋಪನೆ ಪ್ರೋತ್ಸಾಹಿಸಬೇಕಾದವರೇ ಹೈನುಗಾರರ ಕತ್ತು ಹಿಸುಕುವಂತೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಮೊದಲೇ ಇಲ್ಲ!:

ಮಲೆನಾಡಿನ, ಕರಾವಳಿಯಲ್ಲಿನ ಹೈನುಗಾರರಿಗೆ ಪಶು ಆಹಾರಕ್ಕೆ ಬಳಸುವ ಬೈ ಹುಲ್ಲು, ಜೋಳ ಕೂಡ ಉತ್ತರ ಕರ್ನಾಟಕದಿಂದ ಬರಬೇಕಿದೆ. ಪಶುಗಳಿಗೆ ಬೇಕಾಗುವ ಹುಲ್ಲು ಇಲ್ಲಿ ಮೊದಲೇ ಇಲ್ಲ. ಇಂಥ ಸಂಕಷ್ಟದಲ್ಲಿ ಇರುವ ರೈತರಿಗೆ ಹಾಲಿನ ದರ ಏರಿಸಿ ಸಮಾಧಾನ ಮಾಡುವ ಬದಲು ಪಶು ಆಹಾರಕ್ಕೆ 132 ರೂಪಾಯಿ ಒಮ್ಮೆಲೆ ಏರಿಸುವ ಮೂಲಕ ಬಡವನ ಮೇಲೆ ಕಾದ ಕಬ್ಬಿಣದ ಸಲಾಕೆ ಇಟ್ಟಂತಾಗಿದೆ ಎಂದೂ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಏರಿಸಿದ್ದು ಒಕ್ಕೂಟವಲ್ಲ:

Advertisement

ಬಹಳ ಮಂದಿ ರೈತರು ಧಾರವಾಡ ಹಾಲು ಒಕ್ಕೂಟ, ಪಶು ಆಹಾರ ಏರಿಸಿದೆ ಎಂದು ನಮ್ಮನ್ನು ಪ್ರಶ್ನಿಸಿ, ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪಶು ಆಹಾರ ಉತ್ಪಾದನೆ ಹಾಗೂ ವಿತರಣೆ ಮಾಡುವುದು ಕರ್ನಾಟಕ ಹಾಲು ಮಹಾ ಮಂಡಳಿ. ದರ ಏರಿಕೆಗೂ ನಮಗೂ ಯಾವುದೇ ಸಂಬಂಧವೇ ಇಲ್ಲ ಎಂದಿದ್ದಾರೆ.

ಕೆಎಂಎಫ್ ಎಂದರೆ ಧಾರವಾಡದಂತಹ ಹದಿನಾಲ್ಕು ಒಕ್ಕೂಟಗಳಿಗೆ ಮಹಾ ಮಂಡಳಿ ಆಗಿದೆ. ಅವರೇ ಪಶು ಆಹಾರ ಸಿದ್ಧಪಡಿಸಿ ಕಳಿಸುವುದು. ಧಾರವಾಡ ಹಾಲು ಒಕ್ಕೂಟಕ್ಕೂ ಪಶು ಆಹಾರ ದರ ಏರಿಕೆಗೂ ಸಂಬಂಧ ಇಲ್ಲ. ಒಮ್ಮೆಲೆ ದರ ಏರಿಸಿದ ಕೆಎಂಏಫ್ ನಿಲುವನ್ನು ಖಂಡಿಸುತ್ತೇವೆ. ರೈತರ ಪರವಾದ ಧ್ವನಿಯಾಗಿ ನಾವೂ ನಿಂತಿದ್ದೇವೆ ಎಂದೂ ಹೇಳಿದ್ದಾರೆ.

ಕೇಳಿದ್ದು ಹಾಲಿನ ದರ; ಏರಿಸಿದ್ದು‌ ಪಶು ಆಹಾರ!

ಸರಕಾರಕ್ಕೆ ಕಳೆದ ಐದು ತಿಂಗಳುಗಳಿಂದ ಹಾಲಿನ ದರ ಏರಿಕೆಗೆ ಹೇಳುತ್ತಿದ್ದರೂ ರಾಜ್ಯ ಸರಕಾರ ಉದಾಸೀನ ಮಾಡಿದೆ. ಕೊಳ್ಳುವ ಗ್ರಾಹಕನಿಗೆ ದರ ಏರಿಸಿದರೆ ಆ ದರ ರೈತನಿಗೆ ಕೊಡಲು ಸಾಧ್ಯವಿದೆ. ಆದರೆ ಆ ಅವಕಾಶ ಇನ್ನೂ ಕೂಡಿ ಬಂದಿಲ್ಲ.

ಹಾಲಿನ ದರ ಏರಿಸುವುದು ಬಿಡಿ, ಪಶು ಆಹಾರ ದರ ಏರಿಸಿ ರೈತರು ಹೈನುಗಾರಿಕೆಯಿಂದ ವಿಮುಖ ಆಗುವಂತೆ ಸ್ವತಃ ಕೆಎಂಎಫ್ ಮಾಡುತ್ತಿದೆ ಎಂದೂ ಆತಂಕಿಸಿದರು.

೧32 ರೂ. ಏರಿಕೆ!

ಕೆಎಂಎಪ್ ಗೋಲ್ಡ್‌ 50 ಕೇಜಿ ಚೀಲಕ್ಕೆ 132 ಏರಿಸಿ 1092ರೂ. ಇದ್ದ ಬೆಲೆಯನ್ನು 1224ಗೆ ಜಿಗಿಸಿದೆ. ಕೆಎಂಎಫ್ ಬೈಪಾಸ್ 1218 ದಿಂದ 1350 ರೂ.ಗೆ ಏರಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶು ಆಹಾರವಾಗಿ ಹಿಂಡಿಯೇ ಅಧಿಕ ಬಳಕೆಯಾಗುತ್ತಿದ್ದು, ತಿಂಗಳಿಗೆ ಕೆಎಂಎಫ್ ಒಂದೇ 550 ಟನ್ ಗೂ ಅಧಿಕ ಬೇಡಿಕೆಯಿದೆ. ಹಾಲಿನ ದರಕ್ಕೂ ಪಶು ಆಹಾರದ ದರಕ್ಕೂ ಸಮವಾಗುವಷ್ಟಾಗಿದೆ ಎಂದೂ ವಿಶ್ಲೇಷಿಸಿದ್ದಾರೆ.

ಈಗಾಗಲೇ ಕೆಎಂಎಫ್ ಪಶು ಆಹಾರ ದರ ಏರಿಸಿದ್ದನ್ನು ಒಕ್ಕೂಟದ ಅಧ್ಯಕ್ಷರ ಹಾಗೂ ಸಚಿವ ಶಿವರಾಮ ಹೆಬ್ಬಾರರ ಗಮನಕ್ಕೆ ತರಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಮನವಿ ಮಾಡಿ ದರ ಇಳಿಸಲು ಸೂಚಿಸುವಂತೆ ವಿನಂತಿಸುತ್ತೇವೆ. ಕಷ್ಟದಲ್ಲಿದ್ದ ಹೈನುಗಾರರಿಗೆ ಪಶು ಆಹಾರ ದರ ಇಳಿಸಿ, ಹಾಲಿನ ದರ ಏರಿಸಿ ಕೈ ಹಿಡಿಯಬೇಕಾಗಿದೆ ಎಂದೂ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

ದೀಪಾವಳಿ ಸಂಭ್ರಮಕ್ಕೆ ಕಾರಣವಾಗಲಿ: ದರ ಏರಿಸಿದ್ದು‌ ಕೆಎಂಎಫ್. ದರ ಏರಿಸುವಾಗ ಒಕ್ಕೂಟಗಳನ್ನು ಕೇಳುವುದೇ ಇಲ್ಲ. ಎಲ್ಲಾ ಜಿಲ್ಲೆಯಲ್ಲೂ ಪಶುಪಾಲನೆ ವೆಚ್ಚ ಒಂದೇ ‌ಮಾದರಿ ಇರುವುದಿಲ್ಲ. ವೈಜ್ಞಾನಿಕ‌ ಮನಸ್ಥಿತಿಯಲ್ಲಿ ಕೆಎಂಎಫ್ ನಡೆದುಕೊಳ್ಳುವುದು ಕಲಿಯಬೇಕು. – ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಒಕ್ಕೂಟ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next