Advertisement

ಏಲಕ್ಕಿ ನಾಡಿನಲ್ಲಿ ಹೆಚ್ಚಾದ ರಾಜಕೀಯ ಘಮ

12:22 AM May 04, 2023 | Team Udayavani |

ಏಲಕ್ಕಿ ನಾಡು, ದಾಸರು-ಸಂತರ ಬೀಡು ಹಾವೇರಿ ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರಿದ್ದು, ಕದನ ಕಲಿಗಳ ಅಖಾಡಕ್ಕೆ ವೇದಿಕೆ ಸಿದ್ಧಗೊಂಡಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಏರ್ಪಟಿದ್ದು, ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿಯೇ ಬಿಜೆಪಿ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ ತೀವ್ರ ಕಸರತ್ತು ನಡೆಸಿದೆ. ಜಿಲ್ಲೆಯಲ್ಲಿ ಸದ್ಯ 5 ಕ್ಷೇತ್ರಗಳು ಬಿಜೆಪಿ ವಶದಲ್ಲಿದ್ದರೆ, 2021ರ ಉಪಚುನಾವಣೆಯಲ್ಲಿ ಹಾನಗಲ್ಲ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದೆ.

Advertisement

ಶಿಗ್ಗಾವಿ
ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿ ಧಿಸುವ ಶಿಗ್ಗಾವಿ-ಸವಣೂರು ಕ್ಷೇತ್ರ ಚುನಾವಣೆ ಹಾಟ್‌ಸ್ಪಾಟ್‌ ಆಗಿದ್ದು, ರಾಜ್ಯದ ಗಮನ ಸೆಳೆಯುತ್ತಿದೆ. ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿ ಸಿರುವ ಬೊಮ್ಮಾಯಿ ಅವರನ್ನು ಈ ಬಾರಿ ಕಟ್ಟಿ ಹಾಕಲು ಕಾಂಗ್ರೆಸ್‌ ಅಲ್ಪ ಸಂಖ್ಯಾಕ ಅಭ್ಯರ್ಥಿ ಯಾಸೀರ್‌ಖಾನ್‌ ಪಠಾಣ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಶಿಧರ ಯಲಿಗಾರ ಜೆಡಿಎಸ್‌ನಿಂದ ಸ್ಪ ರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೇ ನೇರಾನೇರ ಪೈಪೋಟಿ ಇದೆ. ಬಿಜೆಪಿ, ಜೆಡಿಎಸ್‌ ಅಭ್ಯರ್ಥಿ ಲಿಂಗಾಯತ ಸಮಾಜದವರಾಗಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಅಲ್ಪ ಸಂಖ್ಯಾಕ ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಪ್ರಾಬಲ್ಯ ಹೊಂದಿದ್ದು, ಅನಂತರದಲ್ಲಿ ಪಂಚಮಸಾಲಿ ಹಾಗೂ ಇತರ ಸಮುದಾಯಗಳ ಜನ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಕೊಂಡು ಮತ ಕೇಳುತ್ತಿದ್ದಾರೆ. ಕಾಂಗ್ರೆಸ್‌ ಅಲ್ಪಸಂಖ್ಯಾಕ ಮತಗಳ ಮೇಲೆ ಅವಲಂಬಿತವಾಗಿದೆ. ಇನ್ನು ಜೆಡಿಎಸ್‌ನ ಶಶಿಧರ ಯಲಿಗಾರ ಪಂಚಮಸಾಲಿ ಮತಗಳನ್ನು ಸೆಳೆಯುವ ಯತ್ನದಲ್ಲಿದ್ದಾರೆ.

ಹಿರೇಕೆರೂರು
ಈ ಕ್ಷೇತ್ರದಲ್ಲಿ ಪಕ್ಷ, ಚಿಹ್ನೆಗಿಂತ ವೈಯಕ್ತಿಕ ವರ್ಚಸ್ಸು ಹಾಗೂ ಜನ ರೊಂದಿಗಿನ ಒಡನಾಟ ಹೊಂದಿರುವ ಅಭ್ಯರ್ಥಿಯನ್ನೇ ಆಯ್ಕೆ ಮಾಡುವುದು ಕ್ಷೇತ್ರದ ಜನರ ವಿಶೇಷತೆ. ಕಳೆದ ನಾಲ್ಕು ಚುನಾ ವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಏರ್ಪ ಟ್ಟಿದೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿ ಸಿದ್ದ ಬಿ.ಸಿ. ಪಾಟೀಲ್‌ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಯು.ಬಿ.ಬಣಕಾರ್‌ ಈ ಸಲ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. 2019ರ ಉಪಚುನಾವಣೆ ಯಲ್ಲಿ ಈ ಇಬ್ಬರು ಜೋಡೆತ್ತುಗಳಂತೆ ಪ್ರಚಾರ ನಡೆಸಿದ್ದರು. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ತೊರೆದು ಕೈ ಹಿಡಿ ದಿರುವ ಬಣಕಾರ್‌ ಮತ್ತೂಮ್ಮೆ ಪೈಪೋಟಿ ನೀಡಲು ಸಜ್ಜಾಗಿ ದ್ದಾರೆ. ಕ್ಷೇತ್ರದಲ್ಲಿ ಪಕ್ಷಗಳ ಅಭ್ಯರ್ಥಿಗಳು ಅದಲು- ಬದಲಾಗಿದ್ದರೂ ಈ ಇಬ್ಬರ ನಡುವಿನ ಜಿದ್ದಾಜಿದ್ದಿಗೆ ಮತ್ತೆ ಕ್ಷೇತ್ರ ಸಾಕ್ಷಿಯಾಗಲಿದೆ. ಕ್ಷೇತ್ರದಲ್ಲಿ ಸಾದರ ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಈ ಸಮುದಾಯಕ್ಕೆ ಸೇರಿದ್ದಾರೆ.

ಹಾನಗಲ್‌
2021ರ ಉಪಚುನಾವಣೆಯಲ್ಲಿ ದೇಶಾದ್ಯಂತ ಗಮನ ಸೆಳೆದಿದ್ದ ಈ ಕ್ಷೇತ್ರದಲ್ಲಿ ಮತ್ತೆ ಚುನಾವಣ ಕಾವು ರಂಗೇರಿದೆ. ಸಿ.ಎಂ.ಉದಾಸಿ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಗೆಲವು ಸಾ ಧಿಸಿದ್ದರು. ಈ ಬಾರಿ ಮತ್ತೆ ಬಿಜೆಪಿ ಯಿಂದ ಶಿವರಾಜ ಸಜ್ಜನರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶ್ರೀನಿವಾಸ ಮಾನೆ ಕಣಕ್ಕಿಳಿ ದಿದ್ದಾರೆ. ಈ ನಡುವೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯಾಗಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಕಾಂಗ್ರೆಸ್‌ ತೊರೆದು ಜೆಡಿಎಸ್‌ನಿಂದ ಸ್ಪ ರ್ಧಿಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪ ಡುವ ಸಾಧ್ಯತೆ ಇದೆ. ಕಾಂಗ್ರೆಸ್‌ ಅಭ್ಯರ್ಥಿ ಮರಾಠ ಸಮುದಾಯಕ್ಕೆ ಸೇರಿದ್ದರೆ, ಬಿಜೆಪಿ ಅಭ್ಯರ್ಥಿ ಗಾಣಿಗ ಲಿಂಗಾಯತ ಸಮಾಜದವರು. ಇನ್ನು ಜೆಡಿಎಸ್‌ ಅಭ್ಯರ್ಥಿ ಬಲಿಜ ಸಮಾಜಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿದ್ದು, ಮುಸ್ಲಿಂ ಹಾಗೂ ಗಂಗಾಮತಸ್ಥ ಸಮುದಾಯದ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

ಹಾವೇರಿ (ಎಸ್‌ ಸಿ)
ಈ ಬಾರಿ ಮಾಜಿ ಸಚಿವ ಹಾಗೂ ಹೊಸಮುಖದ ಅಭ್ಯರ್ಥಿಯ ನಡುವಿನ ಸ್ಪರ್ಧೆಗೆ ಸಿದ್ಧಗೊಂಡಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ರುದ್ರಪ್ಪ ಲಮಾಣಿ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಈ ಬಾರಿ ಅಚ್ಚರಿ ಅಭ್ಯರ್ಥಿ ಎಂಬಂತೆ ಉಪತಹಶೀಲ್ದಾರ್‌ ಆಗಿದ್ದ ಗವಿಸಿದ್ದಪ್ಪ ದ್ಯಾಮಣ್ಣವರ ಅವರನ್ನು ಕಣಕ್ಕಿಳಿಸಿದೆ. ಹಾಲಿ ಶಾಸಕ ನೆಹರು ಓಲೇಕಾರಗೆ ಟಿಕೆಟ್‌ ತಪ್ಪಿದ್ದರೂ ತಟಸ್ಥರಾಗಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಎರಡು ಪಕ್ಷಗಳಲ್ಲಿ ಎದ್ದಿದ್ದ ಬಂಡಾಯ ಶಮನಗೊಂಡಿದೆ. ರುದ್ರಪ್ಪ ಲಮಾಣಿ ಅವರು ಪಕ್ಷದ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ಅವರು ಉಪತಹಶೀಲ್ದಾರ್‌ ಆಗಿದ್ದ ವೇಳೆ ಜನಸಮಾನ್ಯರಿಗೆ ಮಾಡಿದ ಸಹಾಯವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಕಾಂಗ್ರೆಸ್‌ ಲಂಬಾಣಿ ಸಮುದಾಯದ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟಿದ್ದರೆ, ಬಿಜೆಪಿ ಇದೇ ಮೊದಲ ಬಾರಿ ಎಸ್‌ಸಿ ಎಡಗೈ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿದೆ. ಕ್ಷೇತ್ರದಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳು ಸರಳ ವ್ಯಕ್ತಿತ್ವ ಹೊಂದಿದ್ದಾರೆ.

Advertisement

ರಾಣೆಬೆನ್ನೂರು
ಈ ಬಾರಿ ಕ್ಷೇತ್ರದಲ್ಲಿ ಚುನಾವಣೆ ತುರುಸು ಪಡೆದಿದ್ದು, ಬಿಜೆಪಿ, ಕಾಂಗ್ರೆಸ್‌, ಎನ್‌ಸಿಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವೆ ಸ್ಪರ್ಧೆ ಕಂಡು ಬರುತ್ತಿದೆ. ಬಿಜೆಪಿಯಿಂದ ಶಾಸಕ ಅರುಣ ಕುಮಾರ, ಕಾಂಗ್ರೆಸ್‌ನಿಂದ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಪುತ್ರ ಪ್ರಕಾಶ ಕೋ ಳಿವಾಡರಿಗೆ ಟಿಕೆಟ್‌ ನೀಡಲಾಗಿದೆ. 2018ರಲ್ಲಿ ಪಕ್ಷೇತರರಾಗಿ ಸ್ಪ ರ್ಧಿಸಿ ಗೆಲುವು ಸಾಧಿ ಸಿದ್ದ ಆರ್‌.ಶಂಕರ್‌ ಮತ್ತೆ ಈ ಬಾರಿ ಎನ್‌ಸಿಪಿ ಯಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಂತೋಷ ಕುಮಾರ ಪಾಟೀಲ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು, ತಮ್ಮ ಸಾಮರ್ಥ್ಯ ತೋರಿಸಲು ಮುಂದಾಗಿದ್ದಾರೆ. ಇನ್ನು ಜೆಡಿಎಸ್‌ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಕೂಡ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಪಂಚಮಸಾಲಿ ಲಿಂಗಾಯತ ಅಭ್ಯರ್ಥಿಗೆ, ಕಾಂಗ್ರೆಸ್‌ ರೆಡ್ಡಿ (ಲಿಂಗಾಯತ) ಸಮು ದಾಯದ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟಿದೆ. ಆರ್‌.ಶಂಕರ ಕುರುಬ ಸಮಾಜಕ್ಕೆ ಸೇರಿದ್ದಾರೆ. ಪಕ್ಷೇತರ ಸಂತೋಷ ಕುಮಾರ ಪಾಟೀಲ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಸೇರಿದ್ದಾರೆ. ಕ್ಷೇತ್ರ ದಲ್ಲಿ ಲಿಂಗಾಯತ, ಕುರುಬ ಸಮುದಾಯ ಪ್ರಾಬಲ್ಯ ಹೊಂದಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕ್ಷೇತ್ರದಲ್ಲಿ ಆರ್‌.ಶಂಕರ್‌ ಕಾಂಗ್ರೆಸ್‌ ಮತ ಸೆಳೆಯುವ ಸಾಧ್ಯತೆ ಇದ್ದರೆ, ಸಂತೋಷ ಕುಮಾರ ಪಾಟೀಲ ಬಿಜೆಪಿ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಬ್ಯಾಡಗಿ
ಬ್ಯಾಡಗಿಯಲ್ಲಿ ಚುನಾವಣೆ ಕಾವು ಮೆಣಸಿನಕಾಯಿ ಘಾಟಿಗಿಂತ ಜೋರಾಗಿದ್ದು, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಫೈಟ್‌ ಏರ್ಪಡಲಿದೆ. ಬಿಜೆಪಿಯಿಂದ ಮತ್ತೂಮ್ಮೆ ಹಾಲಿ ಶಾಸಕ ವಿರೂ ಪಾಕ್ಷಪ್ಪ ಬಳ್ಳಾರಿ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ಈ ಬಾರಿ ಮಾಜಿ ಸಚಿವ ಬಸವರಾಜ ಶಿವಣ್ಣನವರ ಸ್ಪ ರ್ಧಿಸಿದ್ದಾರೆ. ಸದ್ಯ ಎರಡು ಪಕ್ಷದಲ್ಲಿ ಮೇಲ್ನೊಟಕ್ಕೆ ಭಿನ್ನಮತ ಶಮನಗೊಂಡಿದೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿದ್ದು, ಬಿಜೆಪಿ ಪಂಚಮಸಾಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟರೆ, ಕಾಂಗ್ರೆಸ್‌ ಕುರುಬ ಸಮುದಾಯದ ಅಭ್ಯರ್ಥಿಗೆ ಅವಕಾಶ ಕಲ್ಪಿಸಿದೆ. ಕ್ಷೇತ್ರದಲ್ಲಿ ಎರಡೂ ಪಕ್ಷಗಳಿಗೆ ಒಳ ಹೊಡೆತದ ಆತಂಕವಿದ್ದು, ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಪಕ್ಷಕ್ಕೆ ಗೆಲುವು ಸುಲಭವಾಗಲಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.

~ ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next