ನೆರೆಯ ಪಾಕಿಸ್ಥಾನ, ಆಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂಗಳು, ಸಿಕ್ಖರು, ಬೌದ್ಧ ಧರ್ಮೀಯರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ಧಾರ್ಮಿಕ ಹಿಂಸೆ ಅಷ್ಟಿಷ್ಟಲ್ಲ. ಈ ಕಾರಣಕ್ಕಾಗಿಯೇ ಬದುಕುಳಿಯುವುದಕ್ಕಾಗಿ ಪ್ರತೀ ವರ್ಷ ಅಲ್ಲಿನ ಅಲ್ಪಸಂಖ್ಯಾಕರು ನೆರೆಯ ರಾಷ್ಟ್ರಗಳಿಗೆ ಆಶ್ರಯ ಅರಸಿ ತಮ್ಮ ದೇಶಗಳಿಂದ ಪಲಾಯನಗೈಯ್ಯುತ್ತಾರೆ. ಈ ಹಿನ್ನೆಲೆಯಲ್ಲೇ ಈ ಮೂರೂ ರಾಷ್ಟ್ರಗಳ ಧಾರ್ಮಿಕ ಮೂಲಭೂತವಾದದಿಂದ ತತ್ತರಿಸಿ ಭಾರತಕ್ಕೆ ಆಶ್ರಯ ಕೋರಿ ಬಂದ ಅಲ್ಲಿನ ಅಲ್ಪಸಂಖ್ಯಾಕ ವರ್ಗಗಳಿಗೆ ಪೌರತ್ವ ಕೊಡುವಂಥ ಸಿಎಎ ಅನ್ನು ಕೇಂದ್ರ ಸರಕಾರ ಜಾರಿ ಮಾಡಿದೆ.
ಅದರಲ್ಲೂ ಪಾಕಿಸ್ಥಾನವಂತೂ ಮಾನವ ಹಕ್ಕುಗಳ ಉಲ್ಲಂಘನೆಯನ್ನೇ ಮೂಲಗುಣವಾಗಿಸಿಕೊಂಡುಬಿಟ್ಟಿದೆ. ಈ ತಿಂಗಳಲ್ಲೇ ಅಮೆರಿಕದ ಸೆನೆಟ್, “ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ’ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ಥಾನದ ಹೆಸರನ್ನೂ ಘೋಷಿಸಿತ್ತು. ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಸಮಿತಿಯ ವರದಿಯ ಹಿನ್ನೆಲೆಯಲ್ಲಿ ಅಮೆರಿಕನ್ ಸರಕಾರ ಹೀಗೆ ಘೋಷಣೆ ಮಾಡಿತ್ತು. ಆ ವರದಿಯಲ್ಲಿ ಪಾಕಿಸ್ಥಾನದ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂ, ಕ್ರಿಶ್ಚಿಯನ್, ಸಿಕ್ಖ್ ಸಮುದಾಯಗಳ ಹೆಣ್ಣುಮಕ್ಕಳನ್ನು ಅಪಹರಿಸಿ, ಬಲವಂತದಿಂದ ಮತಾಂತರ ಮಾಡುವುದು, ಚೀನಕ್ಕೆ ಮಾರಾಟ ಮಾಡುವುದು ಮತ್ತು ಅತ್ಯಾಚಾರ ನಡೆಸುತ್ತಿದ್ದಾರೆ. ಇವೆಲ್ಲ ಸರಕಾರದ ನೆರಳಿನಲ್ಲಿಯೇ ನಡೆಯುತ್ತಿದೆ ಎಂದು ಹೇಳಿತ್ತು.
ಒಂದು ವರದಿಯ ಪ್ರಕಾರ ಪ್ರತೀ ವರ್ಷವೂ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾಕ ವರ್ಗಗಳಿಗೆ ಸೇರಿದ 1,000ಕ್ಕೂ ಅಧಿಕ ಹೆಣ್ಣುಮಕ್ಕಳನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಿಸಲಾಗುತ್ತಿದೆ. ಮಾನವ ಹಕ್ಕು ಹೋರಾಟಗಾರರ ಪ್ರಕಾರ, ಕೋವಿಡ್‌ನ ಈ ಸಂದರ್ಭದಲ್ಲಂತೂ ಈ ದುಷ್ಕೃತ್ಯಗಳು ಹೆಚ್ಚಾಗಿ ಬಿಟ್ಟಿವೆ. ದಕ್ಷಿಣ ಸಿಂಧ್ ಪ್ರಾಂತ್ಯಕ್ಕೆ ಸೇರಿದ ಬಡ ಹಿಂದೂ ಹೆಣ್ಣುಮಕ್ಕಳೇ ಮೂಲಭೂತವಾದಿಗಳ ದುಷ್ಕೃತ್ಯಕ್ಕೆ ಹೆಚ್ಚು ತುತ್ತಾಗುತ್ತಾ ಬಂದಿದ್ದಾರೆ. ಕಳೆದೆರಡು ತಿಂಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಇಬ್ಬರು ಹೆಣ್ಣುಮಕ್ಕಳ ಅಪಹರಣ ಮತ್ತು ಬಲವಂತದ ಮತಾಂತರ ವಿಚಾರ ಈಗ ಮಾನವ ಹಕ್ಕು ಹೋರಾಟಗಾರರಿಂದ ಬಹಳ ಆಕ್ರೋಶಕ್ಕೆ ಗುರಿಯಾಗುತ್ತಿದೆ.
ಸರಿಸುಮಾರು 22 ಕೋಟಿ ಜನಸಂಖ್ಯೆಯಿರುವ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾಕರ ಸಂಖ್ಯೆ ಕೇವಲ 3.2 ರಷ್ಟಿದೆ. ಸರಕಾರದ ನಿರಂತರ ಅವಗಣನೆಗೆ ಗುರಿಯಾಗಿರುವ ಈ ವರ್ಗ, ಮೂಲಭೂತವಾದಿಗಳಿಗೆ ಸುಲಭವಾಗಿ ತುತ್ತಾಗುತ್ತಿದೆ. ಬಲವಂತದ ಮತಾಂತರದ ವಿರುದ್ಧವಾಗಲಿ ಅಥವಾ ಯಾವುದೇ ರೀತಿಯ ವ್ಯಾಜ್ಯದ ಬಗ್ಗೆ ಅಲ್ಪಸಂಖ್ಯಾಕರು ಸಿಡಿದು ನಿಂತರೆ, ಅವರನ್ನು ಧರ್ಮನಿಂದನೆ ಆರೋಪದಲ್ಲಿ ಮತ್ತಷ್ಟು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ.
ಅಂತಾರಾಷ್ಟ್ರೀಯ ವೇದಿಕೆಗಳಲ್ಲೆಲ್ಲ ಭಾರತಕ್ಕೆ ಶಾಂತಿಯ ಪಾಠ ಮಾಡಲು ಪ್ರಯತ್ನಿಸುವ, ಸಿಎಎಯಂಥ ಮಾನವೀಯ ಪ್ರಯತ್ನಗಳ ಬಗ್ಗೆ ಕುಹಕವಾಡುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ತಮ್ಮ ಅವಧಿಯಲ್ಲಿ ಮೂಲಭೂತವಾದಿ ಸಂಘಟನೆಗಳು ಮತ್ತಷ್ಟು ಬಲಿಷ್ಠವಾಗಿ ಬೇರೂರಲು ಬಿಟ್ಟಿದ್ದಾರೆ. ಇವೆಲ್ಲದರ ನಡುವೆಯೂ ಇನ್ನೊಂದೆಡೆ ಭಾರತವು ಪಾಕ್, ಬಾಂಗ್ಲಾ ಹಾಗೂ ಅಫ್ಘಾನಿಸ್ಥಾನದಲ್ಲಿ ಧಾರ್ಮಿಕ ಮೂಲಭೂತವಾದಕ್ಕೆ ತುತ್ತಾಗಿರುವ ಸಂತ್ರಸ್ತರ ಪರವಾಗಿ ಮಾತನಾಡುತ್ತಿರುವುದು ಶ್ಲಾಘನೀಯ ವಿಚಾರ.
ದುರಂತವೆಂದರೆ, ಅಂತಾರಾಷ್ಟ್ರೀಯ ಸಮುದಾಯ ಪಾಕ್‌ನ ಈ ದುಷ್ಕೃತ್ಯಗಳನ್ನು ನಿಲ್ಲಿಸುವುದಕ್ಕಿಂತ ಹೆಚ್ಚಾಗಿ, ಬಾಯಾ¾ತಿನ ಖಂಡನೆಗಷ್ಟೇ ತಮ್ಮ ಜವಾಬ್ದಾರಿಯನ್ನು ಸೀಮಿತಗೊಳಿಸಿಕೊಂಡಿರುವುದು. ಭಾರತದ ಸಣ್ಣಪುಟ್ಟ ವಿಚಾರಗಳಲ್ಲೂ ಮೂಗು ತೂರಿಸುವ ಜಾಗತಿಕ ಸಮುದಾಯ ಪಾಕಿಸ್ಥಾನದ ಮಟ್ಟಿಗೆ ಮೃದು ಧೋರಣೆ ಅನುಸರಿಸುತ್ತಿರುವುದು ಸರ್ವಥಾ ಸರಿಯಲ್ಲ.