ಬೀಳಗಿ: ಅಕ್ರಮ ಮರಳು ಸಾಗಾಣಿಕೆ ಮಾಡಿದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮರಳು ದಂಧೆಕೋರರಿಗೆ ಎಚ್ಚರಿಕೆ ನೀಡಿದರೂ ತಲೆಕೆಡಿಸಿಕೊಳ್ಳದೆ ಅಕ್ರಮ ಮರಳು ದಂಧೆ ನಡೆಸುತ್ತಿದ್ದು, ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾಗುವಂತಾಗಿದೆ.
ಹೌದು, ಬೀಳಗಿ ತಾಲೂಕಿನ ಸುತ್ತಮೂತ್ತಲಿರುವ ಮರಳು ಕಡ್ಡಾಗಳಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡು ಅಂತಹ ಮರಳು ಅಡ್ಡೆಗಳ ಮೇಲೆ ದಾಳಿ ಮಾಡುವ ಮೂಲಕ ಅಕ್ರಮ ಮರಳು ದಂಧೆ ತಡೆಯುವ ಕೆಲಸವಾಗಬೇಕಿದೆ.
ಅಧಿಕ ಬೆಲೆಗೆ ಅಕ್ರಮ ಮರಳು ಮಾರಾಟ: ಸರ್ಕಾರ ಮರಳು ನಿಯಮದ ಪ್ರಕಾರ ಮತ್ತು ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪಾಸ್ ಮೂಲಕ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸಿದೆ. ಆದರೂ, ಅಕ್ರಮ ಮರಳು ದಂಧೆ ನಿರಂತರವಾಗಿ ತಾಲೂಕಿನಲ್ಲಿ ಎಲ್ಲೆಡೆ ನಿರಂತರವಾಗಿ ನಡೆಯುತ್ತಿದೆ. ಬಡ ಜನರಿಗೆ ಹೆಚ್ಚಿನ ಹಣಕ್ಕೆ ಮರಳು ಮಾರಾಟ ಮಾಡುವ ಮೂಲಕ ಹಣ ಸುಳಿಗೆ ಮಾಡುವ ಕೆಲಸ ನಡೆದಿದ್ದು, ಸೂಕ್ತ ಬೆಲೆಯಲ್ಲಿ ಮರಳು ಸಿಗದೆ ಜನರು ಪರದಾಡುವಂತಾಗಿದೆ.
ಹಲವು ವರ್ಷಗಳಿಂದ ಅಕ್ರಮ ಮರಳು ಮಾರಾಟ: ತಾಲೂಕಿನಲ್ಲಿ ಕಳೆದ ಹತ್ತು-ಹಲವು ವರ್ಷಗಳಿಂದ ಅಕ್ರಮ ಮರಳು ಸಾಗಾಣಿಕೆ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಇದರಿಂದ ತಾಲೂನಲ್ಲಿರುವ ಮರಳು ಸಾಗಾಣಿಕೆ ಅಡ್ಡೆಗಳಲ್ಲಿ ಮತ್ತಷ್ಟು ಅಕ್ರಮ ಮರಳು ಸಾಗಾಣಿಕೆ ಹೆಚ್ಚಾಗಿದ್ದು, ಕೂಡಲೇ ಸ್ಥಳೀಯ ಅಧಿ ಕಾರಿಗಳು ಎಚ್ಚೆತ್ತುಕೊಂಡು ಮರಳು ಅಡ್ಡಾಗಳ ಮೇಲೆ ದಾಳಿ ನಡೆಸುವ ಮೂಲಕ ಅಕ್ರಮ ಮರಳು ಸಾಗಾಣಿಕೆ ದಂಧೆಕೋರರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.
ನಿರಾಣಿ ಮಾತು ಲೆಕ್ಕಕ್ಕಿಲ್ಲ: ಸಚಿವ ಮುರುಗೇಶ ನಿರಾಣಿ ಅವರು ಗಣಿ ಮತ್ತು ಭೂವಿಜ್ಞಾನಿ ಸಚಿವರಾಗಿದ್ದ ವೇಳೆ ಬಡವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಎತ್ತಿನ ಬಂಡಿ ಮತ್ತು ಟ್ರಾಕ್ಟರ್ ಮೂಲಕ ಮರಳು ಸಾಗಾಣಿಕೆಗೆ ಅನುಮತಿ ನೀಡಿದ್ದರು. ಆದರೆ, ಸಚಿವರ ಅವರ ಮಾತಿಗೂ ಕಿಮ್ಮತ್ತು ನೀಡದೆ ಅಕ್ರಮ ಮರಳು ದಂಧೆಕೋರರು ಮಾತ್ರ ತಮ್ಮ ಕೆಲಸವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ: ಈಗಾಗಲೇ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ಅಡ್ಡೆಗಳ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ದಾಳಿ ಮಾಡುವ ಮೂಲಕ ಅಕ್ರಮ ಮರಳು ದಂಧೆ ತಡೆಯವಲ್ಲಿ ಮುಂದಾಗಬೇಕು.
ತಾಲೂಕಿನ ಅರಕೇರಿ-ಕಾತರಕಿ ಗ್ರಾಮಗಳ ಮಧ್ಯ ಪ್ರದೇಶದ ಹೊಲದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುವುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಿಮಗೆ ಅದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ. ಅಂತಹ ದಂಧೆಗಳ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಶಂಕರ ಗೌಡಿ, ತಹಶೀಲ್ದಾರ್ ಬೀಳಗಿ
ಕಿರಣ ನಾಯ್ಕರ