Advertisement

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಳ

12:53 PM Jul 14, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕಳೆದ ಒಂದು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

Advertisement

ಗ್ರಾಮಾಂತರ ಭಾಗದಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ಮಳೆ ನಿಂತ ಬಳಿಕ ನೀರು ನಿಂತ ಸ್ಥಳಗಳು ಸೊಳ್ಳೆಗಳ ತಾಣವಾಗಿ ಪರಿವರ್ತನೆಯಾಗುತ್ತಿವೆ. ನೀರಿನ ಟ್ಯಾಂಕ್‌ ಎಳನೀರು, ಪ್ಲಾಸ್ಟಿಕ್‌ ಗ್ಲಾಸ್‌ ಹಾಗೂ ಟೈರ್‌ಗಳು, ನಗರ ಪ್ರದೇಶಗಳ ಮನೆಗಳಲ್ಲಿ ಸಂಗ್ರಹಿಸುವ ನೀರಿನ ಟ್ಯಾಂಕ್‌, ಕೊಡಗಳಲ್ಲಿ ಸೊಳ್ಳೆಗಳು ಬೆಳೆಯುತ್ತವೆ.

ನಿರಂತರವಾಗಿ ಮಳೆ ಸುರಿಯುವ ಸಂದರ್ಭದಲ್ಲಿ ಸಾಮಾನ್ಯವಾಗಿ ಇಲಿ ಜ್ವರ ಕಾಣಿಸಿಕೊಳ್ಳುತ್ತದೆ. ಮೈ ನಡುಗುವ ಜತೆಗೆ ಜ್ವರ, ಕೈಕಾಲು ನಡುಗುವುದು ಈ ರೋಗದ ಲಕ್ಷಣಗಳು. ರೋಗ ಉಲ್ಬಣವಾದರೆ ಅದು ಕರುಳಿಗೂ ತೊಂದರೆ ನೀಡುವುದಲ್ಲದೆ ಜಾಂಡೀಸ್‌ ರೋಗಕ್ಕೂ ಕಾರಣವಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಮಳೆಗಾಲದಲ್ಲಿ ಹರಿದು ಹೋಗುವ ನೀರಿನಲ್ಲಿ ಇಲಿಯ ಹಿಕ್ಕೆ ಸೇರಿಕೊಂಡಿರುವ ಸಾಧ್ಯತೆಗಳಿರುತ್ತವೆ. ಇವು ಕಾಲಿನ ಕಾಯದ ಮೂಲಕ ದೇಹಕ್ಕೆ ತಗಲಿ ಇಲಿಜ್ವರಕ್ಕೆ ದಾರಿ ಮಾಡಿಕೊಡುತ್ತದೆ. ಕಲುಷಿತ ನೀರಿನ ಸೇವನೆ ವಾಂತಿ ಭೇದಿಗೂ ಕಾರಣವಾಗಬಹುದು. ಹೀಗಾಗಿ ಮಳೆಗಾಲದಲ್ಲಿ ಕಡ್ಡಾಯವಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು ಎನ್ನುತ್ತಾರೆ ವೈದ್ಯಾಧಿಕಾರಿಗಳು.‌

ಎಚ್ಚರ ಅಗತ್ಯ: ಮನೆಯ ಒಳಗೂ, ಹೊರಗೂ ಬಳಕೆಗಾಗಿ ಸಂಗ್ರಹಿಸಿಟ್ಟಿರುವ ನೀರನ್ನು ಆಗಾಗ ಖಾಲಿ ಮಾಡಿ ಪಾತ್ರೆ, ಡ್ರಂ, ಕ್ಯಾನ್‌ ಸ್ವಚ್ಛಗೊಳಿಸಿ, ಭದ್ರವಾಗಿ ಮುಚ್ಚಿಡುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ತಡೆಯಬೇಕು. ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.

Advertisement

ನೆರೆ ಪ್ರದೇಶಗಳ ಮೇಲೆ ನಿಗಾ ನೆಗಡಿ, ಕೆಮ್ಮು, ಡೆಂಗಿ, ವಾಂತಿ, ಭೇದಿ, ಜ್ವರದ ನಿಯಂತ್ರಣಕ್ಕೆ ಕ್ಷೇತ್ರ ಸಿಬಂದಿ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಜತೆಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಔಷಧವನ್ನು ಮೊದಲೇ ಆಸ್ಪತ್ರೆಗಳಲ್ಲಿ ದಾಸ್ತಾನು ಇಡಲಾಗಿದೆ. ನೀರಿನ ಶುದ್ಧತೆಗೆ ಕ್ಲೋರಿನ್‌ ಮಾತ್ರೆ ಸಹ ನೀಡಲಾಗುತ್ತಿದೆ. ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ಇಲಾಖೆ ವತಿಯಿಂದ ನೀಡಲಾಗುತ್ತದೆ. ನೆರೆ ಬಂದಿರುವ ಪ್ರದೇಶಗಳ ಬಗ್ಗೆ ವಿಶೇಷವಾಗಿ ನಿಗಾ ಇರಿಸಲಾಗಿದ್ದು, ನೆರೆ ಇಳಿದ ಕೂಡಲೇ ಆ ಭಾಗದಲ್ಲಿ ಫಾಗಿಂಗ್‌ ಕಾರ್ಯ ಹಾಗೂ ಬಾವಿಗಳಿಗೆ ಕ್ಲೋರಿನೇಷನ್‌ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮ ಅಗತ್ಯ: ರೋಗಗಳು ಹರಡದಂತೆ ಇಲಾಖೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಂಕ್ರಾಮಿಕ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೌಷ್ಟಿಕ ಆಹಾರ ಮತ್ತು ನೈರ್ಮಲ್ಯ ಕ್ರಮಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತೆಗೆದುಕೊಂಡರೆ ಉತ್ತಮ. ಈ ಬಗ್ಗೆ ಸಾರ್ವಜನಿಕರಲ್ಲಿಯೂ ಅರಿವು ಮೂಡಿಸಲಾಗುತ್ತಿದೆ. –ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next