ಬೆಂಗಳೂರು: ನಗರ ಭಾಗದಲ್ಲಿ ಒಂದು ಲಕ್ಷ ಮಹಿಳೆಯರಲ್ಲಿ ಶೇ.11ರಿಂದ 12ರಷ್ಟು ಮಂದಿಯಲ್ಲಿ ಗರ್ಭಕೋಶದ ಒಳ ಭಾಗಕ್ಕೆ ಸಂಬಂಧಿಸಿದ ಕ್ಯಾನ್ಸರ್ (ಎಂಡೊ ಮೆಟ್ರಿಯಲ್) ಕಾಣಿಸಿಕೊಳ್ಳುತ್ತಿದ್ದು, ನಿರ್ಲಕ್ಷ ತೋರದೆ ಕಡ್ಡಾಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಿದ್ವಾಯಿ ಆಸ್ಪತ್ರೆಯ ಗೈನಿಕಾಲಾಜಿಕಲ್ ಅಂಕಾಲಜಿ ವಿಭಾಗದ ಮುಖ್ಯಸ್ಥೆ ಡಾ.ಪಲ್ಲವಿ ತಿಳಿಸಿದ್ದಾರೆ.
ನಗರದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಶನಿವಾರ ಕರಳು ಮತ್ತು ಗರ್ಭಕೋಶದ ಕ್ಯಾನ್ಸರ್‌ಗೆ ರೊಬೊಟಿಕ್ಸ್ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ನೀಡುವ ಕುರಿತು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಎಂಡೊ ಮೆಟ್ರಿಯಲ್ ಸದ್ಯ ಭಾರತಕ್ಕೂ ಕಾಲಿಟ್ಟಿದ್ದು, ಮಕ್ಕಳಾಗದಿರುವ ಮಹಿಳೆಯರು, ಮಕ್ಕಳಾಗಲು ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿದೆ.
ಅಧ್ಯಯನದ ಪ್ರಕಾರ ನಗರ ಭಾಗದಲ್ಲಿರುವ 1ಲಕ್ಷ ಮಹಿಳೆಯರಲ್ಲಿ ಶೇ.11ರಿಂದ 12 ರಷ್ಟು ಮಂದಿಗೆ ಹಾಗೂ ಗ್ರಾಮಿಣ ಪ್ರದೇಶದಲ್ಲಿ ಶೇ.3 ರಿಂದ 4 ರಷ್ಟು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿ ಅಂಶವಾಗಿದೆ ಎಂದು ಹೇಳಿದರು.
ಹೀಗಾಗಿ, 40 ರಿಂದ 50 ವರ್ಷ ವಯೋಮಿತಿಯ ಮಹಿಳೆಯರಲ್ಲಿ ಮುಟ್ಟು ನಿಂತು ಸುಮಾರು ವರ್ಷಗಳ ನಂತರ ಮುಟ್ಟು ಕಾಣಿಸಿಕೊಳ್ಳುವುದು, ಅಧಿಕ ರಕ್ತಸ್ರಾವ ಕಂಡ ಕೂಡಲೇ ನಿರ್ಲಕ್ಷ್ಯತೊರದೆ ತಪಾಸಣೆ ಮಾಡಿಸಿಕೊಳ್ಳಬೇಕು.
ಈ ಕಾಯಿಲೆ ಪ್ರಮುಖ ಕಾರಣ ಬದಲಾಗುತ್ತಿರುವ ಆಹಾರ ಪದ್ಧತಿ, ಪಾಶ್ಚಿಮಾತ್ಯ ಜೀವನ ಶೈಲಿ, ಸ್ಥೂಲಕಾಯ ಹೊಂದಿರುವವರು, ಮೊದಲ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಶೇ.90 ಮಂದಿಗೆ ಸಂಪೂರ್ಣ ಗುಣಮುಖರಾಗಬಹುದು ಎಂದು ಸಲಹೆ ನೀಡಿದರು.