Advertisement

ಕಾಫಿ ನಾಡಿನಲ್ಲಿ ಹೆಚ್ಚಿದ ಚುನಾವಣೆ ರಂಗು

12:54 AM May 07, 2023 | Team Udayavani |

ರಾಜ್ಯ, ದೇಶ-ವಿದೇಶಗಳಲ್ಲಿ ಕಾಫಿಯ ಕಂಪು ಬಿತ್ತಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ರಣಕಣ ರಂಗೇರಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌- ಬಿಜೆಪಿ ನೇರ ಹಣಾಹಣಿ, ಮೂಡಿಗೆರೆ, ಕಡೂರು, ಶೃಂಗೇರಿಯಲ್ಲಿ ತ್ರಿಕೋನ ಸ್ಪರ್ಧೆ, ತರೀಕೆರೆ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಗೆಲುವಿಗೆ ಶ್ರಮಿಸುತ್ತಿದ್ದು, ಪ್ರಚಾರದ ಭರಾಟೆಯಲ್ಲಿ ಮಗ್ನರಾಗಿದ್ದಾರೆ. ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದು, ಬಿಜೆಪಿ ಭದ್ರಕೋಟೆಯಲ್ಲಿ ಚುನಾವಣೆ ರಂಗೇರುವ ಮೂಲಕ ಎಲ್ಲರಲ್ಲೂ ಕೌತುಕ ಹೆಚ್ಚಿಸಿದೆ.

Advertisement

ಚಿಕ್ಕಮಗಳೂರು
ಚಿಕ್ಕಮಗಳೂರು ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌-ಬಿಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದ್ದು, ಐದನೇ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಅವರ ಆಪ್ತ ವಲಯದಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಎಚ್‌. ಡಿ. ತಮ್ಮಯ್ಯ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಜೆಡಿಎಸ್‌ನಿಂದ ಬಿ.ಎಂ. ತಿಮ್ಮಶೆಟ್ಟಿ ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಮಾಜಿ ಸಿಎಂ ಆಪ್ತ, ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌ ಮುಖಂಡ ಎಸ್‌.ಎಲ್‌. ಭೋಜೇಗೌಡ ತಮ್ಮ ಪಕ್ಷದ ಅಭ್ಯರ್ಥಿ ಇದ್ದರೂ ಕಾಂಗ್ರೆಸ್‌ಗೆ ಓಟ್‌ ನೀಡುವಂತೆ ಕೇಳಿರುವುದು ಸಿ.ಟಿ.ರವಿ ಮಣಿಸಲು ಕಾಂಗ್ರೆಸ್‌ ಜೆಡಿಎಸ್‌ ನಡುವೆ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಎಚ್‌.ಡಿ. ತಮ್ಮಯ್ಯ ಮೊದಲ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ, ಕುರುಬ ಸಮುದಾಯ ನಿರ್ಣಾಯಕವಾಗಿದ್ದಾರೆ. ಸಿ.ಟಿ.ರವಿ ಒಕ್ಕಲಿಗ ಹಾಗೂ ಎಚ್‌.ಡಿ. ತಮ್ಮಯ್ಯ ಲಿಂಗಾಯತ ಸಮುದಾಯದವರು. ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ ಎನ್ನುವುದು ಜನಾಭಿಪ್ರಾಯವಾಗಿದೆ.

ತರೀಕರೆ
ತರೀಕೆರೆ ಕ್ಷೇತ್ರದಿಂದ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಬಂಡಾಯ ಅಭ್ಯರ್ಥಿಯ ನಡುವೆ ತ್ರೀವ್ರ ಪೈಪೋಟಿ ಎದ್ದಿದೆ. ಬಿಜೆಪಿಯಿಂದ ಡಿ.ಎಸ್‌. ಸುರೇಶ್‌, ಕಾಂಗ್ರೆಸ್‌ನಿಂದ ಜಿ.ಎಚ್‌. ಶ್ರೀನಿವಾಸ್‌ ಹಾಗೂ ಪಕ್ಷೇತರ ಅಭ್ಯರ್ಥಿ ಎಚ್‌.ಎಂ.ಗೋಪಿಕೃಷ್ಣ ಕ್ಷೇತ್ರದಲ್ಲಿ ಬಂಡಾ ಯದ ಅಲೆ ಎಬ್ಬಿಸಿದ್ದಾರೆ. ಕಾಂಗ್ರೆಸ್‌ನ ಜಿ.ಎಚ್‌.ಶ್ರೀನಿವಾಸ್‌ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದರಿಂದ ಪಕ್ಷೇತರವಾಗಿ ಸ್ಪಧಿ ìಸಿ ಸೋಲುಂಡಿದ್ದರು. ಸೋಲಿನ ಬಳಿಕ ಮತೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಅಭ್ಯರ್ಥಿಯಾಗಿದ್ದಾರೆ. ಎಚ್‌.ಎಂ. ಗೋಪಿ ಕೃಷ್ಣ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಎರಡು ಬಾರಿ ರಾಷ್ಟ್ರೀಯ ಪಕ್ಷದಿಂದ ಟಿಕೆಟ್‌ ವಂಚಿತರಾಗಿದ್ದು, ಮೂರನೇ ಬಾರಿ ಟಿಕೆಟ್‌ ಕೈತಪ್ಪಿದ ಪರಿಣಾಮ ಬಂಡಾಯದ ಬಾವುಟ ಹಾರಿಸಿದ್ದಾರೆ. ಬಿಜೆಪಿಯ ಡಿ.ಎಸ್‌. ಸುರೇಶ್‌ ಮೂರು ಬಾರಿ ಸ್ಪರ್ಧಿಸಿದ್ದು ಒಮ್ಮೆ ಕೆಜೆಪಿಯಿಂದ ಸ್ಪ ರ್ಧಿಸಿ ಸೋತಿದ್ದು, ಎರಡು ಬಾರಿ ಗೆಲುವು ಸಾಧಿ ಸಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಮುಂಚೂಣಿ ಯಲ್ಲಿದ್ದು, ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವಿದೆ. ಮೂರನೇ ಸ್ಥಾನದಲ್ಲಿ ಕುರುಬ ಸಮುದಾಯವಿದೆ. ಡಿ.ಎಸ್‌.ಸುರೇಶ್‌ ಲಿಂಗಾಯತ, ಜಿ.ಎಚ್‌. ಶ್ರೀನಿವಾಸ್‌ ಕುರುಬ ಹಾಗೂ ಬಂಡಾಯ ಅಭ್ಯರ್ಥಿ ಎಚ್‌.ಎಂ.ಗೋಪಿಕೃಷ್ಣ ಮಡಿವಾಳ ಸಮುದಾಯ ಪ್ರತಿನಿಧಿಸುತ್ತಿದ್ದು, ಸಮುದಾಯ ಲೆಕ್ಕಾಚಾರದಲ್ಲಿ ಡಿ.ಎಸ್‌.ಸುರೇಶ್‌ ಮತ್ತು ಜಿ.
ಎಚ್‌.ಶ್ರೀನಿವಾಸ್‌ ನಡುವೆ ಪೈಪೋಟಿ ಇದ್ದರೂ ಎಚ್‌.ಎಂ. ಗೋಪಿಕೃಷ್ಣಗೆ ಅನುಕಂಪದ ಅಲೆ ಎದಿದ್ದೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ವರ್ಧೆ ನಡೆಯಲಿದೆ. ಜೆಡಿಎಸ್‌ ಚುನಾವಣೆಯಿಂದ ಹಿಂದೆ ಸರಿದಿದ್ದು, ಯಾರನ್ನು ಬೆಂಬಲಿಸಲಿದೆ ಎಂಬ ಕುತೂಹಲ ಮೂಡಿದೆ.

ಕಡೂರು
ಕಡೂರು ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಕಾಂಗ್ರೆಸ್‌ನಿಂದ ಕೆ.ಎಸ್‌.ಆನಂದ್‌, ಬಿಜೆಪಿ ಬೆಳ್ಳಿಪ್ರಕಾಶ್‌ ಹಾಗೂ ಜೆಡಿಎಸ್‌ ವೈಎಸ್‌ವಿ ದತ್ತ ಅವರನ್ನು ಕಣಕ್ಕಿಳಿಸಿದೆ. 2018ರ ಚುನಾವಣೆಯಲ್ಲಿ ಕೆ.ಎಸ್‌.ಆನಂದ್‌ ಮತ್ತು ದತ್ತ ಬೆಳ್ಳಿಪ್ರಕಾಶ್‌ ವಿರುದ್ಧ ಸೋಲುಂಡಿದ್ದು, ಈ ಬಾರಿ ಗೆಲುವಿಗಾಗಿ ಸೆಣಸುತ್ತಿದ್ದಾರೆ. ಈ ಬಾರಿಯ ಚುನಾವಣೆಯ ವಿಶೇಷ ಎಂದರೆ ಕೆಲವು ರಾಜಕೀಯ ಸ್ಥಿತ್ಯಂತರದಿಂದ ವೈಎಸ್‌ವಿ ದತ್ತ ಕಾಂಗ್ರೆಸ್‌ ಸೇರ್ಪಡೆಗೊಂಡು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ಬಳಿಕ ಪಕ್ಷೇತರವಾಗಿ ಸ್ಪ ರ್ಧಿಸುವ ನಿರ್ಧಾರ ಕೈಗೊಂಡರು. ಕೊನೆ ಗಳಿಗೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಬೆಳ್ಳಿಪ್ರಕಾಶ್‌ ಲಿಂಗಾಯತ ಹಾಗೂ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕೆ.ಎಸ್‌. ಆನಂದ್‌ ಕುರುಬ ಸಮುದಾಯ
ದವರು. ವೈಎಸ್‌ವಿ ದತ್ತ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯ ಪ್ರತಿನಿ ಧಿಸುತ್ತಿದ್ದಾರೆ. ಇಲ್ಲಿ ಕುರುಬ ಮತ್ತು ಲಿಂಗಾಯತ ಸಮುದಾಯ ನಿರ್ಣಾಯಕ. ಜಾತಿ ಬಲ ಇಲ್ಲದ ವೈಎಸ್‌ವಿ ದತ್ತ ಸರಳ ರಾಜಕಾರಣಿ ಎಂಬ ಗರಿಮೆ ಹೊಂದಿದ್ದಾರೆ. ಸಮುದಾಯ ಬಲದಲ್ಲಿ ಬೆಳ್ಳಿಪ್ರಕಾಶ್‌ ಮತ್ತು ಕೆ.ಎಸ್‌.ಆನಂದ್‌ ಪೈಪೋಟಿ ನಡೆಸಿದರೆ ಸರಳತೆ ಎಂಬ ಮಂತ್ರದಿಂದ ಇಬ್ಬರಿಗೂ ಟಕ್ಕರ್‌ ನೀಡಲು ದತ್ತ ಸಜ್ಜಾಗಿದ್ದು ತ್ರಿಕೋನ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ.

ಶೃಂಗೇರಿ
ಮಲೆನಾಡಿನ ಮಡಿಲು ವಿದ್ಯಾದೇವತೆ ಶಾರದೆ ನೆಲೆಸಿರುವ ಶೃಂಗೇರಿ ಕ್ಷೇತ್ರದಿಂದ 12 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿಯಿಂದ ಡಿ.ಎನ್‌. ಜೀವರಾಜ್‌, ಕಾಂಗ್ರೆಸ್‌ನಿಂದ ಟಿ.ಡಿ. ರಾಜೇಗೌಡ ಹಾಗೂ ಜೆಡಿಎಸ್‌ನಿಂದ ಸುಧಾಕರ್‌ ಎಸ್‌. ಶೆಟ್ಟಿ ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ. ಹ್ಯಾಟ್ರಿಕ್‌ ಬಾರಿಸಿದ್ದ ಡಿ.ಎನ್‌. ಜೀವರಾಜ್‌ 2018ರ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋತಿದ್ದರು. ಹಿಂದೂ ಬ್ರಿಗೇಡ್‌ನ‌ ಖಾಂಡ್ಯ ಪ್ರವೀಣ್‌ ಸ್ಪರ್ಧೆಯಿಂದ ಜೀವರಾಜ್‌ಗೆ ಹಿನ್ನಡೆಯಾಗಿತ್ತು. ಈ ಬಾರಿ ಖಾಂಡ್ಯ ಪ್ರವೀಣ್‌ಅವರು ಜೀವರಾಜ್‌ ಜತೆ ಕೈಜೋಡಿಸಿದ್ದಾರೆ. ಜೀವರಾಜ್‌ 4ನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟಿ.ಡಿ.ರಾಜೇಗೌಡ ಎರಡು ಬಾರಿ ಸ್ಪಧಿ ìಸಿ ಒಂದು ಬಾರಿ ಸೋಲುಂಡು 2018ರ ಚುನಾವಣೆಯಲ್ಲಿ ಗೆದ್ದು ಹಾಲಿ ಶಾಸಕರಾಗಿದ್ದಾರೆ. ಮೂರನೇ ಬಾರಿ ಸ್ಪರ್ಧಿಸಿ ಎರಡನೇ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಜೆಡಿಎಸ್‌ ಹೊಸ ಮುಖಕ್ಕೆ ಮಣೆ ಹಾಕಿದ್ದು ಉದ್ಯಮಿ ಸುಧಾಕರ್‌ ಎಸ್‌.ಶೆಟ್ಟಿ ಅವರನ್ನು ಸ್ಪ ರ್ಧೆಗಿಳಿಸಿದೆ. ಡಿ.ಎನ್‌. ಜೀವರಾಜ್‌ ಮತ್ತು ಟಿ.ಡಿ. ರಾಜೇಗೌಡ ಒಕ್ಕಲಿಗರು ಹಾಗೂ ಸುಧಾಕರ್‌ ಎಸ್‌.ಶೆಟ್ಟಿ ಬಂಟ ಸಮುದಾಯದವರು. ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಬ್ರಾಹ್ಮಣ ಹಾಗೂ ಇತರ ಸಮುದಾಯಗಳು ಪ್ರಾಬಲ್ಯ ಹೊಂದಿದ್ದು, ಉದ್ಯಮಿ ಸುಧಾಕರ್‌ ಎಸ್‌.ಶೆಟ್ಟಿಗೆ ಜಾತಿ ಪ್ರಾಬಲ್ಯವಿಲ್ಲದಿದ್ದರೂ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಜೆಡಿಎಸ್‌ ಪಕ್ಷವನ್ನು ಗಟ್ಟಿಗೊಳಿಸಿದ್ದಾರೆ. ಜೀವರಾಜ್‌ ಹಾಗೂ ಟಿ.ಡಿ.ರಾಜೇಗೌಡರಿಗೆ ಟಕ್ಕರ್‌ ನೀಡಲು ಹೊಸ ಮುಖ ಸುಧಾಕರ್‌ ಎಸ್‌. ಶೆಟ್ಟಿ ತುದಿಗಾಲಿನಲ್ಲಿ ನಿಂತಿದ್ದಾರೆ.

Advertisement

ಮೂಡಿಗೆರೆ (ಮೀಸಲು ಕ್ಷೇತ್ರ)
ಮೂಡಿಗೆರೆ ಮೀಸಲು ಕ್ಷೇತ್ರದಿಂದ 9 ಮಂದಿ ಕಣದಲ್ಲಿದ್ದು, ಬಿಜೆಪಿಯಿಂದ ದೀಪಕ್‌ ದೊಡ್ಡಯ್ಯ, ಕಾಂಗ್ರೆಸ್‌ನಿಂದ ನಯನಾ ಮೋಟಮ್ಮ, ಜೆಡಿಎಸ್‌ನಿಂದ ಎಂ.ಪಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದ ವಿಶೇಷ ಎಂದರೆ ದೀಪಕ್‌ ದೊಡ್ಡಯ್ಯ ಸ್ಥಳೀಯ (ಬಿಜೆಪಿ) ಮತ್ತು ಲೋಕಸಭಾ (ಪಕ್ಷೇತರ) ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡಿದ್ದರು. ಎಂ.ಪಿ. ಕುಮಾರಸ್ವಾಮಿ ವಿರೋ ಧಿ ಅಲೆ ಹಬ್ಬಿದ್ದರಿಂದ ದೀಪಕ್‌ ದೊಡ್ಡಯ್ಯ ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ ಹೊಸ ಪ್ರಯೋಗಕ್ಕೆ ಕೈಹಾಕಿದ್ದು, ಚುನಾವಣ ರಾಜಕೀಯಕ್ಕೆ ನಯನಾ ಅವರನ್ನು ಎಳೆದುತಂದಿದೆ. ಇನ್ನು ಬಿಜೆಪಿ ಟಿಕೆಟ್‌ ವಂಚಿತ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಬಿ.ಬಿ. ನಿಂಗಯ್ಯ ಟಿಕೆಟ್‌ ವಂಚಿತರಾಗಿ ಕಾಂಗ್ರೆಸ್‌ ಕದ ತಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆಯಾದಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ಬರಲಿದೆ. ಮೀಸಲು ಕ್ಷೇತ್ರವಾದ ಮೂಡಿಗೆರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ನಿರ್ಣಾಯಕವಾಗಿದ್ದು, ಒಕ್ಕಲಿಗ ಸಮುದಾಯ ಎರಡನೇ ಸ್ಥಾನದಲ್ಲಿದೆ. ದೀಪಕ್‌ ದೊಡ್ಡಯ್ಯ ಮತ್ತು ನಯನಾ ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದು, ಬಿಜೆಪಿಯಿಂದ 4 ಬಾರಿ ಸ್ಪ ರ್ಧಿಸಿ 3 ಬಾರಿ ಗೆದ್ದಿರುವ ಕುಮಾರಸ್ವಾಮಿ ಈಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದೆ.

ಸಂದೀಪ ಜಿ.ಎನ್‌.ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next