Advertisement
ಸರ್ಕಾರಿ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ, ಡೀಮ್ಡ್ ವಿಶ್ವವಿದ್ಯಾಲಯ, ಖಾಸಗಿ ಕಾಲೇಜು, ಸರ್ಕಾರಿ, ಅನುದಾನಿತ ಕಾಲೇಜು ಸೇರಿದಂತೆ ಎಲ್ಲ ಮಾದರಿಯ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳಲ್ಲೇ ಲಸಿಕೆ ಹಾಕಿಸಲು ಸರ್ಕಾರ ವ್ಯವಸ್ಥೆ ಮಾಡಿದರೆ, ಉಳಿದಂತೆ ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಸರ್ಕಾರದ ಅಧಿಕೃತ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಅನುಕೂಲವಾಗಲಿದೆ ಎಂಬುದು ವಿವಿಧ ಸಂಘಟನೆಗಳ ಬೇಡಿಕೆಯಾಗಿದೆ.ಈ ಸಂಬಂಧ ಈಗಾಗಲೇ ಮಾಜಿ ಮೇಯರ್ ಬಿ.ಎಸ್. ಸತ್ಯನಾರಾಯಣ( ಕಟ್ಟೆಸತ್ಯ) ಸೇರಿದಂತೆ ಅನೇಕರು ಉಪಮುಖ್ಯಮಂತ್ರಿಯೂ ಆಗಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರದಿಂದ ಎಲ್ಲ ವಿಶ್ವವಿದ್ಯಾಲಯಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರತಿ ವಿಶ್ವವಿದ್ಯಾಲಯದಲ್ಲೂ ಕೊರೊನಾ ಲಸಿಕೆ ಹಾಕಿಸಲು ಶಿಬಿರಗಳನ್ನು ಆಯೋಜಿಸಬೇಕು. ಆರಂಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೆ ಹಾಕಿಸಬೇಕು. ನಂತರ ವಿದ್ಯಾರ್ಥಿಗಳಿಗೆ ಹಾಕಿಸಬೇಕು. ಇಡೀ ಕ್ಯಾಂಪಸ್‌ನಲ್ಲಿ ಎಲ್ಲರೂ ಅತಿ ಶೀಘ್ರದಲ್ಲಿ ಲಸಿಕೆ ಪಡೆಯುವಂತೆ ಮಾಡಬೇಕು ಎಂದು ಈಗಾಗಲೇ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಕೊರೊನಾ ಲಸಿಕೆ ಲಭ್ಯತೆ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪ್ರತಿ ಕಾಲೇಜುಗಳಲ್ಲೂ ಲಸಿಕೆ ಶಿಬಿರ ನಡೆಸಿ, ನೀಡಬಹುದಾದಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯತೆಯಾದರೆ, ಆ ಬಗ್ಗೆ ಯೋಚನೆ ಮಾಡಲಾಗುತ್ತದೆ. ಸದ್ಯಕ್ಕೆ ಸರ್ಕಾರದಿಂದ ಕಾಲೇಜುಗಳಲ್ಲಿ ಲಸಿಕೆ ಶಿಬಿರ ನಡೆಸುವ ಯಾವ ಸೂಚನೆಯೂ ಬಂದಿಲ್ಲ. ಅಲ್ಲದೆ, ಈಗ ಕಾಲೇಜುಗಳು ರಜೆ ಇರುವುದರಿಂದ ಆನ್‌ಲೈನ್ ತರಗತಿ ಮಾತ್ರ ನಡೆಯುತ್ತಿದೆ. ಮುಂದೆ, ಪರಿಸ್ಥಿತಿ ಆಧಾರದಲ್ಲಿ ಸರ್ಕಾರ ಹೊರಡಿಸಬಹುದಾದ ಮಾರ್ಗಸೂಚಿಯಂತೆ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.