Advertisement

ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ, ಗಿಡಕ್ಕೆ ಕಾಡುತ್ತಿದೆ ರೋಗ

12:48 PM Nov 14, 2022 | Team Udayavani |

ಬಜಪೆ: ಪ್ರತೀ ತರಕಾರಿಗೂ ಮಾರುಕಟ್ಟೆಗೆ ಬರಲು ಅದರದ್ದೇ ಆದ ಸಮಯವಿರುತ್ತದೆ. ಈ ವೇಳೆ ಗ್ರಾಹಕರ ಬೇಡಿಕೆಯ ಲೆಕ್ಕಾಚಾರ ಹಾಕಿಕೊಂಡು ಕೃಷಿಕ ತರಕಾರಿ ಬೆಳೆಸಬೇಕಾಗುತ್ತದೆ. ಯಾವ ತರಕಾರಿ ಯಾವ ಸಮಯದಲ್ಲಿ ಹೆಚ್ಚು ದರ ಸಿಗಬಹುದು ಎಂಬುದು ಒಂದೆಡೆ. ಆದರೆ ಅದಕ್ಕೆ ಹವಾಮಾನ ಹೇಗೆ ಕೈಗೂಡುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗಿರುತ್ತದೆ.

Advertisement

ಈ ತರಕಾರಿಗಳು ಮಾರುಕಟ್ಟೆಗೆ ಬರುವ ಮೊದಲೇ ಅದಕ್ಕೆ ಎಲ್ಲಿಲ್ಲದ ಬೇಡಿಕೆ ಆರಂಭವಾಗುತ್ತದೆ. ಅವುಗಳ ದರ ಎಷ್ಟೇ ಅಧಿಕವಿರಲಿ, ಅದನ್ನು ಖರೀದಿಸಿ ಸವಿಯನ್ನು ಅನುಭವಿಸಲು ಗ್ರಾಹಕರು ಇಷ್ಟಪಡುತ್ತಾರೆ.

ಹಾಗೇಯೇ ಮಾರುಕಟ್ಟೆಯಲ್ಲಿ ಇದೀಗ ಬಸಳೆಯ ಸಮಯ. ಇದಕ್ಕೆ ಈಗ ಭಾರೀ ಬೇಡಿಕೆಯೂ ಇದೆ. ಮಳೆ ಕಡಿಮೆಯಾಗಿ, ಸೆಕೆ ಜಾಸ್ತಿಯಾದರೆ ಬಸಳೆ ಬೇಗ ಬೆಳೆಯುತ್ತದೆ ಎಂಬುದು ಕೃಷಿಕನ ಚಿಂತನೆ. ಮುಂಗಾರು ಭತ್ತದ ಬೇಸಾಯ ಕಟಾವು ಆಯಿತು. ಹಬ್ಬ ಮುಗಿದು ತುಳಸಿ ಪೂಜೆಯ ಸಮಯದಲ್ಲಿ ಎಲ್ಲೆಡೆ ಬಸಳೆ ಕೃಷಿ ಆರಂಭವಾಗುತ್ತದೆ.

ಮಾರುಕಟ್ಟೆಯಲ್ಲಿ ಬೇಗ ಸಿಗುವ ಬಸಳೆಯನ್ನು ಹೆಚ್ಚು ದರಕೊಟ್ಟು ಕೊಂಡುಹೋಗುತ್ತಾರೆ. ಇದರಿಂದ ಈಗ ಬಸಳೆ ಪದಾರ್ಥಕ್ಕಿಂತ ಜಾಸ್ತಿ, ಮನೆ, ಮನೆಯಲ್ಲಿ ಈ ಬಳ್ಳಿಯನ್ನು ನೆಡಲು ಕೊಂಡೋಗುವವರೇ ಜಾಸ್ತಿ.

ಕೃಷಿಕರಿಗೆ 50 ರೂ. ಮಾರುಕಟ್ಟೆಯಲ್ಲಿ 80 ರೂ.

Advertisement

ಕೃಷಿಕರಿಗೆ ಒಂದು ಕಟ್ಟು ಬಸಳೆಗೆ 50 ರೂ. ಸಿಗುತ್ತಿದೆ. ಆದರೆ ಮಾರುಕಟ್ಟೆ 70 ರಿಂದ 80 ರೂ. ತನಕ ಮಾರುತ್ತಿದ್ದಾರೆ. ಕಳೆದ ಬಾರಿ ಒಂದು ಕಟ್ಟಿಗೆ 40 ರೂ.ಸಿಗುತ್ತಿತ್ತು. ಮಾರುಕಟ್ಟೆಯಲ್ಲಿ 60 ರೂ.ಗೆ ಮಾರುತ್ತಿದ್ದರು. ಮೊದಮೊದಲಿಗೆ ಮಾತ್ರ ಈ ಬೆಲೆ ಸಿಗುತ್ತದೆ. ಎಲ್ಲೆಡೆ ಬಸಳೆ ಸಿಗುವಾಗ ಒಮ್ಮೆಲೇ ಬೇಡಿಕೆ ಕಡಿಮೆಯಾಗಿ ದರ ಕಡಿಮೆಯಾಗುತ್ತದೆ. ಮಳೆಯ ಅನಿಶ್ಚಿತತೆಯಿಂದ ಈಗ ಬಸಳೆ ಬೆಳೆಯಲು ಜನರು ಕೊಂಚ ಹಿಂಜರಿಕೆ ತೋರಿದ್ದಾರೆ. ಬೆಂಡೆ, ಹೀರೆಕಾಯಿಯಲ್ಲಿ ಪೆಟ್ಟು ತಿಂದ ಕೆಲ ಕೃಷಿಕರು ಬಸಳೆಯಲ್ಲಿಯಾದರೂ ಕೈಗೂಡಬಹುದು ಎಂಬ ಆಶಯದಲ್ಲಿದ್ದಾರೆ.

ಸೋರೆಗೆ ಬಳ್ಳಿ ಬಾಡುವ ರೋಗ

ಸೋರೆ ಕಾಯಿ ಬಳ್ಳಿ ಬಾಡುವ ಮೂಲಕ ಅದು ಸತ್ತು ಹೋಗುವ ರೋಗ ಶುರುವಾಗಿದೆ. ಬೆಳಗ್ಗೆ ಬಳ್ಳಿಗಳು ಆರೋಗ್ಯ ವಾಗಿರುತ್ತದೆ. ಮಧ್ಯಾಹ್ನ ಬಳ್ಳಿಯ ಅರ್ಧದಷ್ಟು ಬಾಡಿ ಹೋಗುತ್ತದೆ. ಬಳಿಕ ಅದು ಸತ್ತು ಹೋಗುತ್ತದೆ. ಇದರಿಂದ ನಷ್ಟವಾಗಿದೆ. ಈ ಬಗ್ಗೆ ಹಲವಾರು ಮದ್ದುಗಳನ್ನು ಉಪಯೋಗಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಕೃಷಿಕರು ಹೇಳಿತ್ತಾರೆ. ನಾವು ಒಂದು ಸೋರೆಕಾಯಿಗೆ 30 ರೂ.ನ ಹಾಗೆ ಮಾರುಕಟ್ಟೆಯಲ್ಲಿ ಮಾರುತ್ತೇವೆ. ವ್ಯಾಪಾರಿಗಳು ಕೆ.ಜಿ. 30ರಿಂದ 40 ರೂ. ಹಾಗೆ ಮಾರುತ್ತಿದ್ದಾರೆ.

ಬಸಳೆಯನ್ನು 70 ರೂ. ಕೊಟ್ಟು ತಂದ ಕೃಷಿಕ

ಕಳೆದ ಬಾರಿ ಕೃಷಿಕರಲ್ಲಿಯೇ ಬಸಳೆಯ ಬಳ್ಳಿಗಳು ಇದ್ದವು, ಅದರೆ ಈ ಬಾರಿ ಭಾರೀ ಮಳೆಯಿಂದಾಗಿ ಎಲ್ಲವೂ ಮಾಯವಾಯಿತು. ಬಸಳೆಯನ್ನು ನೆಡಲು ಒಂದು ಬಳ್ಳಿಗೆ 70 ರೂ. ಕೊಟ್ಟು ಒಂದು ತಿಂಗಳ ಹಿಂದೆ ತಂದಿದ್ದೇನೆ. ಇದರಿಂದಾಗಿ ಈಗ ಬಸಳೆ ಸಿಗಲು ಆರಂಭವಾಗಿದೆ ಎಂದು ಇಲ್ಲಿನ ಅಡ್ಕಬಾರೆಯ ಕೃಷಿಕ ಲಾನ್ಸಿ ಡಿ’ಸೋಜಾ ಹೇಳುತ್ತಾರೆ.

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next