Advertisement

ಹೆಚ್ಚಿದ ನೀರಿನ ಬೇಡಿಕೆ, ತಳ ತಲುಪಿದ ಭದ್ರಾ ಡ್ಯಾಂ

10:58 PM May 18, 2019 | Lakshmi GovindaRaj |

ಶಿವಮೊಗ್ಗ: ಮಲೆನಾಡಿನ ಪ್ರಮುಖ ಜಲಾಶಯಗಲ್ಲಿ ಒಂದಾದ ಭದ್ರಾ ಅಣೆಕಟ್ಟೆಯಲ್ಲೂ ನೀರು ತಳ ಸೇರುತ್ತಿದೆ. ಜಲಾಶಯದಲ್ಲಿ ನೀರು ಸಂಗ್ರಹವಾಗಿದ್ದರೂ ಬೇಸಿಗೆ ಬೆಳೆಗೆ ಮೇ 20ರವರೆಗೂ ನೀರು ಬಿಡುತ್ತಿರುವುದರಿಂದ ಡ್ಯಾಂ ತಳ ತಲುಪಿದೆ.

Advertisement

ಭದ್ರಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಹಂಗಾಮು ಬೆಳೆಗೆ ಭದ್ರಾ ಅಣೆಕಟ್ಟಿನಿಂದ 135ಕ್ಕೂ ಹೆಚ್ಚು ದಿನ ನೀರು ಬಿಡಲಾಗಿದ್ದು, ಮೇ 24ರವರೆಗೂ ನೀರು ಬಿಡಬೇಕೆಂದು ರೈತರು ಈಗಾಗಲೇ ಒತ್ತಡ ಹೇರಿದ್ದಾರೆ. ಈ ಬಗ್ಗೆ ನೀರಾವರಿ ಸಲಹಾ ಸಮಿತಿ ತೀರ್ಮಾನ ಕೈಗೊಳ್ಳಬೇಕಿದೆ.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜನರ ಜೀವನಾಡಿಯಾಗಿರುವ ಭದ್ರಾ ಅಣೆಕಟ್ಟಿನಲ್ಲಿ ಮೇ 3ರವರೆಗೂ 10 ಟಿಎಂಸಿ ನೀರಿತ್ತು. ಪ್ರಸ್ತುತ ಡ್ಯಾಂನಲ್ಲಿ 6.50 ಟಿಎಂಸಿ ನೀರಿದೆ. ಮೇ 20ರವರೆಗೂ ನೀರು ಬಿಟ್ಟರೆ ಅರ್ಧ ಟಿಎಂಸಿ, ಮೇ 25ರವರೆಗೂ ಬಿಟ್ಟರೆ ಒಂದೂವರೆ ಟಿಎಂಸಿಗೂ ಹೆಚ್ಚು ನೀರು ಖರ್ಚಾಗಲಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.10 ಅಡಿ ಇದ್ದು, 110 ಅಡಿವರೆಗೆ ಮಾತ್ರ ಭದ್ರಾ ಬಲದಂಡೆ ನಾಲೆ (ದಾವಣಗೆರೆ ಭಾಗ)ಗೆ ನೀರು ಬಿಡಬಹುದು. 120 ಅಡಿಗಿಂತ ಕೆಳಗೆ ಬಂದರೆ ನೀರಿನ ಒತ್ತಡ ಕಡಿಮೆಯಾಗಿ ರೈತರ ಬೇಡಿಕೆಯಂತೆ ನೀರು ಕೊನೆಭಾಗಕ್ಕೆ ತಲುಪುವುದಿಲ್ಲ.

ಎಡದಂಡೆ ನಾಲೆಗೆ 60 ಅಡಿವರೆಗೂ ನೀರು ಬಳಸಿಕೊಳ್ಳಲು ಅವಕಾಶವಿದೆ. ಮುಂಜಾಗ್ರತಾ ಕ್ರಮವಾಗಿ ಬೇಸಿಗೆ ಬೆಳೆಗೆ ಹಾಗೂ ಕುಡಿಯುವ ನೀರಿಗೆ 1 ಟಿಎಂಸಿ ಬಿಟ್ಟು ಉಳಿದ ನೀರನ್ನು ಮಾತ್ರ ಉಳಿಸಿಕೊಳ್ಳಲು ಚಿಂತನೆ ನಡೆದಿದೆ.

Advertisement

ನಾಲ್ಕು ವರ್ಷದ ನಂತರ ಭರ್ತಿ: ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ 2014ರಲ್ಲಿ ತುಂಬಿದ ಅಣೆಕಟ್ಟು 2018ರಲ್ಲಿ ಮತ್ತೆ ಭರ್ತಿಯಾಗಿದೆ. ಡ್ಯಾಂ ಅವ ಧಿಗೂ ಮುನ್ನ ಭರ್ತಿಯಾಗಿ ಹೆಚ್ಚುವರಿ ನೀರನ್ನೆಲ್ಲಾ ನದಿಗೆ ಬಿಡಲಾಗಿತ್ತು. ನಂತರ ಕೂಡ ನಿರಂತರ ಮಳೆಯಾಗಿದ್ದರಿಂದ ಮಳೆಗಾಲದ ಬೆಳೆಯ ನಂತರವೂ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿತ್ತು.

ಬಲದಂಡೆ ನಾಲೆ ವ್ಯಾಪ್ತಿಗೆ ಮಳೆಗಾಲದ ಬೆಳೆಗೆ ಮಾತ್ರ ನೀರು ಕೊಡಬೇಕೆಂದು ನಿಯಮವಿದೆ. ಆದರೂ ಡ್ಯಾಂ ತುಂಬಿದಾಗಲೆಲ್ಲ ನೀರು ಕೊಡಲಾಗಿದೆ. ಬೇಸಿಗೆ ಬೆಳೆಯಲ್ಲಿ ಭತ್ತ ಬಿಟ್ಟು ಉಳಿದ ಬೆಳೆಗಳನ್ನು ಬೆಳೆಯಲು ಅವಕಾಶವಿದ್ದರೂ ರೈತರು ಭತ್ತ ಬೆಳೆಯುವುದರಿಂದ ನೀರಿನ ಅಭಾವ ತಟ್ಟುತ್ತದೆ ಎಂಬುದು ಕೆಲ ರೈತರ ವಾದ. ಇಷ್ಟಾದರೂ ಈ ಬಾರಿ ಹೆಚ್ಚಿನ ಒತ್ತಡದಿಂದ ನೀರು ಹರಿಸಿ ಕೊನೆಭಾಗಕ್ಕೆ ನೀರು ಕೊಡುವ ಪ್ರಯತ್ನ ಮಾಡಲಾಗಿದೆ.

7 ಟಿಎಂಸಿ ಕುಡಿವ ನೀರಿಗೆ: ಈ ಬಾರಿ 7 ಟಿಎಂಸಿ ನೀರನ್ನು ಕುಡಿಯುವ ಬಳಕೆಗಾಗಿ ಮೀಸಲಿಡಲಾಗಿತ್ತು. ಇದರಲ್ಲಿ ಈಗಾಗಲೇ 5 ಟಿಎಂಸಿ ನೀರನ್ನು ಬಿಡಲಾಗಿದ್ದು, ಇನ್ನೊಂದು ಟಿಎಂಸಿಯನ್ನು ಅಗತ್ಯಕ್ಕೆ ತಕ್ಕಂತೆ ಬಿಡಲು ತೀರ್ಮಾನಿಸಲಾಗಿದೆ. ಇದರಲ್ಲಿ ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ, ಹಾವೇರಿ, ಬಿರ್ಲಾ ಕಂಪನಿ, ದಾವಣಗೆರೆ ಭಾಗಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ.

ಬೇಡಿಕೆ ಹೆಚ್ಚಳ: 1 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಭದ್ರಾ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ಕೃಷಿ ಚಟುವಟಿಕೆಗಳು ವಿಸ್ತಾರಗೊಂಡಿದ್ದು ನೀರಿನ ಬೇಡಿಕೆ ಹೆಚ್ಚಾಗಿದೆ. ನಿಷೇಧಾಜ್ಞೆ ಹೇರಿ ನೀರನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಪಂಪ್‌ಸೆಟ್‌ಗಳ ವಿರುದ್ಧ ಬೇಸಿಗೆ ವೇಳೆ ಸಮರವೇ ನಡೆಯುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಮುಕ್ತಾಯವಾದರೆ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.

ಮುಂಜಾಗ್ರತಾ ಕ್ರಮವಾಗಿ 6 ಟಿಎಂಸಿ ನೀರನ್ನು ಉಳಿಸಿಕೊಳ್ಳುವುದು ವಾಡಿಕೆ. ಆದರೆ, ರೈತರ ಒತ್ತಡಕ್ಕೆ ಮಣಿದು ಮೇ 20ರವರೆಗೂ ನೀರು ಬಿಡಲಾಗಿದೆ. ಮತ್ತೆ ಮೇ 25ರವರೆಗೂ ನೀರು ಬಿಡಬೇಕೆಂಬ ಒತ್ತಡ ಬಂದಿದೆ. ಡ್ಯಾಂ ಅಂಕಿ-ಅಂಶಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ನೀರಾವರಿ ಸಲಹಾ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
-ರವಿಚಂದ್ರ, ಎಇ, ಭದ್ರಾ ಅಣೆಕಟ್ಟು

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next