ಕುಷ್ಟಗಿ: ಅಡುಗೆ ಎಣ್ಣೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಬೇಡಿಕೆ ಈ ವರ್ಷವೂ ಮುಂದುವರಿದಿದೆ. ಹಿನ್ನೆಲೆಯಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಅಂಗಡಿಯವರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ವಾರದ ಹಿಂದೆ ತಾಲೂಕಿನಾದ್ಯಂತ ಭರಣಿ ಮಳೆ ತಕ್ಕಮಟ್ಟಿಗೆ ಸುರಿದಿದೆ. ಮಳೆ ನಿರೀಕ್ಷೆಯಲ್ಲಿರುವ ರೈತರು, ಸೂರ್ಯಕಾಂತಿ ಬಿತ್ತನೆಗೆ ಹೆಚ್ಚು ಉತ್ಸುಕರಾಗಿದ್ದಾರೆ. ಈಗಾಗಲೇ ಕುಷ್ಟಗಿ ಸೇರಿದಂತೆ ಹೋಬಳಿ ಪ್ರದೇಶಗಳ ಕೃಷಿ ಪರಿಕರ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ. ಸ್ಯಾಂಡೋಜ್ 3 ಸಾವಿರ ರೂ., ಗಂಗಾ ಕಾವೇರಿ 2,400 ರೂ,, ಯುಪಿಎಲ್ (ಅಡ್ವಾಂಟಾ), ಸಂಕ್ರಾಂತಿ, ಜ್ವಾಲಾ, ಚಾಂಪ ಹೀಗೆ ಮೊದಲಾದ ಸೂರ್ಯಕಾಂತಿ ಬಿತ್ತನೆ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಪ್ರತಿ ಸೂರ್ಯಕಾಂತಿ ಪ್ಯಾಕೆಟ್‌ಗೆ ನಿಗದಿತ ಬೆಲೆಗಿಂತ 100ರಿಂದ 150 ರೂ. ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ ಎನ್ನುವುದು ರೈತರ ಆರೋಪವಾಗಿದೆ. ಕೆಲವು ಬೇಡಿಕೆಯಲ್ಲಿರುವ ಬೀಜ ಕಂಪನಿಗಳ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಯದ್ವಾತದ್ವ ಬೆಲೆ ಹೆಚ್ಚಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ಮಳೆಗೆ ಸೂರ್ಯಕಾಂತಿ ಬಿತ್ತನೆ ಮಾಡಲು ಸಿದ್ಧತೆಯಲ್ಲಿದ್ದಾರೆ. ಹೀಗಾಗಿ ಸರ್ಕಾರ ರೈತ ಸಂಪರ್ಕಗಳಿಂದ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಪೂರೈಸಬೇಕು ಎನ್ನುವುದು ರೈತರ ವಾದವಾಗಿದೆ.
ಕೃಷಿ ಪರಿಕರ ಅಂಗಡಿಯವರು ಹೆಚ್ಚಿನ ಬೆಲೆಗೆ ಬೀಜ ಮಾರುತ್ತಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು, ಕೃಷಿ ಪರಿಕರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ದರಕ್ಕೆ ಮಾರಾಟ ಮಾಡಬೇಡಿ, ಸೂರ್ಯಕಾಂತಿ ಬೀಜ ದಾಸ್ತಾನು ಇದ್ದರೂ ಇಲ್ಲ ಎಂದು ಹೇಳಬೇಡಿ ಎಂದು ತಾಕೀತು ಮಾಡಿದ್ದಾರೆ.
ಸೂರ್ಯಕಾಂತಿ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಇದೆ. ಹೀಗಾಗಿ ರೈತರು ಸೂರ್ಯಕಾಂತಿ ಬೀಜ ಬಿತ್ತನೆಗೆ ಮುಂದಾಗಿದ್ದಾರೆ. ನಮ್ಮ ಭಾಗದಲ್ಲಿ ಗಂಗಾ ಕಾವೇರಿ ಬೀಜ ಬಿತ್ತನೆ ಮಾಡುತ್ತಾರೆ. ಆಯಾ ಕಂಪನಿಯ ಎಂಆರ್‌ಪಿ ದರಗಳಲ್ಲಿ ವ್ಯತ್ಯಾಸವಿದೆ. ಹೆಚ್ಚುವರಿ ದರದಲ್ಲಿ ಬಿತ್ತನೆ ಬೀಜ ಮಾರಾಟದ ಬಗ್ಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಕೃಷಿ ಪರಿಕರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಒಂದು ವೇಳೆ ಹೆಚ್ಚಿನ ದರದಲ್ಲಿ ಬಿತ್ತನೆ ಬೀಜ ಮಾರಾಟದ ಬಗ್ಗೆ ರೈತರಿಂದ ದೂರು ಬಂದರೆ ಪರಿಗಣಿಸಿ ಕ್ರಮವಹಿಸುತ್ತೇವೆ.
–ರಾಘವೇಂದ್ರ ಕೊಂಡಗುರಿ, ಕೃಷಿ ಅಧಿಕಾರಿ