Advertisement

ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ

12:20 PM Jun 08, 2020 | Suhan S |

ಧಾರವಾಡ: ರೋಣಿ ಮಳಿ ಬಿದ್ರ ಓಣಿ ತುಂಬಾ ಕಾಳು… ಅರ್ಥಾರ್ಥ ಮೇ ತಿಂಗಳಾಂತ್ಯದಲ್ಲಿ ಸುರಿಯುವ ಮುಂಗಾರು ಪೂರ್ವ ಮಳೆ ಚೆನ್ನಾಗಿ ಸುರಿದರೆ ರೈತರು ಸುಭಿಕ್ಷುವಾಗಿ ಎಲ್ಲಾ ಬೆಳೆ ಬೆಳೆದು ಅಧಿಕ ಧಾನ್ಯ ಒಕ್ಕಬಲ್ಲರು.

Advertisement

ಹೌದು. ಇದು ಪರಂಪರಾಗತ ಕೃಷಿ ಪದ್ಧತಿಯಲ್ಲಿ ಬಿತ್ತನೆಗೆ ಭೂಮಿ ಹದ ಮಾಡುವ ಸಂಧಿಕಾಲ. ಈ ಸಂದರ್ಭದಲ್ಲಿಯೇ ದೇಶಿ ಪದ್ಧತಿಯಲ್ಲಿ ಸಂಗ್ರಹಿಸಿಟ್ಟುಕೊಂಡ ಬೀಜಗಳು ಹೊರಕ್ಕೆ ಬರಬೇಕು. ಆದರೆ ಬದಲಾದ ಕೃಷಿ ಪದ್ಧತಿ ಹಿನ್ನೆಲೆಯಲ್ಲಿ ಬೀಜ ಸಂಗ್ರಹಣೆ ಕೈ ಬಿಟ್ಟ ರೈತರು ನೇರವಾಗಿ ಕಂಪನಿಗಳ ಬೀಜಕ್ಕೆ ಶರಣಾಗಿದ್ದಾರೆ. ಹೀಗಾಗಿ ಕಂಪನಿ ಬೀಜಗಳ ಕೊರತೆ, ಕಳಪೆ ಗುಣಮಟ್ಟ, ಕಡಿಮೆ ಇಳುವರಿ ಮತ್ತು ಅಧಿಕ ಬೆಲೆ ತೆತ್ತುವಂತಾಗಿದೆ. ಈಗ ಮತ್ತೆ ದೇಶಿ ಬೀಜಗಳ ಬೆನ್ನು ಬಿದ್ದಿದ್ದಾರೆ ರೈತರು.

ಈ ವರ್ಷ ದೇಶಿ ಪದ್ಧತಿಯಲ್ಲಿ ಸುರಕ್ಷಿತವಾಗಿ ಸಂರಕ್ಷಣೆ ಮಾಡಿ ಇಟ್ಟಿರುವ ಹೆಸರು, ಈರುಳ್ಳಿ, ಭತ್ತ, ಶೇಂಗಾ ಬೀಜಗಳಿಗೆ ಬೇಡಿಕೆ ಹೆಚ್ಚಿದೆ. ದೇಶಿ ಬೀಜಗಳು ಕಂಪನಿ ಬೀಜಗಳ ಬೆಲೆಗಿಂತ ದುಪ್ಪಟ್ಟು ದರದಲ್ಲಿ ಮಾರಾಟವಾಗುತ್ತಿವೆ. ಮುಂಗಾರು ಪೂರ್ವ ಮಳೆ ಚೆನ್ನಾಗಿ ಸುರಿದಿದ್ದರಿಂದ ಮತ್ತು ನಿಸರ್ಗ ಚಂಡ ಮಾರುತದ ಕೊಡುಗೆ ಎನ್ನುವಂತೆ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದು ಮತ್ತು ನಂತರದ ಹದ ಬರಿತ ಹಂಗಾಮಿನಿಂದ ಇದೀಗ ಬಿತ್ತನೆ ಜೋರಾಗಿ ಸಾಗಿದೆ. ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆಗೆ ಹಿಂದೇಟು ಹಾಕದೆ ಮುನ್ನುಗ್ಗಿದ್ದರಿಂದ ವಿವಿಧ ಬೆಳೆಯ ಬೀಜಗಳಿಗೆ ಭಾರಿ ಬೇಡಿಕೆ ಬಂದಿದೆ. ಆದರೆ ನೇರವಾಗಿ ಮಾರುಕಟ್ಟೆಯಿಂದಲೇ ಬೀಜ ಕೊಳ್ಳುವ ರೈತರು ಬೀಜದ ಲಭ್ಯತೆಯ ಕೊರತೆಯಿಂದ ಕಂಗಾಲಾಗಿದ್ದಾರೆ.

ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದರಿಂದ ಈ ವರ್ಷ ಜಿಲ್ಲೆಯ ಧಾರವಾಡ, ನವಲಗುಂದ, ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕಿನ ಬೆಳವಲದ ಸೀಮೆಯಲ್ಲಿ ಹೆಸರು, ಈರುಳ್ಳಿ ಮತ್ತು ಶೇಂಗಾ ಬಿತ್ತನೆಗೆ ಉತ್ತಮ ವಾತಾವರಣವಿದೆ. ಹೀಗಾಗಿ ಹೆಸರು ಬೀಜಕ್ಕೆ ಭಾರೀ ಬೇಡಿಕೆ ಉಂಟಾಗಿದ್ದು, ಕಳೆದ ಎರಡು ತಿಂಗಳ ಹಿಂದಷ್ಟೇ ಕ್ವಿಂಟಲ್‌ಗೆ 5600 ರೂ. ಇದ್ದ ಹೆಸರು ಬೀಜದ ಬೆಲೆ ಇದೀಗ 17,000ಕ್ಕೆ ಏರಿಕೆಯಾಗಿದೆ.

ಉಳ್ಳಾಗಡ್ಡಿ ಬೆಲೆ ನಂ.1: ಸದ್ಯಕ್ಕೆ ಬಿತ್ತನೆ ಬೀಜದಲ್ಲಿ ಅತೀ ಹೆಚ್ಚು ಬೆಲೆಗೆ ಬೀಜಗಳು ಮಾರಾಟವಾಗುತ್ತಿರುವುದು ಉಳ್ಳಾಗಡ್ಡಿ (ಈರುಳ್ಳಿ)ಬೀಜ. ಕಳೆದ ವರ್ಷ ವಿಪರೀತ ಮಳೆಯಿಂದ ಈರುಳ್ಳಿ ಬೆಳೆ ಸಂಕಷ್ಟಕ್ಕೆ ಸಿಲುಕಿ ಇಳುವರಿ ಚೆನ್ನಾಗಿ ಬರಲೇ ಇಲ್ಲ. ಹೀಗಾಗಿ ಬೀಜ ಸಂಗ್ರಹಣೆಯೂ ಅಷ್ಟಾಗಿ ಆಗಲಿಲ್ಲ. ಇದು ಮರಳಿ ಈರುಳ್ಳಿ ಬಿತ್ತುವ ರೈತರಿಗೆ ಸಂಕಷ್ಟ ತಂದಿದೆ. ಕ್ವಿಂಟಲ್‌ ಬೀಜ ಸಂಗ್ರಹಿಸುವ ರೈತರು ಬರೀ ಶೇ.30 ಈರುಳ್ಳಿ ಬೀಜ ಸಂಗ್ರಹಿಸಿಕೊಂಡಿದ್ದಾರೆ. ಹೀಗಾಗಿ ಇದೀಗ ಈರುಳ್ಳಿ ಬೀಜದ ಬೆಲೆ ವಿಪರೀತ ಏರಿಕೆ ಕಂಡಿದ್ದು, ಒಂದು ಕೆ.ಜಿ.ಈರುಳ್ಳಿ ಬೀಜಕ್ಕೆ 2200 ರೂ. ಬೆಲೆ ಬಂದಿದೆ. ಇನ್ನು ಕಂಪನಿಗಳು ನೀಡುವ ಈರುಳ್ಳಿ ಬೀಜದ ಬೆಲೆ 1400 ರೂ. ಇದ್ದು, ಕಳೆಪೆ ಬೀಜದ ಆತಂಕದಿಂದ ಇವುಗಳನ್ನು ಬಿತ್ತಲು ರೈತರು ಹಿಂದೇಟು ಹಾಕುತ್ತಿದ್ದಾರೆ.

Advertisement

50 ಸಾವಿರ ಹೆಕ್ಟೇರ್‌ನಲ್ಲಿ ಹೊಂಬೆಸರು: ಜಿಲ್ಲೆಯಲ್ಲಿ ಹೊಂಬೆಸರು (ಹಸಿರು ಬಣ್ಣದ ಹೆಸರು) 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇನ್ನಷ್ಟು ಬಿತ್ತನೆಯಾಗುವ ನಿರೀಕ್ಷೆ ಇದೆ. ಹೆಸರು ಐದು ಕೆ.ಜಿ.ಯ ಒಂದು ಪಾಕೀಟಿಗೆ 363ರೂ. ಇದ್ದರೆ, ಹಳ್ಳಿಗರೇ ಸಂಗ್ರಹಿಸಿ ಮಾರುತ್ತಿರುವ ಹೆಸರು 10 ಕೆ.ಜಿ.ಗೆ (ಒಂದು ಚಿಟ್ಟಿಗೆ) 1200 ರೂ. ಬೆಳೆ ಬಂದಿದೆ. ಇನ್ನು ಗೋವಿನಜೋಳ ಸರ್ಕಾರಿ ಬೆಲೆ 5.ಕೆ.ಜಿ. ಪಾಕೀಟಿಗೆ 650 ರೂ. ಇದ್ದರೆ, ಖಾಸಗಿ ಕಂಪನಿಗಳಲ್ಲಿ 1200 ರೂ. ಗಳವರೆಗೂ ಇದೆ. ಹಳ್ಳಿಗರು ನೀಡುವ ಬೀಜ ಚಿಟ್ಟಿಗೆ 1500 ರೂ. ಇದೆ.

ಭತ್ತ, ಸೋಯಾ ಜುಗಲಂಬಂದಿ: ಇನ್ನು ಜಿಲ್ಲೆಯ ಅರೆಮಲೆನಾಡು ತಾಲೂಕುಗಳಾದ ಧಾರವಾಡ, ಕಲಘಟಗಿ, ಅಳ್ನಾವರದಲ್ಲಿ ದೇಶಿ ಭತ್ತ ಬಿತ್ತನೆ ಕಾರ್ಯ ಮುಕ್ತಾಯವಾಗಿದ್ದು, ಈಗಾಗಲೇ ಭತ್ತ ಚೆನ್ನಾಗಿ ಹುಟ್ಟಿದ್ದು, ಎರಡೆರಡು ಬಾರಿ ಬರಾವು ಹೊಡೆಯುವ ಕಾರ್ಯವನ್ನು ರೈತರು ಮುಗಿಸಿದ್ದಾರೆ. ನಿಸರ್ಗ ಚಂಡ ಮಾರುತದ ಕೃಪೆಯಿಂದ ಇದೀಗ ಭೂಮಿ ತೀವ್ರ ತೇವಾಂಶದಿಂದ ಕೂಡಿದ್ದರಿಂದ ಹೆಚ್ಚು ಜನರು ಸೋಯಾ ಅವರೆ ಬಿತ್ತನೆಗೆ ಒತ್ತು ನೀಡುತ್ತಿದ್ದು, ಜಿಲ್ಲೆಯಲ್ಲಿ ಈ ವರ್ಷ ಅಂದಾಜು 25 ಸಾವಿರ ಹೆಕ್ಟೇರ್‌ ಸೋಯಾ ಬಿತ್ತನೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಮಳೆ ವಿಳಂಬವಾಗಿದ್ದರಿಂದ ಹೆಚ್ಚಿನ ರೈತರು ಸೋಯಾಗೆ ಬೆನ್ನು ಬಿದ್ದಿದ್ದರು. ಆದರೆ ಕಳೆದ ವರ್ಷ ಉತ್ತಮ ವರ್ಷಧಾರೆ ಕೈ ಹಿಡಿದಿದ್ದರಿಂದ ಭತ್ತ ಚೆನ್ನಾಗಿ ಬಂತು. ಇದೇ ನಂಬಿಕೆಯಲ್ಲಿ ಇದೀಗ ರೈತರು ಮರಳಿ ದೇಶಿ ಭತ್ತದ ಬೆನ್ನು ಬಿದ್ದಿದ್ದಾರೆ. ಬರಗಾಲವಿದ್ದಾಗ ಸಂಪೂರ್ಣ ಸೋಯಾ ಅವರೆಯತ್ತ ವಾಲಿದ್ದ ಅರೆಮಲೆನಾಡಿಗರು ಇದೀಗ ಮತ್ತೆ ಮರಳಿ ಭತ್ತಕ್ಕೆ ತಿರುಗಿದ್ದಾರೆ. ಹೀಗಾಗಿ ಇಲ್ಲಿ ಭತ್ತ, ಸೋಯಾ ಜುಗಲಬಂದಿ ನಡೆದಿದೆ.

ಸಂಪ್ರದಾಯಬದ್ಧ ರೈತ ಕುಟುಂಬಗಳು ಇಂದಿಗೂ ಬೀಜ ಸಂಗ್ರಹಣೆಯನ್ನು ಸ್ವಂತ ಮಾಡಿಕೊಳ್ಳುತ್ತಿದ್ದು, ಇದು ಅವರ ಕೃಷಿ ಉತ್ಪಾದನೆ ಹೆಚ್ಚಿಸಲು ಕೂಡ ಸಹಕಾರಿಯಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 55 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದೇಶಿ ಮತ್ತು ಸಾವಯವ ಬೀಜಗಳು ಬಿತ್ತನೆಯಾಗುವ ನಿರೀಕ್ಷೆ ಇದೆ.

ಬೀಜ ಸಂಗ್ರಹಿಸಿದರೈತರಿಗೆ ಲಾಟರಿ :  ಜಿಲ್ಲೆಯಲ್ಲಿ ಸದ್ಯಕ್ಕೆ ಕೃಷಿ ಇಲಾಖೆ ಲೆಕ್ಕದ ಪ್ರಕಾರ ಒಟ್ಟು 2.41,589 ಹೆಕ್ಟೇರ್‌ ಭೂಮಿ ಬಿತ್ತನೆಯಾಗುತ್ತಿದೆ. ಭತ್ತ, ಹೆಸರು, ಹತ್ತಿ, ಮೆಕ್ಕೆಜೋಳ, ಸೋಯಾ ಸೇರಿದಂತೆ ಒಟ್ಟು 13,00 ಕ್ವಿಂಟಲ್‌ನಷ್ಟು ವಿವಿಧ ಬೀಜಗಳು ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ವಿತರಣೆಯಾಗಿವೆ. ಈ ಮಧ್ಯೆ ರೈತರ ಪೈಕಿಯೇ ಕೆಲವಷ್ಟು ಜನರು ಕಷ್ಟಪಟ್ಟು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಟ್ಟುಕೊಂಡಿದ್ದಾರೆ. ಅವರಿಗೆ ಲಾಟರಿ ಹೊಡೆದಂತಾಗಿದ್ದು, ಕೈ ತುಂಬಾ ಹಣ ಸಂಪಾದಿಸುತ್ತಿದ್ದಾರೆ. ಕಷ್ಟಪಟ್ಟು ಬೀಜ ಸಂಗ್ರಹಿಸಿದ್ದಕ್ಕೆ ಅವರಿಗೆ ಉತ್ತಮ ಪ್ರತಿಫಲ ಲಭಿಸಿದಂತಾಗಿದೆ. ಬೀಜ ಸಂಗ್ರಹಿಸಿಕೊಳ್ಳುವುದಕ್ಕೆ ಸೋಮಾರಿತನ ತೋರಿದವರು ತಾವೇ ತಮ್ಮ ಕೈ ಮೇಲೆ ಬರೆ ಎಳೆದುಕೊಂಡಂತಾಗಿದೆ.

ಕಳೆದ ವರ್ಷ ಮುಂಗಾರು ವಿಳಂಬದಿಂದ ಹೆಸರು ಮತ್ತು ಶೇಂಗಾ ಚೆನ್ನಾಗಿ ಬೆಳೆಯಲಿಲ್ಲ. ನಂತರ ಅತೀ ಮಳೆಯಿಂದ ಉಳ್ಳಾಗಡ್ಡಿ ಬೀಜ ಸಂಗ್ರಹಣೆಯಾಗಲಿಲ್ಲ. ಹೀಗಾಗಿ ಈ ಮೂರೂ ಬಿತ್ತನೆ ಬೀಜಗಳ ತೀವ್ರ ಅಭಾವವಿದೆ. ರೈತರು ಈ ಬೀಜವನ್ನು ಕೊಂಡುಕೊಂಡೇ ಬಿತ್ತಬೇಕಿದ್ದು, ಬೆಲೆ ಗಗನಕ್ಕೇರಿದೆ. –ಮಂಜುನಾಥ ಹುರುಳಿ, ಕಬ್ಬೇನೂರು ರೈತ.

ಮುಂಗಾರುಪೂರ್ವ ಮಳೆ ಚೆನ್ನಾಗಿ ಆಗಿದ್ದರಿಂದ ಜಿಲ್ಲೆಯಲ್ಲಿ ಹೆಸರು ಬಿತ್ತನೆಗೆ ರೈತರು ಒತ್ತು ನೀಡಿದ್ದಾರೆ. ಇನ್ನುಳಿದಂತೆ ಎಲ್ಲಾ ಬಿತ್ತನೆ ಬೀಜಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ಪೂರೈಸುತ್ತಿದ್ದೇವೆ. ಜೂನ್‌ ಅಂತ್ಯದವರೆಗೂ ಬಿತ್ತನೆ ಕಾರ್ಯ ನಡೆಯಲಿದೆ.  -ರಾಜಶೇಖರ್‌, ಜಂಟಿ ನಿರ್ದೇಶಕರು, ಕೃಷಿ ಇಲಾಖೆ,ಧಾರವಾಡ.

 

ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next