ಮಂಗಳೂರು: ಮುಂಗಾರುಪೂರ್ವ ಉತ್ತಮ ಮಳೆ ಹಾಗೂ ಸಕಾಲದಲ್ಲಿ ಮುಂಗಾರು ಆಗಮನವು ರೈತರಲ್ಲಿ ಪುಳಕ ಉಂಟು ಮಾಡಿದ್ದು, ಈ ಸಾಲಿನಲ್ಲಿ ಭತ್ತದ ಬೆಳೆಗೆ ಪೂರಕ ವಾತಾವರಣವಿದೆ.
ದ.ಕ.ಜಿಲ್ಲೆಯಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 10,260 ಹೆಕ್ಟೇರ್ ಭತ್ತ ಬೆಳೆ ಗುರಿ ಇರಿಸಿಕೊಳ್ಳಲಾಗಿದೆ. ಕೃಷಿ ಚಟುವಟಿಕೆ ಆರಂಭ ಆಗಿದ್ದು, ಬಿತ್ತನೆ ಬೀಜಕ್ಕೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.
ಜಿಲ್ಲೆಗೆ ಈ ಬಾರಿ 600 ಕ್ವಿಂಟಾಲ್ ಬಿತ್ತನೆ ಬೀಜ ಬಂದಿದ್ದು, ಇದರಲ್ಲಿ 470 ಕ್ವಿಂಟಾಲ್ ಬೀಜವನ್ನು ಈಗಾಗಲೇ ವಿತರಿಸಲಾಗಿದೆ. ಪ್ರಸ್ತುತ 130 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. 435 ಕ್ವಿಂಟಾಲ್ ಎಂಒ4, 120 ಕ್ವಿಂಟಾಲ್ ಜಯ, 45 ಕ್ವಿಂಟಾಲ್ ಜ್ಯೋತಿ ಬೀಜ ತರಿಸಲಾಗಿತ್ತು. ಈ ವರ್ಷ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿರುವ ಹಿನ್ನಲೆಯಲ್ಲಿ ಇನ್ನೂ ಹೆಚ್ಚುವರಿಯಾಗಿ 200 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಕರ್ನಾಟಕ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಮಂಗಳೂರು ತಾಲೂಕಿ ನಲ್ಲಿ 4,600 ಹೆ., ಬಂಟ್ವಾಳದಲ್ಲಿ 3,550 ಹೆ., ಬೆಳ್ತಂಗಡಿಯಲ್ಲಿ 1,600 ಹೆ., ಪುತ್ತೂರಿ ನಲ್ಲಿ 360 ಹಾಗೂ ಸುಳ್ಯದಲ್ಲಿ 150 ಹೆ. ಭತ್ತದ ಬೆಳೆ ಗುರಿ ಇರಿಸಿಕೊಳ್ಳಲಾಗಿದೆ. 2019-20ರಲ್ಲಿ 15,900 ಹೆಕ್ಟೇರ್ ಭತ್ತ ಬೆಳೆ ಗುರಿ ಇರಿಸಿದ್ದು, ಇದರಲ್ಲಿ 10,411 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಾಗಿತ್ತು.
ಸಾಮಾನ್ಯವಾಗಿ ಜೂನ್ ತಿಂಗಳ ಆರಂಭದಲ್ಲಿ ಭತ್ತದ ನೇಜಿ ಮಾಡುವ ಕಾರ್ಯ ಆರಂಭಗೊಳ್ಳುತ್ತದೆ. ಇದು ನಾಟಿಗೆ ಸಿದ್ಧಗೊಳ್ಳಲು 25 ದಿನಗಳು ಬೇಕಾಗಿದ್ದು, ಜುಲೈ ತಿಂಗಳ 15ರೊಳಗೆ ಜಿಲ್ಲೆಯಲ್ಲಿ ಬಹುತೇಕ ಭತ್ತದ ನಾಟಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಳೆದ ಸಾಲಿನಲ್ಲಿ ಪೂರ್ವ ಮುಂಗಾರು ಮಳೆ ಕೊರತೆ ಹಿನ್ನಲೆಯಲ್ಲಿ ನೇಜಿ ತಯಾರಿ ಕಾರ್ಯಕ್ಕೆ ಹಿನ್ನಡೆಯಾಗಿತ್ತು.
ಸದ್ಯಕ್ಕೆ ರಸಗೊಬ್ಬರ ಕೊರತೆ ಇಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 1,426 ಟನ್ ಯೂರಿಯಾ, 3,255 ಟನ್ ಕಾಂಪ್ಲೆಕ್ಸ್ , 120 ಟನ್ ಡಿಎಪಿ ಹಾಗೂ 247 ಟನ್ ಎಂಒಪಿ ರಸಗೊಬ್ಬರ ದಾಸ್ತಾನು ಇದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ ರಸ ಗೊಬ್ಬರ ಕೊರತೆ ಇಲ್ಲ. ಸಾಮಾನ್ಯವಾಗಿ ಮುಂಗಾರು ಹಂಗಾಮಿ ನಲ್ಲಿ ಒಟ್ಟು 11,950 ಮೆ.ಟನ್ ರಸಗೊಬ್ಬರಕ್ಕೆ ಬೇಡಿಕೆ ಇರುತ್ತದೆ.
ಕೃಷಿ ಕಾರ್ಯ ಚುರುಕು
ಕರಾವಳಿಯಲ್ಲಿ ಉತ್ತಮ ಮುಂಗಾರು ಪೂರ್ವ ಮಳೆ ಜತೆಗೆ ಈಗ ಮಳೆಗಾಲ ಕೂಡ ವಾಡಿಕೆಯಂತೆ ಆರಂಭ ವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಕಾರ್ಯ ಚುರುಕುಗೊಳ್ಳುತ್ತಿದೆ. ಪ್ರಸ್ತುತ ಭತ್ತದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದೆ. ಭತ್ತದ ಬೀಜಕ್ಕೆ ಹೆಚ್ಚುವರಿಯಾಗಿ ಕರ್ನಾಟಕ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
– ಡಾ| ಸೀತಾ, ಕೃಷಿ ಜಂಟಿ ನಿರ್ದೇಶಕರು, ದ.ಕ. ಜಿಲ್ಲೆ