Advertisement

ಗೌರಿ ಹತ್ಯೆಕೋರರ ಸೆರೆಗೆ ಹೆಚ್ಚಿದ ಆಗ್ರಹ

08:55 AM Sep 08, 2017 | Harsha Rao |

ನ್ಯೂಯಾರ್ಕ್‌/ಹೊಸದಿಲ್ಲಿ: ಕರ್ನಾಟಕದಲ್ಲಿ ನಡೆದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್‌ ಹತ್ಯೆ ಕುರಿತು ವಿಶ್ವವ್ಯಾಪಿ ಖಂಡನೆ ಗುರುವಾರವೂ ಮುಂದುವರಿದಿದೆ. ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌, ಖ್ಯಾತ ಚಿತ್ರ ನಟ ಕಮಲ್‌ ಹಾಸನ್‌, ಕೇಂದ್ರ ಸಚಿವ ರಾಮದಾಸ್‌ ಅಠಾವಳೆ, ಬಿಎಸ್ಪಿ ನಾಯಕಿ ಮಾಯಾವತಿ ಸೇರಿದಂತೆ ಹಲವು ಗಣ್ಯರು ಗೌರಿ ಹತ್ಯೆಯನ್ನು ಖಂಡಿಸಿದ್ದಾರೆ.

Advertisement

ಅಮೆರಿಕದ ಪ್ರಮುಖ ಮಾನವ ಹಕ್ಕುಗಳ ಸಂಸ್ಥೆಯಾದ ಹ್ಯೂಮನ್‌ ರೈಟ್ಸ್‌ ವಾಚ್‌(ಎಚ್‌ಆರ್‌ಡಬ್ಲ್ಯು) ಕೂಡ ಗೌರಿ ಹತ್ಯೆಯನ್ನು ಕಟು ಪದಗಳಿಂದ ವಿರೋಧಿಸಿದ್ದು, ಆದಷ್ಟು ಬೇಗ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಎಂದು ಆಗ್ರಹಿಸಿದೆ. ದಿಟ್ಟ ಪತ್ರಕರ್ತೆಯ ಕೊಲೆ ರಾಜಕೀಯ ಪ್ರೇರಿತ ಆಗಿರುವ ಸಾಧ್ಯತೆಯಿದ್ದು, ಸೂಕ್ತ ತನಿಖೆ ನಡೆಯ ಬೇಕೆಂದು ಒತ್ತಾಯಿಸಿದೆ.

ಅಸಹಿಷ್ಣು ಸಮಾಜವಾಗಬಾರದು: ಇದೇ ವೇಳೆ, ಗೌರಿ ಹತ್ಯೆಯನ್ನು ಖಂಡಿಸಿ ಮಾತಾ ಡಿರುವ ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌, “ಭಾರತವು ಅಸಹಿಷ್ಣು ಸಮಾಜ ಆಗಬಾರದು. ದೇಶದ ಆರ್ಥಿಕ ಪ್ರಗತಿಗೆ ಸಹಿಷ್ಣುತೆ ಎನ್ನುವುದು ಅತ್ಯಂತ ಮುಖ್ಯ’ ಎಂದಿದ್ದಾರೆ. ಸಾರ್ವಜನಿಕ ಬದು ಕಿನಲ್ಲಿ ಇರುವವರೂ ಕೆಲವೊಮ್ಮೆ ದೇಶಕ್ಕೆ ಒಳ್ಳೆ ಯದು ಎಂದಾದರೆ ಅದನ್ನು ಹೇಳ ಲೇ ಬೇಕು. ಗೌರಿ ಲಂಕೇಶ್‌ ಹತ್ಯೆ ದುರದೃಷ್ಟ ಕರ  ಎಂದೂ ಹೇಳಿದ್ದಾರೆ ರಾಜನ್‌.

ಪತ್ರಕರ್ತನ ಮೇಲೆ ಫೈರಿಂಗ್‌: ಬಿಹಾರದ ಅರ್ವಾಲ್‌ನಲ್ಲಿ ಹಿಂದಿ ಪತ್ರಿಕೆಯೊಂದರ ಪತ್ರಕರ್ತ ಪಂಕಜ್‌ ಮಿಶ್ರಾ ಎಂಬುವರ ಮೇಲೆ ಅಪರಿಚಿತರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. “ರಾಷ್ಟ್ರೀಯ ಸಹರಾ’ ಪತ್ರಿಕೆಯ ಪತ್ರಕರ್ತರಾಗಿರುವ ಅವರು ಬ್ಯಾಂಕ್‌ನಿಂದ ಒಂದು ಲಕ್ಷ ರೂ. ಡ್ರಾ ಮಾಡಿಕೊಂಡು ಬರುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕೂಡಲೇ ಪೊಲೀಸರು ಇಬ್ಬರ ಪೈಕಿ ಒಬ್ಬನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ವೈಯಕ್ತಿಕ ದ್ವೇಷದಿಂದ ಕೊಲೆ ಯತ್ನ ನಡೆಸಲಾಗಿದೆ ಎಂದು ಹೇಳಿಕೊಂಡಿದ್ದಾನೆ.

ಟ್ವಿಟರ್‌ನಲ್ಲಿ “ಬ್ಲಾಕ್‌ ನರೇಂದ್ರ ಮೋದಿ’ ವಿವಾದ
ಗೌರಿ ಲಂಕೇಶ್‌ ಹತ್ಯೆ ಸಮರ್ಥಿಸಿ ನಿಖೀಲ್‌ ದಧೀಚಿ ಎಂಬವರು ಅತ್ಯಂತ ಕೆಟ್ಟದಾಗಿ ಟ್ವೀಟ್‌ ಮಾಡಿದ್ದರು. ಅವರನ್ನು ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವುದು ವಿವಾದಕ್ಕೆ ಗುರಿಯಾಗಿದೆ. ಹೀಗಾಗಿ ಮೈಕ್ರೋಬ್ಲಾಗಿಂಗ್‌ ತಾಣದಲ್ಲಿ “ಬ್ಲಾಕ್‌ ನರೇಂದ್ರ ಮೋದಿ’ (#BlockNarendraModi)ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ, “ಪ್ರಧಾನಿ ನರೇಂದ್ರ ಮೋದಿ ಅವರು ಲೂಟಿ ಮತ್ತು ವಂಚನೆಯ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಟ್ವಿಟರ್‌ನಲ್ಲಿ ಪ್ರಧಾನಿಯವರನ್ನೇ ಬೈದಿರುವ ಮತ್ತು ಆಪ್‌ ಕಾರ್ಯಕರ್ತನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಗೆ ವಿವಾದ ಇತ್ಯರ್ಥ ಮಾಡಿಕೊಳ್ಳಿ ಎಂದು ಹೇಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ರನ್ನೂ ಫಾಲೋ ಮಾಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ, ಆದ್ಯತೆ ನೀಡುವ ವಿರಳ ನಾಯಕರಲ್ಲಿ ಪ್ರಧಾನಿ ಮೋದಿ ಅವರೂ ಒಬ್ಬರು ಎಂದು ಹೇಳಿದ್ದಾರೆ. ನಿಖೀಲ್‌ ದಧೀಚಿ ಎಂಬವರನ್ನು ಪ್ರಧಾನಿ ಫಾಲೋ ಮಾಡುತ್ತಿರುವುದನ್ನು ಖಂಡಿಸಿ ಹಲವರು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next