ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಬಳ್ಕುಂಜೆ ಕೃಷಿಕರು ಬೆಳೆದ ಕಬ್ಬಿಗೆ ಈ ಬಾರಿ ಭಾರೀ ಬೇಡಿಕೆ ಬಂದಿದ್ದು, ಜತೆಗೆ ಉತ್ತಮ ಬೆಲೆಯೂ ದಕ್ಕಿ ಅವರು ಸಂತಸಗೊಂಡಿದ್ದಾರೆ. ಇದಕ್ಕೆ ಬೆಳೆಗಾರರು ಸಂಘಟಿತರಾಗಿರುವುದು ಮತ್ತು ಈ ಬಾರಿ ತೆನೆ ಹಬ್ಬ, ಗಣೇಶ ಚತುರ್ಥಿ ಜತೆಯಾಗಿ ಬಂದಿರುವುದು ಕೂಡ ಪ್ರಮುಖ ಕಾರಣ.
ಬಳ್ಕುಂಜೆ ಯ ಶಾಂಭವಿ ನದಿಯ ತಟದ ಹೊಗೆ ಮಿಶ್ರಿತ ಕೆಂಪು ಹಾಗೂ ಕಪ್ಪು ಮಣ್ಣು ಇಲ್ಲಿ ಬೆಳೆಯುವ ಕಬ್ಬಿನ ಸವಿಯ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಬಾರಿ ಕೊರೊನಾ ಕಾರಣದಿಂದ ಇಲ್ಲಿನ ಕಬ್ಬು ಬೆಳೆಗಾರರು ನಷ್ಟ ಅನುಭವಿಸಿದ್ದರು. ಮಾರಾಟವಾಗದೆ ಉಳಿದಾಗ ಕೆಲವರು ಮಾನವೀಯತೆಯಿಂದ ಖರೀದಿಸಿದ್ದರು.
ಆದರೆ ಈ ಬಾರಿ 54 ಬೆಳೆಗಾರರು ಒಟ್ಟಾಗಿ ರಿಚಾರ್ಡ್ ಡಿ’ಸೋಜಾ ಅವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಂಘ ಸ್ಥಾಪಿಸಿದರು. ಸುಮಾರು ಹತ್ತರಿಂದ ಹದಿನೈದು ಎಕರೆ ಪ್ರದೇಶದಲ್ಲಿ ಬೆಳೆದ ಅಂದಾಜು ಎರಡು ಲಕ್ಷದಷ್ಟು ಕಬ್ಬನ್ನು ಒಂದೇ ದರದಲ್ಲಿ (ಒಂದು ಕೋಲು ಕಬ್ಬಿಗೆ 25 ರೂ.) ನೀಡುವ ನಿರ್ಧಾರಕ್ಕೆ ಬಂದರು. ಅಲ್ಲದೆ ಈ ಬಾರಿ ತೆನೆ ಹಬ್ಬ ಹಾಗೂ ಗಣೇಶ ಚತುರ್ಥಿ ಜತೆಗೆ ಬಂದದ್ದು, ಕಬ್ಬಿನ ಬೇಡಿಕೆಯನ್ನು ಹೆಚ್ಚಿಸಿದೆ.
ನಾಮ ಕಬ್ಬು ಕೂಡ ಇಲ್ಲಿನ ವಿಶೇಷ ಬೆಳೆಯಾಗಿದ್ದು, ಇದಕ್ಕೂ ಉತ್ತಮ ಬೇಡಿಕೆ ಇದೆ. ಈ ವರ್ಷ ಕಬ್ಬು ಬೆಳೆದ ಗದ್ದೆಯಲ್ಲಿ ಮುಂದಿನ ವರ್ಷ ಭತ್ತ ಬೆಳೆಯುತ್ತೇವೆ. ಹಾಗಾಗಿ ಎರಡೂ ಬೆಳೆ ಸಮೃದ್ಧವಾಗಿ ಆಗುತ್ತದೆ ಎನ್ನುತ್ತಾರೆ ನಲವತ್ತು ವರುಷಗಳಿಂದ ಕಬ್ಬು ಬೆಳೆಯುತ್ತಿರುವ ಎಲಿಯಾಸ್ ಡಿ’ಸೋಜಾ.
ಮಂಗಳೂರು, ಪುತ್ತೂರು, ಉಡುಪಿ, ಬಂಟ್ವಾಳ, ಕಡಬ, ನೆಲ್ಯಾಡಿ, ಕಾರ್ಕಳ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ಚರ್ಚ್‌ಗಳಿಗೆ ಬಳುRಂಜೆಯಿಂದಲೇ ಕಬ್ಬನ್ನು ನೀಡುತ್ತಿದ್ದೇವೆ. ಇನ್ನೂ ಕೆಲವು ಕಡೆಗಳಿಂದ ಬೇಡಿಕೆ ಬಂದಿದೆ.
-ಅನಿತಾ, ಕಾರ್ಯದರ್ಶಿ, ಕಬ್ಬು ಬೆಳೆಗಾರರ ಸಂಘ