ಹಾವೇರಿ: ಅಸಮರ್ಪಕ ಮಳೆ ಕಾರಣದಿಂದಾಗಿ ವರ್ಷದಿಂದ ವರ್ಷಕ್ಕೆ ನದಿ, ನಾಲೆ, ಕೆರೆಗಳು ಸಂಪೂರ್ಣ ಒಣಗುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ಕೃಷಿ ಹೊಂಡದತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಕೃಷಿಹೊಂಡ ನಿರ್ಮಿಸಿಕೊಳ್ಳುವತ್ತ ರೈತರು ಹೆಚ್ಚಿನ ಆಸಕ್ತಿ ತೋರುತ್ತಿರುವ ಪರಿಣಾಮ ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 1,22,633 ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಬೇಡಿಕೆ ಹೆಚ್ಚಾಗಿದ್ದರಿಂದ ಕೃಷಿ ಇಲಾಖೆ ಕೃಷಿಹೊಂಡ ನಿರ್ಮಿಸುವಲ್ಲಿ ಗುರಿಮೀರಿ ಸಾಧನೆ ಮಾಡಿದೆ. 2014-15ರಿಂದ 2016-17ನೇ ಸಾಲಿನವರೆಗೆ ಸರ್ಕಾರ ಒಟ್ಟು 83,468 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿತ್ತು, ಬೇಡಿಕೆ ಹೆಚ್ಚಾಗಿದ್ದ ರಿಂದ 1,22,633 ಕೃಷಿ ಹೊಂಡಗಳನ್ನು ನಿರ್ಮಿಸಿ ಗುರಿ ಮೀರಿ ಸಾಧನೆ ಮಾಡಿದೆ.
ಕೃಷಿ ಇಲಾಖೆ ಅಂಕಿ ಸಂಖ್ಯೆ ಪ್ರಕಾರ ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಕೃಷಿ ಹೊಂಡ ನಿರ್ಮಾಣದಲ್ಲಿ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 11,399 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಕಡಿಮೆ ಎಂದರೆ 748 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಕೃಷಿ ಹೊಂಡ ನಿರ್ಮಿಸಲು ರೈತರ ಬೇಡಿಕೆಗೆ ಅನುಗುಣವಾಗಿ ಇಲಾಖೆಯಿಂದ ಮಂಜೂರಾತಿ ನೀಡಲಾಗಿದೆ. ರೈತ ಸಂಪರ್ಕ ಕೇಂದ್ರದಿಂದ ಅರ್ಜಿಗಳನ್ನು ರೈತರಿಗೆ ವಿತರಿಸಿ, ಸಂಬಂಧಪಟ್ಟ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರಿಂದ ಅರ್ಜಿ ಸ್ವೀಕೃತಗೊಂಡ ನಂತರ ರೈತರ ಕ್ಷೇತ್ರಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆಕೈಗೊಂಡು, ಪರಿಶೀಲನೆಯಲ್ಲಿ ಜಲಾನಯನ ಪ್ರದೇಶವನ್ನು ಪರಿಗಣಿಸಿ ಅರ್ಹ ರೈತರಿಗೆ ಕಾರ್ಯಾದೇಶ ನೀಡಿ ಇಲಾಖೆಯ ಮಾರ್ಗಸೂಚಿಯನ್ವಯ ಸೌಲಭ್ಯ ನೀಡಲಾಗುತ್ತಿದೆ.
ಹೆಚ್ಚುವರಿ ಅನುದಾನ: ಕೃಷಿ ಹೊಂಡ ನಿರ್ಮಾಣಕ್ಕಾಗಿ ಪ್ರತ್ಯೇಕ ಅನುದಾನ ನೀಡಿಲ್ಲ. ಹೀಗಾಗಿ ಈ ಯೋಜನೆಯನ್ನು ಪ್ಯಾಕೇಜ್ ರೂಪದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ ಭಾಗ್ಯ ಯೋಜನೆಯಡಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿರುವುದರಿಂದ, 2016-17 ನೇ ಸಾಲಿನ ಮೊದಲಿಗೆ ಆಯವ್ಯಯದಲ್ಲಿ ಒದಗಿಸಲಾದ ಅನುದಾನ ಒಟ್ಟು 200 ಕೋಟಿ ರೂ. ಜತೆಗೆ ಹೆಚ್ಚುವರಿ ಅನುದಾನ 300 ಕೋಟಿ ರೂ. ಪೂರಕ ಅಂದಾಜಿನಲ್ಲಿ ಕಲ್ಪಿಸಿ ಒಟ್ಟು 500 ರೂ. ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೃಷಿ ಹೊಂಡ ನಿರ್ಮಾಣ ಮಾಡಿದ ಫಲಾನುಭವಿಗಳಿಗೆ ಸಹಾಯಧನ ಪಾವತಿಸಲಾಗುತ್ತಿದೆ.
ಕೃಷಿಹೊಂಡ ನಿರ್ಮಾಣದಿಂದ ಅನುಕೂಲವಾಗಿದೆ. ಮಳೆ ನೀರು ತುಂಬಿಸಿ ಅಗತ್ಯಬಿದ್ದಾಗ ಬೆಳೆಗೆ ಹಾಕುತ್ತಿದ್ದೇವೆ. 19 ಮೀಟರ್ ಅಳತೆಯ ಕೃಷಿಹೊಂಡ ನಿರ್ಮಿಸಿಕೊಂಡಿದ್ದು, 40,000 ಸಹಾಯಧನ ಸಿಕ್ಕಿದೆ.
– ಸಿದ್ದಲಿಂಗಸ್ವಾಮಿ ಹಿರೇಮಠ, ಕೃಷಿ
ಪದೇಪದೆ ಮಳೆ ಅಭಾವ, ಕೃಷಿಗೆ ನೀರಿನ ಕೊರತೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಆಸಕ್ತ ರೈತರಿಗೂ ಯೋಜನೆಯ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಯವ್ಯಯದಲ್ಲಿ ಒದಗಿಸಲಾದ ಅನುದಾನ ಒಟ್ಟು 200 ಕೋಟಿ ರೂ. ಜತೆಗೆ ಹೆಚ್ಚುವರಿ ಅನುದಾನ 300 ಕೋಟಿ ರೂ. ಪೂರಕ ಅಂದಾಜಿನಲ್ಲಿ ಕಲ್ಪಿಸಿ ಒಟ್ಟು 500 ರೂ. ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
– ಕೃಷ್ಣಭೈರೇಗೌಡ, ಕೃಷಿ ಸಚಿವ
– ಎಚ್.ಕೆ,ನಟರಾಜ