Advertisement

ಕೃಷಿ ಯಂತ್ರ ಬಾಡಿಗೆ ಸೇವಾ ಕೇಂದ್ರಗಳಿಗೆ ಹೆಚ್ಚಿದ ಬೇಡಿಕೆ

06:00 AM Jun 10, 2018 | Team Udayavani |

ಕೋಟ: ಕೃಷಿ ಯಾಂತ್ರೀಕರಣ ಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ರೈತನಿಗೆ ಕೃಷಿ ಯಂತ್ರೋ ಪಕರಣಗಳು ಕೈಗೆಟಕು ವಂತಾಗಲು ಸರಕಾರವು ಚಾರಿಟೆಬಲ್‌ ಟ್ರಸ್ಟ್‌ಗಳು, ಗ್ರಾಮಾಭಿವೃದ್ಧಿ ಯೋಜನೆ ಮುಂತಾದ ಸಂಸ್ಥೆಗಳ ಸಹಕಾರ ಪಡೆದು ಪ್ರತಿ ಹೋಬಳಿಯಲ್ಲಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರಗಳನ್ನು ತೆರೆದಿದೆ. ಆದರೆ ಈ ಕೇಂದ್ರಗಳಲ್ಲಿ ಇವು ಸೀಮಿತ ಸಂಖ್ಯೆಯಲ್ಲಿ ಇರುವುದರಿಂದ ರೈತರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

Advertisement

ಕೇಂದ್ರಗಳ ನಿರ್ವಹಣೆ
ಉಡುಪಿ ಜಿಲ್ಲೆಯಲ್ಲಿ ಈಸಿಲೈಫ್ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ಬಾಡಿಗೆ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈಸಿಲೈಫ್‌ ಕಂಪೆನಿಯು ಕಾಪು, ಕುಂದಾಪುರ, ಕೋಟ, ಕಾರ್ಕಳ ಹೋಬಳಿ ಕೇಂದ್ರಗಳನ್ನು ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು, ಬ್ರಹ್ಮಾವರ, ಅಜೆಕಾರಿನ ಕೇಂದ್ರಗಳನ್ನು ನೋಡಿಕೊಳ್ಳುತ್ತಿದೆ.

ಸರಕಾರದ ಶೇ.75 ಮತ್ತು ಪಾಲುದಾರ ಸಂಸ್ಥೆಯ ಶೇ.25 ಬಂಡವಾಳದಲ್ಲಿ ಯಂತ್ರೋಪಕರಣಗಳನ್ನು ಖರೀದಿಸಿ ಈ ಕೇಂದ್ರಗಳಿಗೆ ನೀಡಲಾಗುತ್ತದೆ. ಅವರು ಖಾಸಗಿಗಿಂತ ಕಡಿಮೆ ಬಾಡಿಗೆ ದರದಲ್ಲಿ ರೈತರ ಉಳುಮೆ, ನಾಟಿ, ಕಟಾವು ನಿರ್ವಹಿಸುತ್ತಾರೆ.

ಹಲವು ಕಡೆ ಸಂಘ-ಸಂಸ್ಥೆಗಳು ಸರಕಾರದ ಅನುದಾನವನ್ನು ಪಡೆದು ಗುಂಪುಗಳ ಮೂಲಕ ಈ ಯಂತ್ರೋಪಕರಣಗಳ ನಿರ್ವಹಣೆ ನಡೆಸುತ್ತವೆ. ಈಸಿಲೈಫ್ ಮುಂತಾದ ಕಂಪೆನಿಗಳು ರೈತರ ಬೇಡಿಕೆಗೆ ತಕ್ಕಂತೆ ಕಾರ್ಯ ನಿರ್ವಹಿಸಿದರೆ, ಗ್ರಾಮಾಭಿವೃದ್ಧಿ ಯೋಜನೆ ಗುಂಪುಗಳ ಮೂಲಕ ಸದಸ್ಯರ ಬೇಡಿಕೆಗೆ ತಕ್ಕಂತೆ ಸೇವೆಯನ್ನು ನೀಡುತ್ತದೆ.


ಬೇಕಿದೆ ಹೆಚ್ಚುವರಿ ಯಂತ್ರ
ಯಾಂತ್ರೀಕೃತ ಕೃಷಿ ಕೆಲಸ ಜನಪ್ರಿಯಗೊಳ್ಳುತ್ತಿದ್ದಂತೆ ಯಂತ್ರಗಳಿಗಾಗಿ ಬೇಡಿಕೆ ಹೆಚ್ಚಿದೆ. ಪ್ರತೀ ಹೋಬಳಿ ಮಟ್ಟದಲ್ಲಿ ಬೇರೆಬೇರೆ ಕೃಷಿ ಕಾರ್ಯಗಳನ್ನು ನಿರ್ವಹಿಸಲು ಮೂರ್ನಾಲ್ಕು ಯಂತ್ರಗಳಷ್ಟೇ ಲಭ್ಯವಿದ್ದು, ಬೇಡಿಕೆ ಹೆಚ್ಚಿರುವುದರಿಂದ ಸಾಕಾಗುತ್ತಿಲ್ಲ. ಮಳೆಗಾಲ ಆರಂಭವಾಗುವ ಮೊದಲೇ ನೂರಾರು ಎಕರೆ ನಾಟಿಗಾಗಿ ನೋಂದಣಿ ನಡೆಯುತ್ತದೆ. ಅದೇ ರೀತಿ ಕಟಾವಿನ ಸಂದರ್ಭದಲ್ಲೂ ಮುಂಗಡವಾಗಿ ಸಾಕಷ್ಟು ಬೇಡಿಕೆ ಇರುತ್ತದೆ. ಆದರೆ ಬೇಡಿಕೆಗೆ ತಕ್ಕಂತೆ ಯಂತ್ರಗಳು ದೊರೆಯದಿರುವುದರಿಂದ ಹಲವು ರೈತರು ನಿರಾಶರಾಗುವ ಪರಿಸ್ಥಿತಿ ಇದೆ. 

ಯಂತ್ರಗಳ‌ ಸಂಖ್ಯೆ ಕಡಿಮೆ
ಬಾಡಿಗೆ ಸೇವಾ ಕೇಂದ್ರದಲ್ಲಿ ಲಭ್ಯವಿರುವ ಯಂತ್ರೋಪಕರಣಗಳ ಸಂಖ್ಯೆ ಬಹಳಷ್ಟು  ಕಡಿಮೆ. ಹೀಗಾಗಿ ರೈತರಿಗೆ ಹೆಚ್ಚು ಪ್ರಯೋಜನವಾಗುತ್ತಿಲ್ಲ. ಸರಕಾರ ಹೆಚ್ಚುವರಿ ಯಂತ್ರಗಳನ್ನು ನೀಡಿದರೆ ಅನುಕೂಲ.
– ಭಾಸ್ಕರ್‌ ಶೆಟ್ಟಿ ಮಣೂರು, ಪ್ರಗತಿಪರ ಕೃಷಿಕರು

Advertisement

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next