ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಶನಿವಾರ ಒಂದೇ ದಿನ 141 ಪ್ರಕರಣ ದೃಢಪಟ್ಟಿದ್ದು, ಅದರಲ್ಲಿ ರಾಜಧಾನಿಯ 22 ಮಂದಿಗೆ ಸೋಂಕು ಹೇಗೆ ಬಂದಿದೆ ಎಂಬ ಹಿನ್ನೆಲೆಯೇ ಸಿಕ್ಕಿಲ್ಲ. ಬೀದರ್‌ನಲ್ಲಿ ಉಸಿರಾಟದ ಸಮಸ್ಯೆಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹೊಸ 141 ಪ್ರಕರಣ ಸೇರಿ ರಾಜ್ಯದಲ್ಲಿ 2,922 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ.
ಇದರಲ್ಲಿ 997 ಮಂದಿ ರೋಗ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರಲ್ಲಿ ಶನಿವಾರ ಒಂದೇದಿನ 103 ಮಂದಿ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಈಗ ಒಟ್ಟು 1,874 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಕೋವಿಡ್ 19ದಿಂದ 49 ಮಂದಿ ಮೃತಪಟ್ಟಿದ್ದಾರೆ. 15 ಮಂದಿ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.
141 ಪ್ರಕರಣಗಳಲ್ಲಿ 90 ಪ್ರಕರಣ ಹೊರ ರಾಜ್ಯಗಳಿಂದ ಬಂದಿರುವವರದ್ದಾಗಿದೆ. ಇದರಲ್ಲಿಬಹುಪಾಲು ಮಹಾರಾಷ್ಟ್ರದಿಂದ ಬಂದಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಹಾಗೆಯೇ ಪಂಜಾಬ್ ಮತ್ತು ತಮಿಳುನಾಡಿನಿಂದ ಬಂದವರೂ ಇದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಯಾದಗಿರಿ, ಹಾಸನ, ಹಾವೇರಿ, ವಿಜಯಪುರ ಮೊದಲಾದ ಜಿಲ್ಲೆಗಳ ಬಹುತೇಕ ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಆತಂಕ: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಅತಿ ಹೆಚ್ಚು ಪ್ರಕರಣ ದೃಢಪಟ್ಟಿದೆ. 33 ಪ್ರಕರಣಗಳಲ್ಲಿ 22 ಮಂದಿಗೆ ಸೋಂಕು ಹೇಗೆ ಹರಡಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಉಳಿದ 11 ಮಂದಿಗೆ ರೋಗಿ ಸಂಖ್ಯೆ 2180ರಿಂದ ಹಬ್ಬಿದೆ. ಪಾಲಿಕೆ ಸದಸ್ಯರೊಬ್ಬರಿಗೂ ಕೋವಿಡ್ 19 ದೃಢಪಟ್ಟಿದೆ. ರಾಜ್ಯದ ಜನಪ್ರತಿನಿಧಿಯೊಬ್ಬರಿಗೆ ಕೋವಿಡ್ 19 ದೃಢಪಟ್ಟಿರುವುದು ಇದೇ ಮೊದಲು. ಸಾಕಷ್ಟು ಮಂದಿ ಇವರ ಸಂಪರ್ಕಕ್ಕೆ ಬಂದಿರುವುದರಿಂದ ಆತಂಕ ಇನ್ನಷ್ಟು ಹೆಚ್ಚಿದೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಹೊರ ರಾಜ್ಯ ಅಥವಾ ಕೋವಿಡ್ 19 ರೋಗಿಯೊಂದಿಗಿನ ಸಂಪರ್ಕದ ಹಿನ್ನೆಲೆಯಿದೆ.
ಬೆಂಗಳೂರಿನಲ್ಲಿ 33, ಕಲಬುರಗಿಯಲ್ಲಿ 2, ಯಾದಗಿರಿ 18, ಉಡುಪಿ 13, ಬೆಳಗಾವಿ 1, ದಾವಣಗೆರೆ 4, ಹಾಸನ 13, ಬೀದರ್ 10, ದಕ್ಷಿಣ ಕನ್ನಡ 14, ವಿಜಯಪುರ 11, ಮೈಸೂರು, ಉತ್ತರ ಕನ್ನಡ, ಧಾರವಾಡ ತಲಾ 2, ಶಿವಮೊಗ್ಗ 6, ಚಿತ್ರದುರ್ಗ 1, ತುಮಕೂರು 1, ಕೋಲಾರ 3, ಬೆಂಗಳೂರು ಗ್ರಾಮಾಂತರ 1, ಹಾವೇರಿ 4 ಸೇರಿ 141 ಪ್ರಕರಣ ದಾಖಲಾಗಿದೆ. ಮಂಡ್ಯದಲ್ಲಿ 224, ಯಾದಗಿರಿಯಲ್ಲಿ 231, ಉಡುಪಿಯಲ್ಲಿ 170, ಬೆಂಗಳೂರಿನಲ್ಲಿ 153, ರಾಯಚೂರಿನಲ್ಲಿ 132, ಹಾಸನದಲ್ಲಿ 127 ಸಕ್ರಿಯ ಪ್ರಕರಣಗಳು ಇವೆ. ಹಾಗೆಯೇ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 103 ಮಂದಿಯಲ್ಲಿ ದಾವಣಗೆರೆಯ 20, ಕಲಬುರಗಿಯ 43, ಬೆಂಗಳೂರಿನ 21 ಮಂದಿ ಸೇರಿದ್ದಾರೆ.
ಬೀದರ್‌ನಲ್ಲಿ ಸಾವು: ಬೀದರ್ ನಿವಾಸಿಯಾಗಿದ್ದ 47 ವರ್ಷದ ಮಹಿಳೆ( ರೋಗಿ ಸಂಖ್ಯೆ-2783) ಉಸಿರಾಟದ ತೊಂದರೆಯಿಂದ ( ಐಎಲ್‌ಐ) ನಿಗದಿತ ಆಸ್ಪತ್ರೆಯಲ್ಲಿ ಕೋವಿಡ್ 19ಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ, 8 ವರ್ಷಗಳಿಂದ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರು. ಹೈಪರ್ ಟೆನ್‌ಷನ್ ಮತ್ತು ಕನ್ವಲ್‌ಷನ್ ಹಿನ್ನೆಲೆ ಹೊಂದಿದ್ದಾರೆ. ಮೇ 24ರಂದು ಕೋವಿಡ್ 19 ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ದ್ದರು. ಮೇ 28ರಂದು ಬೀದರ್ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಖಚಿತಡಿಸಿದೆ.
15,274 ಮಂದಿ ವರದಿ ನೆಗೆಟಿವ್: ಶನಿವಾರ ವಿಮಾನ ನಿಲ್ದಾಣದಲ್ಲಿ 208 ಮಂದಿಯನ್ನು ತಪಾಸಣೆ ಮಾಡಿದ್ದಾರೆ. ಈವರೆಗೆ 1,46,069 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಶನಿವಾರ 15,728 ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಅದಲ್ಲಿ 15,274 ಮಂದಿಯ ವರದಿ ನೆಗೆಟಿವ್ ಬಂದಿದ್ದು, 141 ಮಂದಿಗೆ ಪಾಸಿಟಿವ್ ಬಂದಿದೆ. ಈವರೆಗೆ 2,80,217 ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಿದ್ದು, 2,73,404 ಮಂದಿಯ ವರದಿ ನೆಗೆಟಿವ್ ಬಂದಿದ್ದು, 2,922 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.