Advertisement

ಸಚಿವ ಸ್ಥಾನಕ್ಕೆ ಹೆಚ್ಚಿದ ಪರಿಷತ್‌ ಸದಸ್ಯರ ಲಾಬಿ

06:25 AM Oct 04, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ಕಸರತ್ತು ಆರಂಭವಾಗುತ್ತಿರುವಂತೆ ಸಚಿವಾಕಾಂಕ್ಷಿಗಳು ಲಾಬಿ ಆರಂಭಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿಧಾನ ಪರಿಷತ್‌ ಸದಸ್ಯರೂ ಸಚಿವರಾಗುವ ಕುರಿತು ಹೊಸ ವರಸೆ ಆರಂಭಿಸಿದ್ದಾರೆ. ರಾಜ್ಯಸಭೆ ಹಾಗೂ ಬೇರೆ ರಾಜ್ಯಗಳಲ್ಲಿ ವಿಧಾಣ ಪರಿಷತ್‌ ಸದಸ್ಯರಿಗೆ ನೀಡಿರುವ ಪ್ರಾತಿನಿಧ್ಯದಂತೆ ರಾಜ್ಯದಲ್ಲಿಯೂ ಮೇಲ್ಮನೆ ಸದಸ್ಯರಿಗೆ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ 10 ಕ್ಕೂ ಹೆಚ್ಚು ಪರಿಷತ್‌ ಸದಸ್ಯರು ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

Advertisement

ಕೇಂದ್ರ ಸಚಿವ ಸಂಪುಟದಲ್ಲಿ 76 ಜನರಲ್ಲಿ 20 ಜನ ಸಚಿವರು ರಾಜ್ಯಸಭೆ ಸದಸ್ಯರೇ ಇದ್ದು, ಹಣಕಾಸು, ರಕ್ಷಣೆ, ರೈಲ್ವೆಯಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯೇ ಮೇಲ್ಮನೆ ಸದಸ್ಯರಾಗಿದ್ದಾರೆ. ಮಹಾರಾಷ್ಟ್ರದ 9 ಜನ ವಿಧಾನ ಪರಿಷತ್‌ ಸದಸ್ಯರು ಸಚಿವರಾಗಿದ್ದಾರೆ, ಬಿಹಾರದಲ್ಲಿ 7 ಜನ, ತೆಲಂಗಾಣಾದಲ್ಲಿ ಮೇಲ್ಮನೆಯ ಇಬ್ಬರು ಉಪ ಮುಖ್ಯಮಂತ್ರಿಗಳು, ಆಂಧ್ರಪ್ರದೇಶ ಸರ್ಕಾರದಲ್ಲಿ  ಮೂವರು ಮೇಲ್ಮನೆ ಸದಸ್ಯರು ಸಂಪುಟದಲ್ಲಿ ಇದ್ದಾರೆ. ಅದರಂತೆ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿಯೂ ಮೇಲ್ಮನೆಯಲ್ಲಿ ಹಿರಿಯರು ಹಾಗೂ ಆಡಳಿತದ ಅನುಭವ ಇರುವ ಅನೇಕ ಸದಸ್ಯರಿದ್ದು, ತಮಗೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೇಲ್ಮನೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದು, ಹಿರಿಯರಾದ ವಿ.ಎಸ್‌.ಉಗ್ರಪ್ಪ, ಎಚ್‌.ಎಂ. ರೇವಣ್ಣ, ಎಸ್‌.ಆರ್‌. ಪಾಟೀಲ್‌, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಸಿ.ಎಂ. ಇಬ್ರಾಹಿಂ, ಆರ್‌.ಬಿ. ತಿಮ್ಮಾಪುರ್‌, ಎಐಸಿಸಿ ಕಾರ್ಯದರ್ಶಿ ಬೋಸರಾಜ್‌, ಧರ್ಮಸೇನಾ, ಐವಾನ್‌ ಡಿಸೋಜಾ ಸಚಿವಾಕಾಂಕ್ಷಿಗಳಾಗಿದ್ದಾರೆ.

“ಪರಿಷತ್‌ ಸದಸ್ಯರು ಅಗತ್ಯವಿದ್ದಾಗ ಪಕ್ಷ ಸಂಘಟನೆ ಹಾಗೂ ಸರ್ಕಾರದ ವಿರುದ್ಧ ಆರೋಪಗಳು ಕೇಳಿ ಬಂದಾಗ ಸರ್ಕಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುತ್ತೇವೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಮೇಲ್ಮನೆ ಸದಸ್ಯರಿಗೆ ಹೆಚ್ಚಿನ ಆದ್ಯತೆ ನೀಡದೇ ಐದು ವರ್ಷ ಅಧಿಕಾರ ಪೂರ್ಣಗೊಳಿಸಲಾಯಿತು. ಈ ಬಾರಿಯಾದರೂ ತಮಗೆ ಅಧಿಕಾರ ನೀಡಿದರೆ, ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ,’ ಎಂಬ ವಾದವನ್ನು ಪರಿಷತ್‌ ಸದಸ್ಯರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಜಯಮಾಲಾ ಕೈ ಬಿಡುವ ವದಂತಿ: ಇನ್ನು ಮೇಲ್ಮನೆ ಸದಸ್ಯೆಯಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರ ವಿರುದ್ಧ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ದೂರುಗಳನ್ನು ನೀಡಿದ್ದಾರೆ ಎನ್ನಲಾಗಿದ್ದು, ಆ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಕೈ ಬಿಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಮೇಲ್ಮನೆ ಸದಸ್ಯರು ಮತ್ತಷ್ಟು ಸಕ್ರೀಯರಾಗಿ ಸಂಪುಟ ಸೇರಲು ಕಸರತ್ತು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ನಾಯಕರ ಲೆಕ್ಕಾಚಾರ: ಉಪ ಸಭಾಪತಿ ಚುನಾವಣೆ?
ಸಂಪುಟ ಸೇರಲು ಪರಿಷತ್‌ ಸದಸ್ಯರ ಒತ್ತಡ ಹೆಚ್ಚಾಗುತ್ತಿರುವುದನ್ನು ಮನಗಂಡ ಪಕ್ಷದ ನಾಯಕರು ಒತ್ತಡ ಕಡಿಮೆ ಮಾಡಲು ಸಂಪುಟ ವಿಸ್ತರಣೆಗೂ ಮೊದಲೇ ಪರಿಷತ್‌ ಉಪ ಸಭಾಪತಿ ಹಾಗೂ ಸರ್ಕಾರದ ಮುಖ್ಯ ಸಚೇತಕರ ನೇಮಕ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಶೀಘ್ರವೇ ಪರಿಷತ್‌ ಸಭಾಪತಿ ಹಾಗೂ ಉಪ ಸಭಾಪತಿ ಚುನಾವಣೆ ನಡೆಸಲು ಒಂದು ದಿನದ ವಿಶೇಷ ಅಧಿವೇಶನ ಕರೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕಾಂಗ್ರೆಸ್‌ ನಾಯಕರು ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರವೇ ಒಂದು ದಿನದ ಅಧಿವೇಶನ ಕರೆಯುವ ಕುರಿಂತೆ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಯಮಾಲಾ ವಿರುದ್ಧ ಮಹಿಳಾ ಕಾರ್ಯಕರ್ತೆಯರ ದೂರು: 
ಮೇಲ್ಮನೆ ಸದಸ್ಯೆಯೂ ಆಗಿರುವ ಹಾಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಜಯಮಾಲಾ ಅವರ ಕಾರ್ಯ ವೈಖರಿಯ ಬಗ್ಗೆಯೇ ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರು ಪಕ್ಷದ ನಾಯಕರ ಎದುರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದು ವಿರುದ್ಧ ಸಚಿವಾಕಾಂಕ್ಷಿ ಬೆಂಬಲಿಗರ ಪ್ರತಿಭಟನೆ
ಅಕ್ಟೋಬರ್‌ 10 ರ ನಂತರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿ ಶಾಸಕರ ಬೆಂಬಲಿಗರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸ ಕಾವೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್‌ ಬೆಂಬಲಿಗರು ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿದರು.
ಭೇಟಿಗೆ ನಿರಾಕರಿಸಿದ ಸಿದ್ದರಾಮಯ್ಯ:ಮಹಾರಾಷ್ಟ್ರದ ವಾರ್ದಾದಲ್ಲಿ ನಡೆದ ಸಿಡಬುÉಸಿ ಸಭೆ ಮುಗಿಸಿ ಬೆಂಗಳೂರಿಗೆ ಆಗಮಿಸಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ಸಚಿವಾಕಾಂಕ್ಷಿಗಳಾದ ಸಿ.ಎಸ್‌. ಶಿವಳ್ಳಿ, ಬಿ.ಸಿ. ಪಾಟೀಲ್‌, ಶಿವರಾಮ್‌ ಹೆಬ್ಟಾರ್‌ ಅವರಿಗೆ ಭೇಟಿಗೆ ಅವಕಾಶ ನೀಡದೇ ವಾಪಸ್‌ ಕಳುಹಿಸಲಾಯಿತು. ಕಣ್ಣು ನೋವಿನ ಹಿನ್ನೆಲೆಯಲ್ಲಿ  ವಿಶ್ರಾಂತಿ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಗೆ ಅವಕಾಶ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next