ದೇವನಹಳ್ಳಿ: ಬರಗಾಲ ಹಾಗೂ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಬೇಡಿಕೆಯಿರುವಷ್ಟು ಕೊತ್ತಂಬರಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಕೊತ್ತಂಬರಿ ಬೆಲೆಗೆ ಗಗನಕ್ಕೇರಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಕೊತ್ತಂಬರಿ ಸಮಾರಂಭದ ಅಡುಗೆ ಹಾಗೂ ಮನೆಯಲ್ಲಿ ನಿತ್ಯ ಬಳಕೆಗೆ ಅಗತ್ಯವಾಗಿರುವುದರಿಂದ ಮೊದಲಿನಿಂದಲೂ ಗ್ರಾಹಕರ ಬೇಡಿಕೆ ಹೆಚ್ಚಿದೆ. ಹೀಗಾಗಿ ಕೊತ್ತಂಬರಿ ಬೆಲೆ ಗಗನಕ್ಕೇರಿದೆ.
ಆಲಿಕಲ್ಲು ಮಳೆ ಬಿದ್ದ ಪರಿಣಾಮ ಕೊತ್ತಂಬರಿ ಸೊಪ್ಪು ಮಾರುಕಟ್ಟೆಗೆ ಸಕಾಲದಲ್ಲಿ ಬರುತ್ತಿಲ್ಲ. ತಮಗೆ ದೊರೆಯುವ ಅಲ್ಪಸ್ವಲ್ಪ ನೀರಿನಲ್ಲಿಯೇ ಕೊತ್ತಂಬರಿ ಬೆಳೆಯಲಾಗುತ್ತಿದೆ. ಕೆಲವರಂತೂ ಕೊತ್ತಂಬರಿ ಸೊಪ್ಪಿನ ಧರವನ್ನು ಕೇಳಿದರೆ ಬೆಚ್ಚಿಬೀಳುತ್ತಾರೆ. ವ್ಯಾಪಾರಸ್ಥರು ತೋಟಗಳ ಹತ್ತಿರ ಬಂದು ಕೊತ್ತಂಬರಿ ಸೊಪ್ಪನ್ನು ಖರೀದಿಸಿ ಹೋಗುತ್ತಾರೆ ಎಂದು ರೈತ ವೆಂಕಟರಾಮಯ್ಯ ಹೇಳುತ್ತಾರೆ.
ಕೊತ್ತಂಬರಿ ಬೆಳೆಗೆ ಬರಗಾಲದ ಹೊಡೆತ: ಬರಗಾಲದ ಜತೆಗೆ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಕೊತ್ತಂಬರಿ ಫಸಲು ಹಾನಿಗೊಳಗಾಗಿದೆ. ಹೀಗಾಗಿ ಅಗತ್ಯವಿರುವಷ್ಟು ಕೊತ್ತಂಬರಿ ಸೊಪ್ಪು ಮಾರುಕಟ್ಟೆಗೆ ಆಗಮಿಸುತ್ತಿಲ್ಲ. ಹೀಗಾಗಿ ಕೊತ್ತಂಬರಿ ಬೆಲೆ ತನ್ನಷ್ಟಕ್ಕೆ ತಾನೇ ಗಗನಕ್ಕೇರಿದೆ. ಒಂದೆಡೆ ಬೆಳೆಗಾರರಿಗೆ ಖುಷಿಯ ಸಂಗತಿಯಾದರೆ, ಇನ್ನೊಂದೆಡೆ ಗ್ರಾಹಕರಿಗೆ ಕೈಗೆಟುಕದಂತಾಗಿದೆ.
ಕೆ.ಜಿ.ಗೆ 200ರಿಂದ 250 ರೂ: ಕೊತ್ತಂಬರಿ ಒಂದು ಕಟ್ಟಿಗೆ ಎಷ್ಟು ಎಂದು ಕೇಳಿದರೆ 60-70ರೂ. ಎಂದು ಹೇಳುತ್ತಾರೆ. ಇದಕ್ಕೂ ಮೊದಲು ಒಂದು ಕಟ್ಟಿಗೆ 10 ರಿಂದ 20ರೂ. ಇತ್ತು. ಕಟ್ಟಿನ ಲೆಕ್ಕಾಚಾರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಸೊಪ್ಪು ಇದೀಗ ಕೆಜಿ ಲೆಕ್ಕದಲ್ಲಿ ಮಾರಾಟವಾಗುತ್ತಿದೆ. ಒಂದು ಕೆಜಿಗೆ 200-250ರೂ.ಗಳ ಬೆಲೆ ಇದೆ. ಆದರೆ ರೈತರಿಗೆ ವ್ಯಾಪಾರಸ್ಥರು ಕೆಜಿಯ ಮೇಲೆ 150 ರಿಂದ 200ರೂ. ಮಾತ್ರ ಕೊಡುತ್ತಿದ್ದಾರೆ. ಹೆಚ್ಚಿನ ಲಾಭ ವ್ಯಾಪಾರಸ್ಥರಿಗೆ ಆಗುತ್ತಿದೆ.
ಕಸಬಾ, ಕುಂದಾಣ ಹೋಬಳಿಯಲ್ಲಿ ಹೆಚ್ಚು ಬೆಳೆ: ತಾಲೂಕಿನಲ್ಲಿ ಒಟ್ಟು 40-45 ಎಕರೆ ಪ್ರದೇಶದಲ್ಲಿ ಕೊತ್ತಂಬರಿ ಬೆಳೆಯಲಾಗುತ್ತಿದೆ. ಕಸಬಾ ಹೋಬಳಿ ಮತ್ತು ಕುಂದಾಣ ಹೋಬಳಿಗಳಲ್ಲಿ ಅತೀ ಹೆಚ್ಚು ರೈತರು ಕೊತ್ತಂಬರಿ ಬೆಳೆಯುತ್ತಿದ್ದಾರೆ. ಕಸಬಾ ಹೋಬಳಿಯ ಬೆ„ಚಾಪುರ, ಅಕ್ಕುಪೇಟೆ, ಕುಂದಾಣ ಹೋಬಳಿಯ ಕಾರಹಳ್ಳಿ ಸುತ್ತಮುತ್ತಲು ಬೆಳೆಯನ್ನು ಬೆಳೆಯಲಾಗುತ್ತಿದೆ. ರೈತರು ತಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಒಂದು ಗುಂಟೆ, ಎರಡು ಗುಂಟೆ, ಮೂರುಗುಂಟೆ ಜಾಗದಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳುತ್ತಾರೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಕೊತ್ತಂಬರಿ ಇಲ್ಲದಿದ್ದರೆ ಸಾಂಬಾರಿಗೆ ರುಚಿ ಇರುವುದಿಲ್ಲ. ದರ ಎಷ್ಟೇ ಆದರೂ ಕೊತ್ತಂಬರಿ ಖರೀದಿಸಬೇಕು. ದರವನ್ನು ನೋಡಿ ಕೆಲವೊಮ್ಮ ಖರೀದಿಸುವುದೇ ಬೇಡವೆಂದು ಎನಿಸುತ್ತದೆ. ಆದರೂ ಸಹ ಮನಸ್ಸು ಒಪ್ಪುವುದಿಲ್ಲ.
-ನಾಗವೇಣಿ, ಗೃಹಿಣಿ
ರೈತರು ಒಂದೇ ಬೆಳೆ ಬೆಳೆಯುವ ಬದಲಿಗೆ ಪರ್ಯಾಯವಾಗಿ ಕೊತ್ತಂಬರಿ ತರಹದ ಬೆಳೆ ಬೆಳೆದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಅಲ್ಲದೆ ಇಂತಹ ಬೆಳೆ ಬೆಳೆಯಲು ಸರ್ಕಾರ ಹನಿ ಮತ್ತು ತುಂತುರು ನೀರಾವರಿಗೆ ಸಬ್ಸಿಡಿ ನೀಡುತ್ತದೆ. ಹೀಗಾಗಿ ಇಲಾಖೆ ಸೌಲಭ್ಯ ಬಳಸಿಕೊಂಡು ಅಭಿವೃದ್ಧಿಹೊಂದಬೇಕು.
-ಜಿ.ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕ
* ಎಸ್.ಮಹೇಶ್