Advertisement
ಡಿಸೆಂಬರ್ ಆರಂಭದಿಂದಲೇ ರಾಜ್ಯದಲ್ಲಿ ಚಳಿಗಾಲವೂ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ಉದ್ಯಾನ ನಗರಿಯಲ್ಲಿ ಚಳಿ ತೀವ್ರವಾಗುತ್ತಿದ್ದು, ಶೀತಗಾಳಿ ಮೈ ಕೊರೆಯುತ್ತಿದೆ. ಕಳೆದ ಒಂದು ವಾರದಲ್ಲಿ ಗರಿಷ್ಠ ತಾಪಮಾನ ಶನಿವಾರ 24.9 ಡಿಗ್ರಿ, ಭಾನುವಾರ ಈ ಬಾರಿಯ ಕನಿಷ್ಠ ತಾಪಮಾನ 17.8 ಡಿಗ್ರಿ ದಾಖಲಾಗಿದೆ. ಹಗಲಿನಲ್ಲಿ ಕೂಡ ಮೋಡ ಮುಚ್ಚಿದ ವಾತಾವರಣ ಇದ್ದು, ನಾಲೈದು ದಿನಗಳಿಂದ ಬಿಸಿಲು ಸಹ ಮರೆಯಾಗಿದೆ. ಇನ್ನು ಸಂಜೆಯಾಗುತ್ತಿದ್ದಂತೆ ಶೀತಗಾಳಿ ಆರಂಭವಾಗುತ್ತದೆ. ಈ ಹವಾಮಾನ ಬದಲಾವಣೆಯಿಂದ ನಗರದಲ್ಲಿ ವೈರಾಣು ಸೋಂಕು ಉಲ್ಬಣಗೊಂಡಿದೆ. ಜತೆಗೆ ಹೃದ್ರೋಗ, ಶ್ವಾಸಕೋಶ ಸಂಬಂಧಿ ಸೋಂಕುಗಳು ಕಾಣಿಸಿಕೊಳ್ಳತೊಡಗಿವೆ. ಹೀಗಾಗಿ, ಚಳಿಗಾಲಕ್ಕೆ ತಕ್ಕಂತೆ ಜೀವನಶೈಲಿ ಬದಲಾವಣೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಖಂಡಿತಾ ಆಸ್ಪತ್ರೆ ಹಾದಿ ಹಿಡಿಯಬೇಕಾಗುತ್ತದೆ.
Related Articles
Advertisement
ಕಾಡಲಿದೆ ಅಸ್ತಮಾ, ಒಣ ಚರ್ಮ: ಚಳಿಗಾಲದಲ್ಲಿ ಧೂಳು ಮಂಜಿನೊಂದಿಗೆ ಸೇರುವುದರಿಂದ, ಮಂಜು ಮಿಶ್ರಿತ ಗಾಳಿ ಸೇವನೆ ಅಸ್ತಮಾ ತರುವಂತಹ ಅಪಾಯವಿರುತ್ತದೆ. ಉಷ್ಣಾಂಶ ಕೊರತೆಯಿಂದ ರಕ್ತ ಚಲನೆ ಕುಗ್ಗಿ ಶೀತ ಗಾಳಿಗೆ ಚರ್ಮ ಒಣಗುತ್ತದೆ. ಜತೆಗೆ ದೇಹದ ಸೂಕ್ಷ್ಮಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಚರ್ಮದ ಮೇಲ್ಪದರದಲ್ಲಿ ನೀರಿನಾಂಶ ಕಡಿಮೆಯಾದಂತೆ ಚರ್ಮ ಒಣಗುತ್ತದೆ. ಚರ್ಮದಲ್ಲಿ ನಿರ್ಜಲೀಕರಣವಾದಂತೆ ಚರ್ಮದ ಕೋಶಗಳು ಸಾಯಲಾರಂಭಿಸುತ್ತವೆ. ಪರಿಣಾಮ ಚರ್ಮ ಸಂಕುಚಿತಗೊಂಡು ಒಡೆಯಲು ಆರಂಭಿಸುತ್ತದೆ. ಇದು ಚರ್ಮದ ಸೋಂಕಿಗೂ ಕಾರಣವಾಗುತ್ತದೆ.
-ಜಯಪ್ರಕಾಶ್ ಬಿರಾದಾರ್