Advertisement

ಲಿಂಗಧಾರಕರಿಂದಲೇ ಜಾತೀಯತೆ ಹೆಚ್ಚಳ

02:48 PM Nov 06, 2017 | |

ರಾಯಚೂರು: ಸಮಾಜದಲ್ಲಿನ ಜಾತೀಯತೆ ಹೋಗಲಾಡಿಸುವ ಎಂಬ ಉದ್ದೇಶದಿಂದ ಸ್ಮಾರ್ಥ ಬ್ರಾಹ್ಮಣರಾಗಿರುವ ವಿಶ್ವಗುರು ಬಸವಣ್ಣನವರು ಲಿಂಗ ನೀಡಿದ್ದಾರೆ. ಆದರೆ, ಲಿಂಗ ಧರಿಸಿಕೊಂಡವರಿಂದಲೇ ಜಾತೀಯತೆ ಹೆಚ್ಚಾಗಿದೆ ಎಂದು ಇಲಕಲ್‌ನ ಚಿತ್ತರಗಿ ಸಂಸ್ಥಾನ ಮಠದ ಡಾ| ವಿಜಯ ಮಹಾಂತ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಾತೋಶ್ರೀ ಮಹಾಂತಮ್ಮ ಶಿವಶಬಸಪ್ಪ ಗೋನಾಳ, ಪ್ರತಿಭಾಸುಗಮ ಸಂಗೀತ ಸಂಸ್ಥೆಯ 8ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮೌಡ್ಯಗಳನ್ನು ಬಿಡಬೇಕು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಸಲ್ಲದು. ಗಣೇಶ ಸೊಂಡಿಯೊಂದಿಗೆ ಜನಿಸಿದ್ದಾನೆ. ಆದರೆ, ಸಮಾಜದಲ್ಲಿ ಸೊಂಡಿಯನ್ನು ಹೊಂದಿದ ಮಗುವಿನ ಜನ್ಮ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಗಣೇಶ ಜನನದ ಬಗ್ಗೆ ಒಂದು ಕಥೆಯನ್ನು ಸೃಷ್ಟಿಸಲಾಗಿದೆ. ಆದರೆ, ಅವು ಸುಳ್ಳಿನಿಂದ ಕೂಡಿದ ಕಥೆಗಳಾಗಿವೆ. ದಲಿತರ
ಸಂಬಂಧ ಬೆಳಸಲು ಮುಂದಾಗಬೇಕು. ತಾವು ಉತ್ತಮ ಸಂಸ್ಕೃತಿ ಹೊಂದಿದ ಇಬ್ಬರು ದಲಿತರನ್ನು ನಮ್ಮ ಎರಡು ಶಾಖಾ ಮಠಗಳ ಸ್ವಾಮೀಜಿಗಳನ್ನಾಗಿ ನೇಮಕ ಮಾಡಿದ್ದೇವೆ. ಆ ಮಠಗಳನ್ನು ಗಮನಿಸಬೇಕು ಎಂದು ಹೇಳಿದರು.

ಜಾತೀಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು. ಲಿಂಗವಿಲ್ಲದ ಯಾವುದೇ ಜಾತಿಯವರಾಗಿರಲಿ ಅವರಿಗೆ ಲಿಂಗಧಾರಣೆ ಮಾಡಲು ಮಠ ಸದಾ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರತಿಯೊಬ್ಬರು ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಳ್ಳಬೇಕು. ಸಮಾನತೆ ಕಾಪಾಡಬೇಕು. ಮೌಲ್ಯಗಳ ಬಗ್ಗೆ ಅರಿವು ಮೂಡಬೇಕು. ಮೌಡ್ಯತೆ ಹಾಗೂ ಮೂಢನಂಬಿಕೆಗಳನ್ನು ಬಿಡಬೇಕು ಎಂದು ಸಲಹೆ ನೀಡಿದರು.

Advertisement

ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ, ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸುತ್ತಿರುವ ಮಾತೋಶ್ರೀ ಮಹಾಂತಮ್ಮ ಶಿವಬಸಪ್ಪ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ. ಸಂಗೀತ, ಸಾಂಸ್ಕೃತಿಕ, ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ಕಾರ್ಯವೂ ಉತ್ತಮ ಬೆಳವಣಿಗೆಯಾಗಿದೆ. ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಪಂ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು ಮಾತನಾಡಿ, ಈ ಸಂಸ್ಥೆಯ ಕಾರ್ಯವು ಸಮಾಜಕ್ಕೆ ಸಂಸ್ಕಾರ ನೀಡುವಂಥ ಕಾರ್ಯಕ್ರಮಗಳಾಗಿವೆ. ಇಂಥ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ ಎಂದರು.

ನಗರ ಶಾಸಕ ಡಾ| ಶಿವರಾಜ ಪಾಟೀಲ ಮಾತನಾಡಿ, ಎಲೆಮರ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸುವ
ಕಾರ್ಯ ಮಾದರಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಪ್ರೋತ್ಸಾಹಿಸುವಂಥ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

ರಾಜ್ಯಮಟ್ಟದ ವಿಜಯ ವåಹಾಂತ ಅನುಗ್ರಹ ಪ್ರಶಸ್ತಿ ಸ್ವೀಕರಿಸಿದ ನಾಡೋಜ ಡಾ| ಮಹೇಶ ಜೋಶಿ ಮಾತನಾಡಿ, ಈ ಪ್ರಶಸ್ತಿಗಾಗಿ ತಾವು ಅರ್ಜಿ ಸಲ್ಲಿಸಿಲ್ಲ. ಬದಲಾಗಿ ವಿಜಯ ಮಹಾಂತ ಸ್ವಾಮಿಗಳ ಹೆಸರಿನಲ್ಲಿ ತಾನಾಗಿಯೇ ಪ್ರಶಸ್ತಿ ಬಂದಿದೆ. ನಾವು ಪ್ರಶಸ್ತಿ ಪಡೆದಿಲ್ಲ ಪ್ರಶಸ್ತಿ ಪುರಸ್ಕೃತರಾಗಿದ್ದೇವೆ ಎಂದು ಹೇಳಿದರು.

ಯಾವುದೇ ಒಂದು ಸಾಧನೆ ಮಾಡುವ ಸಾಧಕನ ಹಿಂದೆ ಗುರು ಇರುತ್ತಾನೆ. ಅದರಂತೆ ಈ ಗುರುಗಳಿಂದ ಬಂದಿರುವ ಪ್ರಶಸ್ತಿಯು ಮಹತ್ವದ್ದಾಗಿದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಗುರುಗಳಿಂದ ಬಂದಿರುವ ಪ್ರಶಸ್ತಿ ಸಾಧಕರಿಗೆ ಒಂದು ಸೌಭಾಗ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಮಹಾಂತ ಕಾಯಕಯೋಗಿ ಪ್ರಶಸ್ತಿಯನ್ನು ಸಾರಿಗೆ ಇಲಾಖೆಯ ಹಿರಿಯ ವಾಹನ ನಿರೀಕ್ಷಕ ವೆಂಕಟೇಶ್ವರರಾವ್‌ ಅವರಿಗೆ ಪ್ರದಾನ ಮಾಡಲಾಯಿತು. ಮಹಾಂತ ಶ್ರೀ ಪ್ರಶಸ್ತಿಯನ್ನು ಪತ್ರಿಕಾರಂಗದ ವಿಭಾಗದಲ್ಲಿ ರಂಗಣ್ಣ ಪಾಟೀಲ ಅಳವಂಡಿ, ಆರೋಗ್ಯ ಕ್ಷೇತ್ರದಲ್ಲಿ ಯಶೋಧಾ ಕರ್ಲಿ, ಸಮಾಜ ಸೇವೆಯಲ್ಲಿ ಜಿ.ಸುರೇಶ ಹಾಗೂ ಆದರ್ಶ ದಂಪತಿಗಳ ಪ್ರಶಸ್ತಿಯನ್ನು ಪುಷ್ಪ ರುದ್ರಪ್ಪ ಅಂಗಡಿ, ನೀಲಮ್ಮ ಶರಣಬಸಪ್ಪ ಅರಳೆ, ಅನ್ನಪೂರ್ಣ ಶಿವಾನಂದ ಬಕೊಳ್ಳಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಚಿಕ್ಕಸುಗೂರಿನ ಚೌಕಿಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಇಲಕಲ್‌ನ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಗುರು ಮಹಾಂತ
ಸ್ವಾಮೀಜಿ ಮಾತನಾಡಿದರು.

ರವಿ ಪಾಟೀಲ ಪ್ರತಿಷ್ಠಾನ ಅಧ್ಯಕ್ಷ ರವಿ ಪಾಟೀಲ, ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಕರವೇ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ, ಕೇಶವ ರೆಡ್ಡಿ, ದಂಡಪ್ಪ ಬಿರಾದಾರ, ಪ್ರತಿಷ್ಠಾನದ ಅಧ್ಯಕ್ಷ ಶರಣಪ್ಪ ಗೋನಾಳ, ಕಾರ್ಯದರ್ಶಿ ಪ್ರತಿಭಾ ಗೋನಾಳ, ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ ಇತರರು ಇದ್ದರು. ಮುರಳೀಧರ ಕುಲಕರ್ಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next