ರಾಯಚೂರು: ಮಸ್ಕಿ ಉಪಚುನಾವಣೆಯಲ್ಲಿ ಈ ಬಾರಿ ಅತ್ಯಧಿಕ ಮತದಾನ ಆಗುವಂತೆ ಪ್ರೇರೇಪಿಸಲು ಸ್ವಿಪ್ ಸಮಿತಿಯಿಂದ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಶೇಖ್ ತನ್ವೀರ್ ಆಸೀಫ್ ಕರೆ ನೀಡಿದರು.
ನಗರದ ಜಿಪಂ ಕಚೇರಿಯ ಜಲ ನಿರ್ಮಲ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸ್ವಿಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಚುನಾವಣಾ ಆಯೋಗವು ವಿಕಲಚೇತನರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಿದೆ. ಆದಕಾರಣ ಜಿಲ್ಲಾ ವಿಕಲಚೇತನ ಕಲ್ಯಾಣ ಧಿಕಾರಿಗಳು ಈ ಬಗ್ಗೆ ವಿಕಲಚೇತನರಲ್ಲಿ ಜಾಗೃತಿ ಮೂಡಿಸಬೇಕು.
ಈ ಬಾರಿ ಕೋವಿಡ್-19 ಸೋಂಕಿನ 2ನೇ ಅಲೆ ಚುನಾವಣಾ ಮತದಾನಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ರೂಪಿಸಬೇಕಿದೆ ಎಂದರು. ಮಸ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಉಪ ಕೇಂದ್ರಗಳಲ್ಲಿ ಕೋವಿಡ್-19 ಸೊಂಕಿನಿಂದ ಸೊಂಕು ಹರಡುವುದರಿಂದ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಮತ್ತು ಸ್ಯಾನಿಟೇಜರ್ ಬಳಸಿ, ಸುರಕ್ಷಿತ ಕ್ರಮ ಅನುಸರಿಸಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಬೇಕು.
ಅದರೊಂದಿಗೆ ಕೋವಿಡ್-19 ಸೊಂಕಿತ ಪಾಸಿಟಿವ್ ವ್ಯಕ್ತಿಗಳು ಚುನಾವಣಾ ಮತದಾನಕ್ಕೆ ಆಗಮಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದರು. ಆಶಾ ಹಾಗೂ ಕಿರಿಯ ಆರೋಗ್ಯ ಕಾರ್ಯಕರ್ತರು ಸ್ವೀಪ್ ಜಾಗೃತಿ ಕಾರ್ಯಕ್ರಮಗಳ ಕುರಿತು ಪ್ರತಿ ಗ್ರಾಮದಲ್ಲೂ ಮಾಹಿತಿ ನೀಡಬೇಕು. ಕೋವಿಡ್ ನಿಯಮ ಪಾಲಿಸಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಚುನಾವಣಾ ಮತದಾನದ ಮಹತ್ವ ಕುರಿತು ಅರಿವು ಮೂಡಿಸಬೇಕು ಎಂದರು. ಸೈಕಲ್ ಜಾಥಾ, ಕ್ಯಾಂಡಲ್ ಲೈಟ್ ಮಾರ್ಚ್, ರಂಗೋಲಿ ಸ್ಪರ್ಧೆ, ಶಾಲಾ ಹಾಗೂ ಕಾಲೇಜುಗಳಿಗೆ ವಿವಿಧ ರೀತಿಯ ಕ್ರೀಡೆಗಳು, ಬಸ್ ನಿಲ್ದಾಣದಲ್ಲಿ ಆಡಿಯೋ ಜಿಂಗಲ್ಸ್, ವಾಹನಗಳಲ್ಲಿ ದ್ವನಿವರ್ಧಕಗಳ ಮೂಲಕ, ಚಲನಚಿತ್ರ ಮಂದಿರಗಳು, ಬೀದಿನಾಟಕಗಳು, ಗೋಡೆ ಬರಹಗಳು, ಬಸ್ ಟಿಕೆಟ್‌ಗಳಲ್ಲಿ ಮತದಾನದ ಮಾಡುವ ಕಿರು ಸಂದೇಶದ ಮುದ್ರಣದ ಮೂಲಕ, ಮತದಾನದ ಯಂತ್ರದ ಪ್ರಾತ್ಯಕ್ಷಿಕೆಗಳ ಮೂಲಕ, ನರೇಗಾ ಕಾರ್ಯ ಕ್ಷೇತ್ರಗಳಲ್ಲಿ ಮತದಾನ ಮಾಡುವಂತೆ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ರಾಮಕೃಷ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿರಣ್ಣಗೌಡ ಸೇರಿ ವಿವಿಧ ಇಲಾಖೆಗಳ ಅ ಧಿಕಾರಿಗಳು ಇದ್ದರು.