Advertisement

ಯೋಚನ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ 

07:10 AM Jan 23, 2019 | |

‘ ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಮಕ್ಕಳನ್ನು ಬಾಲ್ಯದಿಂದ ಸರಿಯಾಗಿ ಬೆಳೆಸಬೇಕಾಗುತ್ತದೆ. ಅವರನ್ನು ಏಕಮುಖವಾಗಿ ಬೆಳೆಸುವುದಕ್ಕಿಂತ ಬಹುಮುಖಿಯಾಗಿ ಬೆಳೆಸಿದಾಗ ಹೊಸ ಹೊಸ ಯೋಚನೆಗಳನ್ನು ಕಂಡುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳಿಗೆ ಪಠ್ಯಗಳಲ್ಲಿ ಮಾತ್ರ ವಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನದ ಮೂಲಕ ನೀಡುವ ಶಿಕ್ಷಣ, ಪ್ರಾಯೋಗಿಕ ಕಲಿಕೆಯಿಂದ ಅವರಲ್ಲಿ ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಿದೆ. ಜತೆಗೆ ನವನವೀನ ಯೋಚನೆಗಳಿಗೆ ವೇದಿಕೆ ಕಲ್ಪಿಸಿಕೊಡಬಹುದು.

Advertisement

ಅಂಕಗಳಿಸುವುದೊಂದೇ ವಿದ್ಯಾರ್ಥಿಗಳ ಗುರಿಯಾಗಬಾರದು. ಜೀವನದಲ್ಲಿ ಕೌಶಲ ಬೆಳೆಸಿಕೊಂಡು ಹೊಸ ಯೋಚನೆಯನ್ನು ಬೆಳೆಸುವುದು ಹೆತ್ತವರು ಮತ್ತು ಶಿಕ್ಷಕರ ಜವಾಬ್ದಾರಿಯಾಗಬೇಕು. ವಿದ್ಯಾರ್ಥಿಗಳ ದೈಹಿಕ ಆರೋಗ್ಯಕ್ಕಿಂತ ಹೆಚ್ಚಾಗಿ ಮಾನಸಿಕ ಬೆಳವಣಿಗೆಗೆ ಒತ್ತು ನೀಡಿ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಯೋಚಿಸಬೇಕಿದೆ.

ಇಂದಿನ ವಿದ್ಯಾರ್ಥಿಗಳಲ್ಲಿ ಹೊಸ ಯೋಚನೆಗಳನ್ನು ಚಿಂತಿಸುವ ಮಟ್ಟ ಕಡಿಮೆಯಾಗುತ್ತಿದ್ದು, ಇದಕ್ಕೆ ಹೆತ್ತವರು ಒಂದು ರೀತಿಯಲ್ಲಿ ಕಾರಣ. ಹೆಚ್ಚಿನ ಮನೆಗಳಲ್ಲಿ ಉದ್ಯೋಗ ಹಾಗೂ ಕೆಲಸದ ಒತ್ತಡದಲ್ಲಿರುವ ಬಹುತೇಕ ಪೋಷಕರು, ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸುವುದಿಲ್ಲ. ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಬಿಡುವುದರಿಂದಾಗಿ. ಬೆಳೆಯುವ ವಿದ್ಯಾರ್ಥಿಗಳ ಮನಸ್ಥಿತಿ ಕುಗ್ಗಲು ಕಾರಣವಾಗಬಹುದು.

ಓದು- ಬರಹವೊಂದೇ ಮಕ್ಕಳಿಗೆ ಪ್ರಪಂಚವಲ್ಲ. ಮತ್ತೂಂದು ಪ್ರಪಂಚವಿದೆ ಎಂಬುವುದನ್ನು ಹೆತ್ತವರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಮುಂದುವರೆದಿದೆ. ಫೇಸ್‌ಬುಕ್‌, ವಾಟ್ಸಪ್‌ ಸಹಿತ ಸಾಮಾಜಿಕ ಜಾಲತಾಣಗಳ ಬಳಕೆಯು ಮಿತದಲ್ಲಿದ್ದರೆ ಏನೂ ತಪ್ಪಿಲ್ಲ. ಆದರೆ ಹೆತ್ತವರು ಮಕ್ಕಳನ್ನು ಈ ಪ್ರಪಂಚದಿಂದ ದೂರವಿಡುತ್ತಾರೆ ಇದು ತಪ್ಪು. ಅಂತರ್ಜಾಲದ ಸದ್ಬಳಕೆಯಿಂದ ಸಣ್ಣ ಹಳ್ಳಿಯಿಂದ ಹಿಡಿದು ಪಟ್ಟಣ, ದೇಶ, ವಿದೇಶಗಳ ಸುದ್ದಿಯನ್ನು ಕ್ಷಣಾರ್ಧದಲ್ಲಿಯೇ ತಿಳಿದುಕೊಳ್ಳಲು ಸಾಧ್ಯವಿದೆ. ಇದನ್ನು ತಿಳಿಯುವುದರ ಮೂಲಕ ವಿದ್ಯಾರ್ಥಿಗಳ ಯೋಚನೆ ಕೂಡ ಬೆಳೆಯುತ್ತದೆ.

ಈ ಹಿಂದೆ ಯಾವುದೇ ಒಂದು ಕ್ಷೇತ್ರದ ಅಭ್ಯಾಸಕ್ಕೆ ಆಯಾ ಪರಿಣಿತರನ್ನು ಆಯ್ಕೆ ಮಾಡಬೇಕಿತ್ತು. ಉದಾಹರಣೆಗೆ ನೃತ್ಯ ಕಲಿಯಲು ಆಯಾ ಗುರುಗಳ ಬಳಿ ತೆರಳಿ ಕಲಿಯಬೇಕಾಗಿತ್ತು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಯೂಟ್ಯೂಬ್‌ ಸಹಿತ ಅಂತರ್ಜಾಲದಲ್ಲಿ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಯೋಚನೆಗಳನ್ನು ಬೆಳೆಸದಿದ್ದರೆ ಅಂತರ್ಜಾಲದಲ್ಲಿ ಜಾಲಾಡಲು ಸಾಧ್ಯವಿಲ್ಲ.

Advertisement

ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರ ಜತೆ ಬೆರೆಯುವುದಕ್ಕಿಂತ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಅಧ್ಯಾಪಕರ ಜತೆ ಬೆರೆಯುತ್ತಾರೆ. ವಿದ್ಯಾರ್ಥಿಗಳಲ್ಲಿ ನವನವೀನ ಆಲೋಚನೆ, ಚಿಂತನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಅವರ ಪಾತ್ರವೂ ಮಹತ್ವದ್ದು. ಶಾಲಾ ಕಾಲೇಜುಗಳಲ್ಲಿ ಇತರೆ ವಿಷಯಗಳಂತೆ ಯೋಚನಾ ಸಾಮರ್ಥ್ಯದ ಆಟಗಳು, ಕಲಾ ಪ್ರಕಾರಗಳ ಕಲಿಕೆಗೆ ಹೆಚ್ಚು ಒತ್ತು ನೀಡಬೇಕಿದೆ. ವಿದ್ಯಾರ್ಥಿಗಳ ಮನಸ್ಥಿತಿ, ಆಸಕ್ತಿಯನ್ನು ಅರ್ಥಮಾಡಿಕೊಂಡು ಆಯಾ ವಿಚಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ.

ಪ್ರಾಯೋಗಿಕ ಪಾಠದ ಮೂಲಕ ಚಿಂತನೆ
ಹೆಚ್ಚಿನ ಶಾಲಾ -ಕಾಲೇಜಿಗಳಲ್ಲಿ ಪ್ರಾಯೋಗಿಕ ಶಿಕ್ಷಣದ ಕಲಿಕಾ ಪದ್ಧತಿಗೆ ಹೆಚ್ಚಿನ ಒತ್ತು ನೀಡುವ ಆವಶ್ಯಕತೆ ಇದೆ. ಪದವಿ, ಸ್ನಾತಕೋತ್ತರ ಪದವಿಯಲ್ಲಿ ಕೊನೆಯ ಸೆಮಿಸ್ಟರ್‌ನಲ್ಲಿ ಒಂದು ಪಾಠವಾಗಿಯೇ ಪ್ರಾಯೋಗಿಕ ಅಧ್ಯಯನವಿದ್ದು, ಈ ವೇಳೆ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹೊಸ ಚಿಂತನೆಗಳನ್ನು ಅಳವಡಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆ ಶಿಕ್ಷಕರಲ್ಲಿದೆ.

ವಿದ್ಯಾರ್ಥಿಗಳಿಗೆ ಹೊಸ ಚಿಂತನೆ ರೂಢಿಸಿಕೊಳ್ಳಲು ನೂರಾರು ಅವಕಾಶಗಳಿವೆ. ಆದರೆ ಸ್ಪರ್ಧಿಸಲು ಸಾಮಾನ್ಯ ಜ್ಞಾನದ ಕೊರತೆ ಎದ್ದು ಕಾಣುತ್ತದೆ. ಇದನ್ನು ಹೋಗಲಾಡಿಸಲು ಇಂದಿನ ದಿನಗಳಲ್ಲಿ ನೂರಾರು ಮಾರ್ಗಗಳಿವೆ. ಯುವಜನತೆ ಹೆಚ್ಚಾಗಿ ಅಂತರ್ಜಾಲವನ್ನು ಚಲನಚಿತ್ರ, ವೀಡಿಯೋ ಗೇಮ್‌, ಚಾಟಿಂಗ್‌, ಸಾಮಾಜಿಕ ಜಾಲ ತಾಣಗಳ ಬಳಕೆಗೆ ಉಪಯೋಗ ಮಾಡುತ್ತಿದ್ದಾರೆ. ಇದರ ಜತೆಗೆ ತಮ್ಮ ಬುದ್ಧಿಗೆ ಕೆಲಸ ಕೊಡುವ ನಿಟ್ಟಿನಲ್ಲಿಯೂ ಬಳಕೆ ಮಾಡಬೇಕಿದೆ.

ಸ್ಮಾರ್ಟ್‌ ಪಾಠ 
ನಾಲ್ಕು ಗೋಡೆಯ ನಡುವೆ ಕುಳಿತು ಪಾಠ ಕೇಳುವ ಕಾಲ ಈಗ ಹೋಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಹೊಸ ಯೋಚನ ಶಕ್ತಿ ಹೊಂದಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಪ್ರಾರಂಭವಾಗಿದೆ. ಕಂಪ್ಯೂಟರ್‌, ಸ್ಯಾಟ್‌ಲೈಟ್ ಮುಖೇನ ವಿದ್ಯಾರ್ಥಿಗಳಿಗೆ ಆಡಿಯೋ, ವೀಡಿಯೋ ಮೂಲಕ ಪಾಠಗಳನ್ನು ಮಾಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಬುದ್ಧಿಮತ್ತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

•••ನವೀನ್‌ ಭಟ್ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next