ಚಿಕ್ಕಮಗಳೂರು: ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿಗಳ ವೇಗವನ್ನು ತೀವ್ರಗೊಳಿಸುವಂತೆ ಶಾಸಕ ಸಿ.ಟಿ.ರವಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳು ಮಂಜೂರಾತಿಗೊಂಡರೂ ಇನ್ನೂ ಕಾಮಗಾರಿ ಆರಂಭಗೊಂಡಿರುವುದಿಲ್ಲ. ಸರ್ಕಾರದ ಹಂತದಲ್ಲಿ ಸಾಕಷ್ಟು ಒತ್ತಡ ಹೇರಿ ಯೋಜನೆಗಳು ಮಂಜೂರಾತಿಗೊಂಡು ಅನುದಾನ ಬಿಡುಗಡೆಯಾಗಿದೆ. ಆದರೆ, ಅಂದಾಜು ಪಟ್ಟಿ, ಟೆಂಡರ್ ಪ್ರಕ್ರಿಯೆ ಮತ್ತಿತರ ಪ್ರಕ್ರಿಯೆಗಳು ದೀರ್ಘ ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಆರ್‌ಐಡಿಎಲ್ ನಿರ್ಮಿತಿ ಕೇಂದ್ರ ಮತ್ತಿತರ ಏಜೆನ್ಸಿಗಳಿಗೆ ಯೋಜನೆಗಳ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದರೂ ಇನ್ನೂ ಕಡತದ ಹಂತದಲ್ಲಿಯೇ ಹಲವು ಕಾಮಗಾರಿಗಳು ಇವೆ. ಕೆಲವು ಕಾಮಗಾರಿಗಳು ಬಹಳ ನಿಧಾನವಾಗಿ ನಡೆಯುತ್ತವೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ನಿರಂತರವಾಗಿ ಗಮನಿಸಿ ಚುರುಕುಗೊಳಿಸಬೇಕು. ಚಿಕ್ಕಮಗಳೂರು ನಗರದ ಕೆಲವೆಡೆ ಫುಟ್‌ಪಾತ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಪಾದಚಾರಿ ಸ್ನೇಹಿಯಾಗಿ ಫುಟ್‌ಪಾತ್‌ಗಳನ್ನು ನಿರ್ಮಾಣ ಮಾಡುವಂತೆ ಅವರು ತಿಳಿಸಿದರು.
ಪ್ರಾಚೀನ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಪುರಾತತ್ವ ಇಲಾಖೆ ನಿರ್ವಹಿಸುತ್ತಿದ್ದು, ಅನುದಾನ ಬಿಡುಗಡೆಯಾಗಿದೆ. ಈ ಕಾಮಗಾರಿಗಳನ್ನು ಚುರುಕುಗೊಳಿಸಲು ಶಾಸಕರು ತಿಳಿಸಿದರು. ದಬೆದಬೆ ಫಾಲ್ಸ್‌ಗೆ ಹೋಗುವ ರಸ್ತೆ ನಿರ್ಮಾಣಕ್ಕೆ ಖಾಸಗಿ ಭೂಮಿ ಅಗತ್ಯವಿದ್ದರೆ ಭೂ ಸ್ವಾಧಿಧೀನ ಪ್ರಕ್ರಿಯೆ ನಡೆಸುವಂತೆ ಸೂಚಿಸಿದ ಅವರು, ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಶಾಸಕರು ಪರಿಶೀಲಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಮತ್ತು ಇನ್ನಿತರ ಅಧಿಕಾರಿಗಳು ಇದ್ದರು.