Advertisement

ಆರ್‌ಟಿಪಿಸಿಆರ್‌ ಪರೀಕ್ಷೆ ಮೂರು ಪಟ್ಟು ಹೆಚ್ಚಿಸಿ

06:55 PM Sep 25, 2020 | Suhan S |

ರಾಯಚೂರು: ಮುಂಬರುವ ದಿನಗಳಲ್ಲಿ ಕೋವಿಡ್‌-19 ಪ್ರಕರಣಗಳು ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ಪ್ರಧಾನಮಂತ್ರಿಗಳು ವಿಡಿಯೋ ಸಂವಾದದಲ್ಲಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಮೂರು ಪಟ್ಟು ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ್‌ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ವಿಡಿಯೋ ಕಾನ್ಫೆರೆನ್ಸ್‌ ಕೊಠಡಿಯಲ್ಲಿ ಗುರುವಾರ ಜಿಲ್ಲೆಯ ಎಲ್ಲ ತಹಶೀಲ್ದಾರರು, ತಾಪಂ ಇಒಗಳು, ಪೊಲೀಸ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ಕೋವಿಡ್ ಪರೀಕ್ಷಿಸಿಕೊಳ್ಳಲು ಜನರಲ್ಲಿ ಒಲವಿಲ್ಲ ಎಂಬುದು ಕಂಡುಬಂದಿದೆ. ಜನಸಮೂಹ ಹೆಚ್ಚಾಗಿ ಸೇರುವ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಸಂತೆ, ಎಪಿಎಂಸಿ ಹಾಗೂ ಮಾರುಕಟ್ಟೆ ಇತರೆಡೆಗಳಲ್ಲಿ ಆರೋಗ್ಯ ಇಲಾಖೆಯವರೇ, ಮೊಬೈಲ್‌ ಪರೀಕ್ಷಾ ಘಟಕಗಳ ಮೂಲಕ ಪರೀಕ್ಷೆ ನಡೆಸಬೇಕು. ಕೆಲವೆಡೆ ರ್‍ಯಾಂಡಮ್‌ ಆಗಿ ಎ-ಸಿಂಥಮೆಟಿಕ್‌ ಹಾಗೂ ವಿವಿಧ ಜನಸಮುದಾಯಗಳು ಹೆಚ್ಚಿರುವ ಪ್ರದೇಶಗಳಲ್ಲಿಯೂ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದರು. ಕೋವಿಡ್‌-19 ಹರಡದಂತೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದನ್ನು ಪಾಲಿಸದಿದ್ದಲ್ಲಿ ಪೊಲೀಸರು ದಂಡ ವಿಧಿ ಸಬೇಕು. ಮೊದಲ ಬಾರಿಗೆ ಎಚ್ಚರಿಕೆ ನೀಡಬೇಕು. ಆಗಲೂ ಮಾತು ಕೇಳದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಗೆ ಒಳಪಡಿಸಬೇಕು. ಅದಕ್ಕೂ ಬಗ್ಗದಿದ್ದಲ್ಲಿ ಎಫ್‌ಐಆರ್‌ ದಾಖಲಿಸಬೇಕು ಎಂದು ಸೂಚಿಸಿದರು.

ಈ ಕುರಿತು ಪ್ರತಿ 2 ದಿನಕ್ಕೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಪ್ರಕಾಶ ನಿಕ್ಕಂ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌-19 ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ನಿತ್ಯ 500 ಪ್ರಕರಣ ದಾಖಲಿಸಿ ಕಂಟ್ರೋಲ್‌ ರೂಂಗೆ ವರದಿ ನೀಡುವಂತೆ ಸೂಚಿಸಿದರು. ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ಸೇರಿದಂತೆ ಪೊಲೀಸ್‌, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next