Advertisement

ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್‌ ಬೆಡ್‌ ಹೆಚ್ಚಿಸಿ

06:23 PM Jan 06, 2022 | Team Udayavani |

ಬ್ಯಾಡಗಿ: ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಪ್ರವೇಶವಾಗಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ್ದರಿಂದ ಬಹಳಷ್ಟು ನಿಗಾ ವಹಿಸಿ ಆರೋಗ್ಯ ಇಲಾಖೆ ಕೆಲಸ ಮಾಡಬೇಕಾಗುತ್ತದೆ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇವಲ 50 ಜನರಿಗೆ ಮಾತ್ರ ಆಕ್ಸಿಜನ್‌ ಬೆಡ್‌ ಲಭ್ಯವಿದ್ದು, ಅದನ್ನು 100ಕ್ಕೆ ಹೆಚ್ಚಿಸಿಕೊಳ್ಳುವಂತೆ ತಾಪಂ ಆಡಳಿತಾಧಿಕಾರಿ ಮಲ್ಲೇಶಪ್ಪ ಹೊರಪೇಟೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬುಧವಾರ ನಡೆದ ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಓಮೆಕ್ರಾನ್‌ ವೈರಸ್‌ ಹಿನ್ನೆಲೆಯಲ್ಲಿ ಈಗಾಗಲೇ ವಾರಾಂತ್ಯದ ಲಾಕ್‌ಡೌನ್‌ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ, ತಾಲೂಕಿನಲ್ಲೂ ಸಹ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಔಷಧ ಗಳ ದಾಸ್ತಾನು ಮಾಡಿಕೊಳ್ಳಿ: ಜನರ ಜೀವ ಸರ್ಕಾರಕ್ಕೆ ಬಹಳ ಮುಖ್ಯವಾಗಿದೆ. ಪ್ರಾಣ ರಕ್ಷಣೆಯ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಓಮೆಕ್ರಾನ್‌ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಸ್ವಲ್ಪ ಎಡವಟ್ಟಾದರೂ ಸರ್ಕಾರಕ್ಕೆ ಮುಜುಗುರ ತರುವಂತಹ ಕೆಲಸವಾಗಲಿದೆ. ಈ ನಿಟ್ಟಿನಲ್ಲಿ ಆಕ್ಸಿಜನ್‌ ಸೇರಿದಂತೆ ಎಲ್ಲ ರೀತಿ ಔಷ ಧಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚಿಸಿದರು.

ಲಸಿಕೆ ಪಡೆದವರಿಗಷ್ಟೇ ಉಪಚರಿಸಿ: ತಹಶೀಲ್ದಾರ್‌ ರವಿಕುಮಾರ ಕೊರವರ ಮಾತನಾಡಿ, ತಾಲೂಕಿನ ಎಲ್ಲ ಖಾಸಗಿ ವೈದ್ಯರ ಸಭೆ ಆಯೋಜಿಸಿ ಜ್ವರ, ನೆಗಡಿ, ಕೆಮ್ಮು ಎಂದು ಚಿಕಿತ್ಸೆಗೆ ಬಂದವರಿಗೆ ನೇರವಾಗಿ ಚಿಕಿತ್ಸೆ ನೀಡದೆ ಕೋವಿಡ್‌ ಪರೀಕ್ಷೆ (ಆರ್‌ಟಿಪಿಸಿಆರ್‌) ಮಾಡಿಸಿಕೊಳ್ಳಲು ಸೂಚಿಸಬೇಕು ಮತ್ತು ಕಡ್ಡಾಯವಾಗಿ ವ್ಯಾಕ್ಸಿನೇಶನ್‌ ಮಾಡಿಸಿಕೊಂಡವರಿಗಷ್ಟೇ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಸಿಕೆ ಕಡ್ಡಾಯ: ಶಾಲೆ, ಕಾಲೇಜು ಸೇರಿದಂತೆ 15 ರಿಂದ 18 ವರ್ಷದೊಳಗಿನ ಹಾಗೂ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಕೋವಿಡ್‌ ವಾಕ್ಸಿನ್‌ ಕಡ್ಡಾಯವಾಗಿ ಹಾಕಿಸುವುದು ನಿಮ್ಮ ಜವಾಬ್ದಾರಿ. ಇದನ್ನು ಶೇ.100 ರಷ್ಟು ಗುರಿಯನ್ನು ಶೀಘ್ರದಲ್ಲಿ ಸಾಧಿಸುವಂತೆ ಬಿಸಿಎಂ ಹಾಗೂ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅಂಗನವಾಡಿಗೆ ನಿವೇಶನ ಕೊಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಜಾಗದ ಕೊರತೆಯಿರುವ ಬಗ್ಗೆ ಸಿಡಿಪಿಒ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಇಒ ತಿಮ್ಮಾರೆಡ್ಡಿ, ಜಾಗವನ್ನು ಶಿಕ್ಷಣಾ ಧಿಕಾರಿಗಳು ಕಲ್ಪಿಸಿಕೊಡುವಂತೆ ಸೂಚನೆ ನೀಡಿದರಲ್ಲದೇ, ಕಲ್ಲೇದೇವರ ಗ್ರಾಮದಲ್ಲಿ ಅಂಗನವಾಡಿ ಮಕ್ಕಳ ಸಂಖ್ಯೆ ಜಾಸ್ತಿಯಿದ್ದು, ಜಾಗದ ಸಮಸ್ಯೆ ಹಲವು ವರ್ಷದಿಂದ ಜೀವಂತವಾಗಿದೆ. ಶಾಲೆ ಆವರಣದಲ್ಲಿಯೇ ಜಾಗ ನೀಡುವಂತೆ ತಿಳಿಸಿದರು.

ಸಿರಿಧಾನ್ಯ ಬೆಳೆ ಉತ್ತೇಜಿಸಿ: ಕೃಷಿ ಇಲಾಖೆ ಪ್ರಗತಿ ಸಂದರ್ಭದಲ್ಲಿ ಮಾತನಾಡಿದ ಆಡಳಿತಾಧಿಕಾರಿಗಳು, ರೈತರಿಗೆ ಹೆಚ್ಚು ಹೆಚ್ಚು ಸಿರಿಧಾನ್ಯಗಳನು ಬೆಳೆಯುವಂತೆ ಉತ್ತೇಜನ ನೀಡಿ. ಇದರಿಂದ ನೀರಿನ ಉಳಿತಾಯದ ಜೊತೆಗೆ ರಸಗೊಬ್ಬರಗಳ ಬಳಕೆ ಕಡಿಮೆಯಾಗಿ ಭೂಮಿ ಫಲವತ್ತತೆಗೆ ಮರಳಲಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಇದರ ಕುರಿತಂತೆ ಜಾಗೃತಿ ಮೂಡಿಸಿ ಎಂದರು.

ಪರಿಶಿಷ್ಟರ ಕಾಲೋನಿಗೆ ಭೇಟಿ ನೀಡಿ: ದೌರ್ಜನ್ಯಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯ ಒದಗಿಸುವುದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ತುಳಿತಕ್ಕೊಳಗಾದವರ ಜೀವನ ಕ್ರಮಗಳನ್ನು ಸುಧಾರಿಸಲು ಸರ್ಕಾರದಿಂದ ಸಾಕಷ್ಟು ಅನುದಾನ ಹಾಗೂ ಸೌಲಭ್ಯ ದೊರೆಯುತ್ತಿವೆ. ಎಸ್ಸಿ, ಎಸ್ಟಿ ಕಾಲೋನಿಗಳಿಗೆ ಭೇಟಿ ನೀಡಿ ಶೋಷಿತರಿಗೆ ಸೌಲಭ್ಯಗಳನ್ನು ತಲುಪಿಸುವಂತೆ ಸಮಾಜ ಕಲ್ಯಾಣಾಧಿಕಾರಿ ಹನುಮಂತಪ್ಪ ಲಮಾಣಿ ಅವರಿಗೆ ಸೂಚಿಸಿದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next