Advertisement

ಯುವಕರಲ್ಲಿ ಸಾಧನೆಯ ಛಲ ಹೆಚ್ಚಲಿ: ಚನ್ನಣ್ಣನವರ್‌

04:01 PM Sep 04, 2018 | |

ಸಿರುಗುಪ್ಪ: ಬಳ್ಳಾರಿ ಜಿಲ್ಲೆಯ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರಳಿ ಬರಬೇಕು. ಇಲ್ಲಿ ಸೇರಿದ ಯುವಕರಲ್ಲಿ ನನ್ನಂತೆ ಸಾಧನೆ ಮಾಡಬೇಕೆನ್ನುವ ಛಲವಿರುವ, ಆಶಯವಿರುವ ನೂರಾರು ಜನರು ದೊರೆಯುತ್ತಾರೆ. ಪ್ರತಿ ಗ್ರಾಮ, ಮನೆಗಳಲ್ಲಿಯೂ ರವಿ ಚನ್ನಣ್ಣನವರ್‌ ನನ್ನಂತಹವರು ಜನಿಸಬೇಕು. ಎಲ್ಲರೂ ಸಾಧಕರಾಗಬೇಕು ಎಂದು ಬೆಂಗಳೂರಿನ ಪಶ್ಚಿಮ ವಲಯದ ಉಪಪೊಲೀಸ್‌ ಆಯುಕ್ತ ರವಿ ಡಿ. ಚನ್ನಣ್ಣನವರ್‌ ಅಭಿಪ್ರಾಯಪಟ್ಟರು.

Advertisement

ನಗರದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವ ಬಳಗ ಟ್ರಸ್ಟ್‌ ವತಿಯಿಂದ ನೀಡಲಾದ 2018-19ನೇ ಸಾಲಿನ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಮೇಲೆ ರಾಮಕೃಷ್ಣ ಮಠದ ನಿರ್ಭಯಾನಂದ ಸರಸ್ವತಿ ಗುರುಗಳ ಪ್ರಭಾವವಿದ್ದಂತೆ ನೀವು ಕೂಡ ಗುರುವಿನ ಗುಲಾಮನಾಗಿ ಜೀವನದಲ್ಲಿ ಉತ್ತಮ ಸಾಧನೆ ತೋರಿ. ಭಗತ್‌ಸಿಂಗ್‌, ಚಂದ್ರಶೇಖರ್‌ ಆಜಾದ್‌ನವರ ಆಶಯಗಳಂತೆ ಯುವಕರು ದೇಶವನ್ನು ಕಟ್ಟೋಣ ಎನ್ನುವ ಆಶಯ ಬೆಳೆಸಿಕೊಳ್ಳಬೇಕು. ಯಾರಿಗೆ ಧೈರ್ಯವಿದೆ, ಓದಬೇಕೆನ್ನುವ ಛಲವಿದೆ, ಎಷ್ಟೇ ಸಂಖ್ಯೆಯಲ್ಲಿ ಇದ್ದರೂ ಬಂದು ಬಿಡಿ, ನಮ್ಮ ಸಮಾನ ಮನಸ್ಕರಿಂದ ಶಿಕ್ಷಣಕ್ಕೆ ನೆರವು ನೀಡಲಾಗುವುದು. ಮನುಷ್ಯನನ್ನು ಸೋಲಿಸುವ ವಸ್ತು ಈ ಜಗತ್ತಿನಲ್ಲಿಯೇ ಹುಟ್ಟಿಲ್ಲ. ಭಗವಂತನ ಅದ್ಭುತ ಸೃಷ್ಟಿಯೇ ಮನುಷ್ಯನಾಗಿದ್ದು, ಉಪನಿಷತ್ತುಗಳಲ್ಲಿ ತಿಳಿಸಿದಂತೆ ಭೂಮಿಯನ್ನು ಆಳುವ ಸಾಮರ್ಥ್ಯವನ್ನು ಪ್ರತಿಯೊಂದು ಮಗುವಿಗೂ ಭಗವಂತ ನೀಡಿರುತ್ತಾನೆ. ಆದರೆ ಆ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ ಎಂದರು.

ಪ್ರಶಸ್ತಿ ಎನ್ನುವುದು ಲಕ್ಷ್ಮಣರೇಖೆ ಇದ್ದಂತೆ. ಬಸವಣ್ಣನವರ ಹೆಸರಿನಲ್ಲಿರುವ ಪ್ರಶಸ್ತಿಯನ್ನು ಪಡೆದ ನಂತರ ನನ್ನ ನಿರೀಕ್ಷೆಗಳು, ಜವಾಬ್ದಾರಿಗಳು ಹೆಚ್ಚಾಗಿದ್ದು, ಬಸವಾದಿ ಶರಣರ ಆಶಯದಂತೆ ವಿದ್ಯಾರ್ಥಿಗಳಿಗೆ, ದೀನ ದಲಿತರಿಗೆ ನೆರವಾಗುತ್ತೇನೆ. ವಿದ್ಯಾರ್ಥಿಗಳು ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಬೇಕೆನ್ನುವ ಚಿಂತನೆ ಹೊಂದಿ, ಇಲ್ಲವೆ ಲಾಭದಾಯಕ ಕೃಷಿ ಬದುಕನ್ನು ಕಟ್ಟಿಕೊಳ್ಳಿ ಎಂದರು.

ತಾಲೂಕಿನ ನಂಟನ್ನು ಭಾಷಣದಲ್ಲಿ ನೆನಪಿಸಿಕೊಂಡ ಅವರು, ನನ್ನ ವಿದ್ಯಾರ್ಥಿ ಜೀವನದ ಕಷ್ಟಕಾಲದಲ್ಲಿ ಕರ್ಚಿಗನೂರಿನ ಗೆಳೆಯ ಎರ್ರೆಪ್ಪಚಾನಾಳ್‌ ಕಳುಹಿಸುತ್ತಿದ್ದ ಇಲ್ಲಿಯ ಅಕ್ಕಿಯನ್ನು ವರ್ಷವಿಡೀ ಊಟ ಮಾಡಿದ್ದೇನೆ. ಇಲ್ಲಿ ಹರಿಯುವ ಹಗರಿಯಲ್ಲಿ ಈಜಾಡಿದ್ದೇನೆ. ಕರ್ಚಿಗನೂರು ಹಾಲ್ವಿ ಮಠದಲ್ಲಿ ಪುರಾಣ ಕೇಳಿದ್ದೇನೆ. ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದ್ದೇನೆ. ಇಲ್ಲಿನ ಅನ್ನದ ಋಣ ನನ್ನ ಮೇಲಿದೆ ಎಂದು ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ಹಾಲ್ವಿಯ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳಬೇಕು, ಯಾರು ಹೆಚ್ಚು ಪುಸ್ತಕವನ್ನು ಅಧ್ಯಯನ ನಡೆಸುತ್ತಾರೋ ಅವರು
ಪ್ರತಿಭಾವಂತರಾಗುತ್ತಾರೆ ಎಂದು ತಿಳಿಸಿದರು. 

Advertisement

ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಹಾಗೂ ಬಸವ ಬಳಗ ಟ್ರಸ್ಟ್‌ನ ಗೌರವಾಧ್ಯಕ್ಷ ಎನ್‌.ಜಿ. ಲಿಂಗಣ್ಣ, ತಾಲೂಕು ಅಧ್ಯಕ್ಷ ಡಾ| ಎನ್‌.ಎಂ. ಶಿವಪ್ರಕಾಶ್‌, ಟ್ರಸ್ಟಿನ ನಾಗನಗೌಡ, ವಿರುಪಾಕ್ಷಿಗೌಡ ಸೇರಿದಂತೆ ಅಕ್ಕನ ಬಳಗದ ಸದಸ್ಯರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next