Advertisement

ತೆರಿಗೆ ಸಂಗ್ರಹ ಹೆಚ್ಚಳ ಜಿಎಸ್‌ಟಿ ಇನ್ನಷ್ಟು ಸುಧಾರಿಸಲಿ

06:00 AM May 03, 2018 | Team Udayavani |

ಒಂದು ದೇಶ ಒಂದು ತೆರಿಗೆ ಎಂಬ ಧ್ಯೇಯದೊಂದಿಗೆ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಏಪ್ರಿಲ್‌ನಲ್ಲಿ ತೆರಿಗೆ ಸಂಗ್ರಹದಲ್ಲಿ ಹೊಸ ಮೈಲುಗಲ್ಲು ನೆಟ್ಟಿದೆ. ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಐಜಿಎಸ್‌ಟಿ ಮತ್ತು ಸೆಸ್‌ ಸೇರಿ ಒಟ್ಟು 1,03,458 ಕೋ.ರೂ. ತೆರಿಗೆ ಸಂಗ್ರಹವಾಗಿದೆ. ಇದು ಸಂಕೀರ್ಣ ಆರ್ಥಿಕ ಪದ್ಧತಿಯಿರುವ ದೇಶದಲ್ಲಿ ಜಿಎಸ್‌ಟಿ ಯಶಸ್ಸಾಗುವುದಿಲ್ಲ ಎಂಬ ಟೀಕೆಗೆ ಸಿಕ್ಕಿದ ಉತ್ತರ. ಯಾವುದೇ ಹೊಸ ವ್ಯವಸ್ಥೆಯನ್ನು ಆರಂಭಿಸುವಾಗ ಅದಕ್ಕೆ ಅಭಿಪ್ರಾಯ ಬೇಧ ಮತ್ತು ರಾಜಕೀಯ ವಿರೋಧಗಳು ವ್ಯಕ್ತವಾಗುವುದು, ಹೊಂದಿಕೊಳ್ಳಲು ಕಷ್ಟ ಆಗುವುದು ಸಾಮಾನ್ಯ. ಜಿಎಸ್‌ಟಿ ವಿಚಾರದಲ್ಲೂ ಹೀಗೆ ಆಗಿತ್ತು. ಆದರೆ ಜಾರಿಗೆ ತಂದು ವರ್ಷ ತುಂಬುವ ಮೊದಲೇ ಶೇ. 90ರಷ್ಟು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರಕಾರ ಸಫ‌ಲವಾಗಿದೆ. ಈಗ ತೆರಿಗೆ ಸಂಗ್ರಹ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಾ ಹೋಗುತ್ತಿರುವುದು ಜಿಎಸ್‌ಟಿ ನಮ್ಮ ಆರ್ಥಿಕತೆಗೆ ಹೊಂದಿಕೊಳ್ಳದು ಎಂಬ ವಾದವನ್ನು ಹುಸಿ ಮಾಡಿದೆ. 

Advertisement

ಜಿಎಸ್‌ಟಿ ಜಾರಿಗೆ ಬಂದ ಬಳಿಕ ನಿಧಾನವಾಗಿಯಾದರೂ ದೇಶದಲ್ಲಿ ತೆರಿಗೆ ಶಿಸ್ತು ಮೂಡುತ್ತಿದೆ ಎನ್ನುವುದು ಆಶಾದಾಯಕ ಬೆಳವಣಿಗೆ. ತೆರಿಗೆ ಪಾವತಿಸುತ್ತಿರುವವರ ಸಂಖ್ಯೆ ಹೆಚ್ಚಿರುವುದು ಮಾತ್ರವಲ್ಲದೆ ತೆರಿಗೆ ವಂಚನೆ ಪ್ರಮಾಣವೂ ಕಡಿಮೆಯಾಗುತ್ತಿರುವುದು ಇದಕ್ಕೆ ಸಾಕ್ಷಿ. ಅಭಿವೃದ್ಧಿ ಯೋಜನೆಗಳು ದಕ್ಷವಾಗಿ ನಡೆಯಬೇಕಾದರೆ, ಆಡಳಿತ ವ್ಯವಸ್ಥೆ ಸುಸೂತ್ರವಾಗಿ ಸಾಗಬೇಕಾದರೆ ಸಮರ್ಪಕವಾಗಿ ತೆರಿಗೆ ಸಂಗ್ರಹ ಆಗುವುದು ಅನಿವಾರ್ಯ. ತೆರಿಗೆ ವಸೂಲಿಯಲ್ಲಿ ಶಿಸ್ತನ್ನು ಕಾಯ್ದು ಕೊಂಡಿರುವ ದೇಶಗಳು ಅಭಿವೃದ್ಧಿಯಲ್ಲಿ ಮುಂದುವರಿದಿರು ವುದನ್ನು ಕಾಣಬಹುದು. ಆದರೆ ನಮ್ಮಲ್ಲಿ ತೆರಿಗೆ ಪಾವತಿಸುವುದು ಎಂದರೆ ನಾವು ದುಡಿದು ಸಂಪಾದಿಸಿದ ಹಣವನ್ನು ಸರಕಾರಕ್ಕೆ ಪುಕ್ಕಟೆ ಕೊಡುವುದು ಎಂಬ ಮನೋಭಾವ ಇದೆ. ಅದರಲ್ಲೂ ದೊಡ್ಡ ಕುಳಗಳು ತೆರಿಗೆ ತಪ್ಪಿಸಲು ನಾನಾ ದಾರಿ ಹುಡುಕುವುದರಲ್ಲಿ ನಿಷ್ಣಾತವಾಗಿವೆ. ಇದೀಗ ಜಿಎಸ್‌ಟಿ ಇಂದಾಗಿ ತೆರಿಗೆ ವಂಚಿಸುವ ಅವಕಾಶಗಳು ಕಡಿಮೆಯಿರುವುದರಿಂದ ಆರ್ಥಿಕ ಶಿಸ್ತು ಕಂಡುಬರುತ್ತಿದೆ. 

ರಾಜ್ಯಗಳ ನಡುವೆ ಏ.1ರಿಂದ ಜಾರಿಗೆ ಬಂದಿರುವ ಇ-ವೇ ಬಿಲ್‌ ವ್ಯವಸ್ಥೆ ಜಾರಿಗೆ ತಂದಿರುವುದರಿಂದಲೂ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಇ-ವೇ ಬಿಲ್‌ನಿಂದಾಗಿ ವ್ಯವಹಾರಗಳು ಇನ್ನಷ್ಟು ತ್ವರಿತ ಮತ್ತು ಪಾರದರ್ಶಕವಾಗಿದೆ.ಇದು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ವರ್ತಿಸುತ್ತಿದೆ.  ಜಗತ್ತಿನ 165 ದೇಶಗಳಲ್ಲಿ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಒಂದಲ್ಲ ಒಂದು ರೂಪದಲ್ಲಿ ಜಾರಿಯಲ್ಲಿದೆ. ಕೇವಲ ಐದು ಪುಟ್ಟ ರಾಷ್ಟ್ರಗಳು ಮಾತ್ರ ಜಿಎಸ್‌ಟಿ ಅನುಷ್ಠಾನಗೊಳಿಸಿದ ಬಳಿಕ ಹಿಂಪಡೆದಿದ್ದವು. ಆದರೆ ಬಳಿಕ ಈ ದೇಶಗಳೂ ಅದನ್ನು ಪರಿಷ್ಕರಿಸಿ ಮರಳಿ ಜಾರಿಗೊಳಿಸಿವೆ. ಹೀಗೆ ಬಹುತೇಕ ದೇಶಗಳಲ್ಲಿ ಇದ್ದ ತೆರಿಗೆ ವ್ಯವಸ್ಥೆಯನ್ನು ನಾವು ಜಾರಿಗೊಳಿಸಲು ಹೊರಟಾಗ ಎದುರಾದ ರಾಜಕೀಯ ವಿರೋಧಗಳನ್ನು ನೋಡಿದಾಗ ಈ ದೇಶದಲ್ಲಿ ಹೊಸದನ್ನು ಅನುಷ್ಠಾನಿಸಲು ಸಾಧ್ಯವೇ ಇಲ್ಲವೇನೋ ಎಂಬ ಭಾವನೆ ಉಂಟಾಗಿತ್ತು. ಆದರೆ ವಿರೋಧಕ್ಕೆ ಮಣಿಯದೆ ಬದ್ಧತೆಯಿಂದ ಅನುಷ್ಠಾನಕ್ಕೆ ತಂದ ಫ‌ಲ ಈಗ ಕಾಣಿಸುತ್ತಿದೆ. 

ದೇಶಕ್ಕೊಂದೇ ತೆರಿಗೆ ದರ ಎನ್ನುವುದು ಜಿಎಸ್‌ಟಿಯ ಮೂಲ ಆಶಯ ಆಗಿದ್ದರೂ ಇದು ಪೂರ್ಣವಾಗಿ ನಿಜವಲ್ಲ. ಪ್ರಸ್ತುತ ನಾಲ್ಕು ಶ್ರೇಣಿಯ ದರವಿದೆ. ಇದನ್ನು ಮೂರಕ್ಕಿಳಿಸಿ ಕ್ರಮೇಣ ಎರಡಕ್ಕಿಳಿಸುವ ಅಗತ್ಯವಿದೆ. ಬಹುಶ್ರೇಣಿ ದರದಿಂದ ಸರಕುಗಳನ್ನು ಮತ್ತು ಸೇವೆಗಳನ್ನು ವರ್ಗೀಕರಿಸುವ ಸಮಸ್ಯೆ ತಲೆದೋರುತ್ತದೆ ಹಾಗೂ ಜನರಿಗೂ ಇದರಿಂದ ಗೊಂದಲ. ಸಾಮಾನ್ಯ ಬಳಕೆಯ ವಸ್ತುಗಳಿಗೆ ಒಂದು ದರ ಮತ್ತು ಐಷಾರಾಮಿ ವಸ್ತುಗಳಿಗೆ ಒಂದು ದರ ನಿಗದಿಯಾದರೆ ಎಲ್ಲರಿಗೂ ಪ್ರಯೋಜನವಿದೆ. ಅಂತೆಯೇ ಈಗಿರುವ ನೂರಾರು ನಿಯಮಗಳನ್ನು ಕಡಿಮೆಗೊಳಿಸುವುದರ ಜತೆಗೆ ಸರಳಗೊಳಿಸುವ ಅಗತ್ಯವೂ ಇದೆ. ಒಬ್ಬ ಸಾಮಾನ್ಯ ವ್ಯಾಪಾರಿ ಯಾವುದೇ ಸಹಾಯಕರ ಅಗತ್ಯವಿಲ್ಲದೆ ಸ್ವತಹ ಲೆಕ್ಕ ಹಾಕಿ ಸರಕು ಮತ್ತು ಸೇವಾ ತೆರಿಗೆ ಪಾವತಿಸುವಂತಾಗಬೇಕು. ಮಧ್ಯಮ ಶ್ರೇಣಿಯ ಕೈಗಾರಿಕೋದ್ಯಮಗಳನ್ನು ಮತ್ತು ವ್ಯಾಪಾರಿ ಸಂಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್‌ಟಿ ವ್ಯವಹಾರ ಮಿತಿಯನ್ನು ಕ್ರಮೇಣ 50 ಲ. ರೂ.ಗೇರಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು. ಇದರಿಂದ ಆಗುವ ಕಂದಾಯ ನಷ್ಟ ದೊಡ್ಡದೇನೂ ಅಲ್ಲ. 

ಆದರೆ ಇದೇ ವೇಳೆ ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕೈಗಾರಿಕೋದ್ಯಮ ಮತ್ತು ವ್ಯಾಪಾರಕ್ಕೆ ಭಾರೀ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯಂತಹ ಇನ್ನಿತರ ಲಾಭಗಳಿವೆ. ಅಂತೆಯೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆಯ  ವ್ಯಾಪ್ತಿಯೊಳಗೆ ತರುವ ಕುರಿತು ಕೂಡ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next