Advertisement

ನಗರಸಭೆಯಿಂದ ಆಸ್ತಿ ತೆರಿಗೆ ಹೆಚ್ಚಳ

06:12 PM Mar 10, 2021 | Team Udayavani |

ಶಹಾಬಾದ: ಕರ್ನಾಟಕ ಪೌರಸಭೆಗಳ ಅಧಿ ನಿಯಮ 1964 ತಿದ್ದುಪಡಿಯಾದಂತೆ 2021-22 ಸಾಲಿನಿಂದ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಗರಸಭೆಯಲ್ಲಿ ಮಂಗಳವಾರ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಅನುಮೋದನೆ ಪಡೆಯಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತ ಡಾ| ಕೆ.ಗುರುಲಿಂಗಪ್ಪ, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದರೆ ಅದಕ್ಕೆ ಸಾಕಷ್ಟು ತೆರಿಗೆ ಬರಬೇಕು. ನಗರದ ಅಭಿವೃದ್ಧಿಗೆ ತಕ್ಕಂತೆ ತೆರಿಗೆ ಸಂಗ್ರಹವಾಗುತ್ತಿಲ್ಲ. ತೆರಿಗೆಯಿಂದಲೇ ನಗರವನ್ನು ಅಭಿವೃದ್ಧಿ ಮಾಡಬಹುದು. ಈ ನಿಟ್ಟಿನಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ಆಸ್ತಿ ತೆರಿಗೆ ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.

ಖಾಲಿ ನಿವೇಶನಕ್ಕೆ ಶೇ. 0.2ರಿಂದ ಶೇ.0.5ಕ್ಕಿಂತ ಹೆಚ್ಚಿಗೆ ಇಲ್ಲದಂತೆ, ವಾಸದ ಮತ್ತು ವಾಣಿಜ್ಯ ಇತರ ಕಟ್ಟಡಗಳಿಗೆ ಸ್ವತ್ತು ತೆರಿಗೆ ಶೇ. 0.2ದಿಂದ ಶೇ. 1.5ಕ್ಕಿಂತ ಹೆಚ್ಚಿಗೆ ಇಲ್ಲದಂತೆ ವಿಧಿಸಬೇಕಾಗಿದೆ ಎಂದರು. ಇದಕ್ಕೆ ನಗರಸಭೆ ಸದಸ್ಯ ರವಿ ರಾಠೊಡ ಮಾತನಾಡಿ, ಈಗಾಗಲೇ  ಕೋವಿಡ್ ಸಂಕಷ್ಟದಿಂದ ಜನರು ತೊಂದರೆಗೆ ಒಳಗಾಗಿದ್ದಾರೆ. ಅವರ ಮೇಲೆ ಮತ್ತೆ ಬರೆ ಎಳೆದಂತಾಗುತ್ತದೆ ಎಂದರು.

ನಗರಸಭೆ ಸದಸ್ಯ ಡಾ| ಅಹ್ಮದ್‌ ಪಟೇಲ್‌, ರಜನಿಕಾಂತ ಕಂಬಾನೂರ ಮಾತನಾಡಿ, ನಗರದ ಮುಖ್ಯ ಮಾರುಕಟ್ಟೆ, ವಾಣಿಜ್ಯ ಮಳಿಗೆಯವರು ತೆರಿಗೆ ಕಟ್ಟುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಾದ ತಾವು ಏನು ಮಾಡುತ್ತಿದ್ದಿರಿ. ಮೊದಲು ತೆರಿಗೆ ಸಂಗ್ರಹಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು. ಅಲ್ಲದೇ ಆಸ್ತಿ ತೆರಿಗೆ ತಿದ್ದುಪಡಿಯಾದ ಬಗ್ಗೆ ಸರಿಯಾದ ಮಾಹಿತಿ ಒದಗಿಸುವಂತೆ ಸರ್ವ ಸದಸ್ಯರು ಒತ್ತಾಯಿಸಿದರು. ನಂತರ ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿ ಸಿದಂತೆ ಮಾಹಿತಿ ನೀಡಿದರು. ನಂತರ ಸರ್ವ ಸದಸ್ಯರು ಕೋವಿಡ್‌ ಸಂಕಷ್ಟದ ಕಾಲದಲ್ಲಿ ಜನರಿಗೆ ಹೊರೆಯಾಗದಂತೆ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸರ್ವಾನುಮತದೊಂದಿಗೆ ಅನುಮೋದನೆ ನೀಡಿದರು.

ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ನಗರಸಭೆ ಸರ್ವ ಸದಸ್ಯರು, ಕಚೇರಿ ವ್ಯವಸ್ಥಾಪಕ ಶಂಕರ ಇಂಜಗನೇರಿ, ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next