ಮೈಸೂರು: ಸರ್ಕಾರ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕೊರತೆಯಿದ್ದು, ಈ ಬಗ್ಗೆ ಸಂಘಟನಾತ್ಮಕವಾಗಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಅಖೀಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ನೌಕರರ ಕಲ್ಯಾಣ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಹನುಮಂತಪ್ಪ ಹೇಳಿದರು.
ಅಖೀಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ನೌಕರರ ಕಲ್ಯಾಣ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಈ ವರ್ಗಗಳ ಕಲ್ಯಾಣಕ್ಕಾಗಿ ಡಿಐಸಿಸಿ ಯೋಜನೆಯಡಿ 5 ಕೋಟಿ ರೂ. ಸಾಲ ಸೌಲಭ್ಯ ನೀಡಿದ್ದು, ಇದು ಮೋದಿಯವರೇ ಖುದ್ದಾಗಿ ಜಾರಿಗೆ ತಂದ ಕಾರ್ಯಕ್ರಮವಾಗಿದೆ. ಉದ್ಯೋಗ ಕೊಡಿಸುವುದು, ಕೈಗಾರಿಕಾ ಸ್ಥಾಪನೆಗೆ ಶೇ. 50 ರಷ್ಟು ಸಬ್ಸಿಡಿ ನೀಡುವುದು, ಕಟ್ಟಡ ನಿರ್ಮಾಣಕ್ಕೂ ಸಹಾಯಧನ ನೀಡಲಾಗುತ್ತದೆ. ಅಲ್ಪಸಂಖ್ಯಾತರಿಗೆ ಇನ್ನು ಹಲವು ಯೋಜನೆಗಳಿವೆ. ಜೊತೆಗೆ ಮಕ್ಕಳು ಶಿಕ್ಷಣಕ್ಕೆ ಕಟ್ಟಿರುವ ಶುಲ್ಕವೂ ವಾಪಸ್ ಬರಲಿದೆ ಎಂದು ತಿಳಿಸಿದರು.
ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರ ಮಕ್ಕಳು ವಿದೇಶದಲ್ಲಿ ಓದಲು ತಲಾ 25 ಲಕ್ಷ ರೂ. ಸೌಲಭ್ಯವಿದ್ದರೂ ಇದುವರೆಗೆ ಕೇವಲ 4 ಮಂದಿ ಮಾತ್ರ ಪಡೆದುಕೊಂಡಿದ್ದಾರೆ. ಇದಕ್ಕಾಗಿ ನಮ್ಮ ಒಕ್ಕೂಟದಿಂದ ಕಾರ್ಯಪಡೆ ಸಿದ್ಧ ಮಾಡಿಕೊಳ್ಳಬೇಕು. ಜಿಲ್ಲೆಗೆ 35 ಜನರ ತಂಡ ಕಟ್ಟಿ, ಎಲ್ಲಾದಕ್ಕೂ ಸಿದ್ಧವೆನ್ನುವ ಯುವಕರನ್ನು ನೇಮಿಸಿಕೊಳ್ಳಬೇಕು.
ಮಹಿಳೆಯರಿಗೂ 500 ಕೋಟಿ ಸಾಲ ಸೌಲಭ್ಯವಿದ್ದು, 50 ಲಕ್ಷ ಖರ್ಚು ಮಾಡಿ ಕಟ್ಟಿದ ಕಟ್ಟಡದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದರು. ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಡಿ. ಕೃಷ್ಣಯ್ಯ, ಜಿ.ಎನ್. ದೇವದತ್ತ, ಹೆಚ್ಚುವರಿ ಕಾರ್ಯದರ್ಶಿ ಭಕ್ತವತ್ಸಲ, ಪ್ರಧಾನ ಕಾರ್ಯದರ್ಶಿ ಸಿ. ರಮೇಶ್ ಇದ್ದರು.