Advertisement

ಒತ್ತಡ-ಹಾನಿಕಾರಕ ಆಹಾರದಿಂದ ಹೃದ್ರೋಗ ಹೆಚ್ಚಳ

06:21 PM Oct 01, 2021 | Team Udayavani |

ಬೀದರ: ಪ್ರತಿಯೊಬ್ಬರು ದೈಹಿಕ ಚಟುವಟಿಕೆಗಳನ್ನು ಮಾಡುವುದರ ಮೂಲಕ ಹೃದಯದ ಕಂಪನಕ್ಕೆ ಮತ್ತು ಹೃದಯದ ಆರೋಗ್ಯಕ್ಕೆ ಅನುಕೂಲ ವಾಗುವಂತೆ ಕೈಕೊಳ್ಳಬೇಕಾಗಿದೆ ಎಂದು ಎಸ್ಪಿ ಡಿ.ಎಲ್‌. ನಾಗೇಶ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಬ್ರಿಮ್ಸ್‌ ಮತ್ತು ಗುದಗೆ ಆಸ್ಪತ್ರೆ ಆಶ್ರಯದಲ್ಲಿ ನಗರದ ಡಿಎಚ್‌ಒ ಕಚೇರಿ ಸಭಾ ಭವನದಲ್ಲಿ ನಡೆದ ವಿಶ್ವ ಹೃದಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೃದಯ ಮಾನವನ ಬಹುಮೂಲ್ಯ ಅಂಗ. ಇಂದಿನ ಒತ್ತಡದ ಜೀವನ, ಹಾನಿಕಾರಕ ಆಹಾರ ಪದ್ಧತಿ ಧೂಮಪಾನ, ಮದ್ಯಪಾನದ ಕಾರಣದಿಂದಾಗಿ ಹೃದ್ರೋಗದ ಪ್ರಮಾಣ ಅತ್ಯಂತ ಅಧಿ ಕವಾಗಿದ್ದು, ಇದನ್ನು ತಡೆಗಟ್ಟಲು ಹೃದಯ ದಿನಾಚರಣೆಯಂತಹ
ಕಾರ್ಯಕ್ರಮ ಹಮ್ಮಿಕೊಂಡು ಹೃದಯಕ್ಕೆ ಮಾರಕವಾಗುವಂತಹ ಅಂಶಗಳ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಹೃದ್ರೋಗ ತಜ್ಞ ಡಾ| ನಿತೀನ ಗುದಗೆ ಮಾತನಾಡಿ, ಪ್ರಚಲಿತ ಹೃದಯ ರೋಗದ ಕಾರಣದಿಂದಾಗಿ ಬಹಳಷ್ಟು ಮರಣಗಳು ಸಂಭವಿಸುತ್ತಿದ್ದು, ಇದನ್ನು ತಡೆಯಲು ತಂಬಾಕು ಮತ್ತು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಬೇಕಾಗಿದೆ. ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು, ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮ ಮಾಡುವುದು, ಜಂಕ್‌ಫುಡ್‌ ಹಾಗೂ ಪಾಕೆಟ್‌ ಫುಡ್‌ ಸೇವಿಸದಿರುವುದು ಹಾಗೂ ಕಾಲಕಾಲಕ್ಕೆ ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಮತ್ತು ರಕ್ತದೊತ್ತಡ ಕಾಯಿಲೆ ಇರುವವರು ಪರೀಕ್ಷೆ ಮಾಡಿಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಡಿಎಚ್‌ಒ ಡಾ| ವಿ.ಜಿ ರೆಡ್ಡಿ ಮಾತನಾಡಿ, ಇಂದು ಹೃದಯ ರೋಗ 25-30 ವರ್ಷದ ಯುವಕರನ್ನಲ್ಲದೇ ಮಕ್ಕಳಿಗೂ ಕೂಡ ಸಂಭವಿಸುತ್ತಿದೆ. ಹೃದಯದ ಆರೋಗ್ಯಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮ ಹಾಗೂ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಾಗಿದೆ. ಪ್ರತಿಯೊಬ್ಬರು ಒತ್ತಡವನ್ನು ನಿಯಂತ್ರಿಸಿ ಧೂಮಪಾನ ಹಾಗೂ ಮದ್ಯಪಾನಕ್ಕೆ ಕಡಿವಾಣ ಹಾಕಿ ಹಸಿರು ತರಕಾರಿ, ಒಣ ಬೀಜಗಳು ಹಾಗೂ ಕಡಿಮೆ ಕೊಲೆಸ್ಟ್ರಾಲ್‌ವುಳ್ಳಂತಹ ತೈಲ, ಮಿತ ಆಹಾರ ಸೇವನೆಯ ಅಗತ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸಬೇಕಾಗಿದೆ ಎಂದು ತಿಳಿಸಿದರು.

ಡಾ| ಚಂದ್ರಕಾಂತ ಗುದಗೆ ಮತ್ತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ಮಾತನಾಡಿದರು. ಡಾ| ಕೃಷ್ಣರೆಡ್ಡಿ, ಡಾ| ಮಹೇಶ ಬಿರಾದರ, ಡಾ| ಶಂಕರ ದೇಶಮುಖ, ಡಾ| ಮಹೇಶ ತೊಂಡಾರೆ, ಡಾ| ಸಚಿನ ಗುದಗೆ, ಡಾ| ವೀರೇಶ, ಪ್ರವೀಣಕುಮಾರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next