Advertisement

ದಸರಾ ಹಬ್ಬದಲ್ಲಿ ಕಸ ಪ್ರಮಾಣ ಹೆಚ್ಚಳ

12:20 PM Oct 27, 2020 | Suhan S |

ಬೆಂಗಳೂರು: ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಕೆ.ಆರ್‌. ಮಾರ್ಕೆಟ್‌, ಯಶವಂತಪುರ, ಕೆ.ಆರ್‌.ಪುರ ಹಾಗೂ ಮಲ್ಲೇಶ್ವರ ಸೇರಿದಂತೆ ಹಲವು ಭಾಗದಲ್ಲಿ ಕಸದ ಸಮಸ್ಯೆ ಸೃಷ್ಟಿಯಾಗಿತ್ತು.

Advertisement

ಸಾಮಾನ್ಯ ದಿನಗಳಿಂಗಿತ ಭಾನುವಾರ ಹಾಗೂ ಸೋಮವಾರ ಶೇ.25 ಕಸದ ಉತ್ಪತ್ತಿ ಹೆಚ್ಚಾಗಿದ್ದು, ಕಸ ಸಂಗ್ರಹ ಮಾಡುವ ಆಟೋ ಟಿಪ್ಪರ್‌ಗಳು ಕಸ ತುಂಬಿಕೊಂಡು ನಿಂತಿದ್ದು ಕಂಡುಬಂತು. ಹಬ್ಬದ ಹಿನ್ನೆಲೆಯಲ್ಲಿ ಬಾಳೆಕಂಬ, ಬೂದ ಕುಂಬಳಕಾಯಿ ಹಾಗೂ ಹೂ ನಗರದ ಪ್ರಮುಖ ಮಾರುಕಟ್ಟೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ಬಿದ್ದಿತ್ತು. ಮಲ್ಲೇಶ್ವರ, ಜಯನಗರ, ಬನಶಂಕರಿ, ಸಾರಕ್ಕಿ, ಬಸವನಗುಡಿ, ಗಾಂಧಿಬಜಾರ್‌, ಹೆಬ್ಟಾಳ, ಯಲಹಂಕ, ಮತ್ತಿಕೆರೆ, ಜಾಲಹಳ್ಳಿ, ಟಿ. ದಾಸರಹಳ್ಳಿ ಹಾಗೂ ಯಶವಂತಪುರ ಸೇರಿದಂತೆ ಹಲವು ರಸ್ತೆಗಳಲ್ಲಿ ಬ್ಲಾಕ್‌ಸ್ಪಾಟ್‌ ಗಳು ನಿರ್ಮಾಣವಾಗಿತ್ತು.

ಕಳೆದ ವರ್ಷಕ್ಕಿಂತ ಕಡಿಮೆ: ಕೋವಿಡ್ ಸೃಷ್ಟಿಸಿರುವ ಆರ್ಥಿಕ ಸಂಕಷ್ಟ ಹಾಗೂನಗರದಿಂದ ಹಳ್ಳಿಗಳಿಗೆ ಹಿಮ್ಮುಖವಲಸೆಯಿಂದಾಗಿ ನಗರದಲ್ಲಿ ಈ ವರ್ಷ ಸರಳ ಆಯುಧಪೂಜೆ ಹಾಗೂ ವಿಜಯದಶಮಿ ಆಚರಣೆಗೆ ಜನ ಮುನ್ನಣೆ ನೀಡಿದ ಹಿನ್ನೆಲೆಯಲ್ಲಿ ಕಸದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಕಡಿಮೆ ಉತ್ಪತ್ತಿಯಾಗಿದೆ. ಹಬ್ಬದ ಸಂದರ್ಭದಲ್ಲಿ ನಗರ ಶೇ.60ಕ್ಕೂ ಹೆಚ್ಚು ಪ್ರಮುಖ ರಸ್ತೆಗಳಲ್ಲಿ ಕಸ ಬೀಳುತ್ತಿತ್ತು. ಆದರೆ, ಈ ಪ್ರಮಾಣ ಈ ಬಾರಿ ಶೇ.15ರಿಂದ 20ಕ್ಕೆ ಇಳಿಕೆ ಕಂಡಿದೆ.

ನಗರದಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಕಸ ಉತ್ಪತ್ತಿ ಪ್ರಮಾಣ ಹೆಚ್ಚಳವಾಗಿದ್ದು, ಹೆಚ್ಚವರಿ ಟ್ರಿಪ್‌ಗಳಲ್ಲಿ ಕಸ ಸಾಗಿಸಲಾಗುತ್ತಿದೆ. ಮಂಗಳವಾರದ ಬೆಳಗ್ಗೆ ವೇಳೆಗೆ ಸಂಪೂರ್ಣ ಕಸ ವಿಲೇವಾರಿಯಾಗಲಿದೆ. ಸೋಮವಾರ ಸಂಜೆ ವೇಳೆಗೆ 350 ಲಾರಿ (ಕಾಂಪ್ಯಾಕ್ಟರ್‌) ಗಳಲ್ಲಿ ಕಸ ಸಾಗಿಸಲಾಗಿದ್ದು, ಇನ್ನು 50 ಲಾರಿಗಳ ಚಾಲಕರು ಕಸ ವಿಲೇವಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರುಕಟ್ಟೆಗಳಲ್ಲಿ ಕೆಲವು ವರ್ತಕರು ಹಾಗೂ ವ್ಯಾಪಾರಿಗಳು ಸೋಮವಾರ ಸಂಜೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಕೆಲವು ಭಾಗದಲ್ಲಿ ಕಸ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ ಮಂಗಳವಾರ ಈ ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next