Advertisement

ಅಗ್ನಿಶಾಮಕ ದಳಕ್ಕೆ ಸವಾಲಾಗುತ್ತಿರುವ ಬೆಂಕಿ ಅವಘಡಗಳು

10:24 AM May 27, 2019 | keerthan |

ಬೆಳ್ಮಣ್‌: ಸುಡು ಬಿಸಿಲ ಬೇಗೆಗೆ ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ಗುಡ್ಡ-ಬೆಟ್ಟಗಳಿಗೆ ಬೆಂಕಿ ತಗುಲಿ ಅಪಾರ ಸಂಖ್ಯೆ ಗಿಡ-ಮರಗಳು ಸುಟ್ಟು ಕರಕಲಾಗುತ್ತಿದ್ದು ಈ ಭಾಗದ ಜನರು ಮನೆ ಸಹಿತ ತಮ್ಮ ಸೊತ್ತುಗಳ ರಕ್ಷಣೆಗೆ ಹರಸಾಹಸಪಡಬೇಕಾಗಿದೆ.ತಾಲೂಕಿನಾದ್ಯಂತ ಆಕಸ್ಮಿಕ ಬೆಂಕಿಗೆ ನೂರಾರು ಎಕರೆ ಕೃಷಿ ಭೂಮಿ ಸಹಿತ ಖಾಸಗಿ-ಸರಕಾರಿ ಗುಡ್ಡ ಪ್ರದೇಶಗಳು ಆಹುತಿಯಾಗಿವೆ.

Advertisement

ಕಳೆದ ವರ್ಷಕ್ಕಿಂತ ಹೆಚ್ಚು ಅವಘಡ
ಬೆಳ್ಮಣ್‌, ಮಾಳ, ನಿಟ್ಟೆ, ಸಾಂತೂರು, ಇನ್ನಾ, ನಂದಳಿಕೆ, ಬೋಳ, ಮುಂಡ್ಕೂರು ಸೇರಿದಂತೆ ತಾಲೂಕಿನಾದ್ಯಂತ ಈ ಹಿಂದಿನ ವರ್ಷಕ್ಕಿಂತ ಈ ಬಾರಿ ಅತೀ ಹೆಚ್ಚಿನ ಬೆಂಕಿ ಅವಘಡಗಳು ನಡೆದಿವೆ.

2018ರ ಮಾರ್ಚ್‌ ಅವಧಿಯಲ್ಲಿ ಕಾರ್ಕಳ ಅಗ್ನಿಶಾಮಕ ದಳದ ಕಚೇರಿಗೆ 52 ಕರೆಗಳು ಬಂದಿದ್ದು ಈ ಬಾರಿ ಮೇ ತಿಂಗಳವರೆಗೆ ಕರೆಗಳ ಸಂಖ್ಯೆ ನೂರರ ಗಡಿ ದಾಟಿದೆ. ದಿನೇ ದಿನೆ ಬಿಸಿಲ ತಾಪಕ್ಕೆ ತಾಲೂಕಿನಾದ್ಯಂತ ಅಲ್ಲಲ್ಲಿ ಬೆಂಕಿ ಅವಘಡಗಳು ನಿರಂತರ ನಡೆಯುತ್ತಿದೆ.

ಮಾನವನೇ ಕಾರಣ!
ಇಲ್ಲಿನ ಹಲವಾರು ಅಗ್ನಿ ದುರಂತಗಳಿಗೆ ಸಾಮಾನ್ಯ ಕಾರಣ ಎಂದರೆ ಮಾನವನೇ. ವಾಹನಗಳಲ್ಲಿ ಸಂಚರಿಸುವವರು ಧೂಮಪಾನ ಮಾಡಿ ರಸ್ತೆ ಪಕ್ಕದ ಕಾಡು ಪ್ರದೇಶಗಳಲ್ಲಿ ಎಸೆಯುವುದರಿಂದ ಹುಲ್ಲಿಗೆ ಬೆಂಕಿ ತಗುಲಿ ಗಾಳಿಗೆ ಹಬ್ಬಿದೆ. ಇತ್ತೀಚೆಗೆ ಬೆಳ್ಮಣ್‌ ಭಾಗದ ಪೆರೆಲ್ಪಾದೆ ಎಂಬಲ್ಲಿ ಸಿಗರೇಟಿನಿಂದ ಹತ್ತಿದ ಬೆಂಕಿ 2 ಎಕ್ರೆಗೂ ಅ ಧಿಕ ರಬ್ಬರ್‌ ತೋಟಕ್ಕೆ ಬೆಂಕಿ ಬಿದ್ದು ಮರ ಗಿಡಗಳು ಸಂಪೂರ್ಣ ಸುಟ್ಟು ಹೋಗಿದ್ದು ಅಪಾರ ನಷ್ಟ ಸಂಭವಿಸಿದೆ.


ಬೋಳ ಪದವು ಗುಡ್ಡೆ ಎಂಬಲ್ಲಿ ಬೆಂಕಿ ಬಿದ್ದು ಇಡೀ ಗುಡ್ಡವೇ ನಾಶವಾಗಿತ್ತು. ಕೆಲವೆಡೆ ಅಗ್ನಿಶಾಮಕ ಸಿಬಂದಿ ಬಂದರೂ ಹೋಗಲು ಸರಿಯಾದ ದಾರಿಯಿಲ್ಲದೆ ಹರಸಾಹಸ ಪಡಬೇಕಾಗಿತ್ತು. ಹೈಟೆನ್ಶನ್‌ ವಿದ್ಯುತ್‌ ತಂತಿಗಳಿರುವಲ್ಲಿ, ಮರದ ಕೊಂಬೆಗಳು ತಾಗಿಯೂ ಕೆಲವೆಡೆ ಅಗ್ನಿ ಸೃಷ್ಟಿಯಾಗಿತ್ತು.

Advertisement

ಕಾರ್ಕಳ ಬಲು ದೂರ
ತಾಲೂಕಿನ ಯಾವುದೇ ಭಾಗದಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೆ ಅಗ್ನಿಶಾಮಕ ದಳದವರು ಕಾರ್ಕಳದಿಂದಲೇ ಧಾವಿಸಿಬರಬೇಕು. ಅವರು ಅಲ್ಲಿಂದ ಬರುವುದರ ಒಳಗಾಗಿಯೇ ಕೆಲವೊಮ್ಮೆ ಸ್ಥಳೀಯರೇ ಬೆಂಕಿ ನಂದಿಸಿದ ಉದಾಹರಣೆಗಳೂ ಇವೆ.

ಜಾಗೃತರಾಗಬೇಕು
ಆಕಸ್ಮಿಕ ಬೆಂಕಿ ಅವಘಡ ತಪ್ಪಿಸಲು ಜನರೇ ಜಾಗೃತರಾಗಬೇಕಾಗಿದೆ. ಆಯಾ ಜಮೀನಿನವರು ಆಯಾ ಜಾಗದ ಕಳೆಗಳನ್ನು ಕಿತ್ತರೆ ಉತ್ತಮ.
-ದೀಪಕ್‌ ಕಾಮತ್‌, ಸಾಮಾಜಿಕ ಕಾರ್ಯಕರ್ತ

ಕೂಡಲೇ ಸ್ಪಂದನೆ
ಈ ಬಾರಿ ಕಾರ್ಕಳ ತಾಲೂಕಿನಲ್ಲಿ ಅತ್ಯಂತ ಹೆಚ್ಚಿನ ಬೆಂಕಿ ಅವಘಡದ ಕರೆಗಳು ಬಂದಿವೆ. ಅವುಗಳಿಗೆ ಕೂಡಲೇ ಸ್ಪಂದಿಸಿದ್ದೇವೆ.
ವಸಂತ್‌ , ಡಿ.ಎಫ್‌.ಒ. ಉಡುಪಿ

ಶರತ್‌ ಶೆಟ್ಟಿ ಬೆಳ್ಮಣ್‌

Advertisement

Udayavani is now on Telegram. Click here to join our channel and stay updated with the latest news.

Next