Advertisement

ಮಣಿಕ್ಕರ ಸರಕಾರಿ ಶಾಲಾ ಕಟ್ಟಡ ಕುಸಿಯುವ ಭೀತಿ

10:34 AM Aug 03, 2018 | Team Udayavani |

ಸುಳ್ಯ : ಧರೆಗೆ ಕುಸಿಯುವ ಹಂತದಲ್ಲಿರುವ ಛಾವಣಿ, ಬಿರುಕು ಬಿಟ್ಟಿರುವ ಗೋಡೆ. ಇದರೊಳಗೆ ದಿನವಿಡೀ ಜೀವ ಭಯದಲ್ಲಿ ಪಾಠ ಕೇಳುವ, ಪಾಠ ಹೇಳುವ ಅನಿವಾರ್ಯತೆ! ಪುತ್ತೂರು-ಸುಳ್ಯ ತಾಲೂಕಿನ ಗಡಿ ಭಾಗದ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣವಿದು. ಗುಣಮಟ್ಟದ ಕಲಿಕೆ, ದಾಖಲಾತಿ ಹೆಚ್ಚಳ ಇರುವ ಶಾಲೆ ಇದಾಗಿದ್ದರೂ ಇಲ್ಲಿ ಅದಕ್ಕೆ ತಕ್ಕಂತೆ ಮೂಲ ಸೌಕರ್ಯವಿಲ್ಲ. ತರಗತಿ ಕೊಠಡಿ, ಶೌಚಾಲಯ ಕೊರತೆ ಇಲ್ಲಿನ ಮುಖ್ಯ ಸಮಸ್ಯೆ. 

Advertisement

ಮಣಿಕ್ಕರ ಶಾಲೆ
1960ರಲ್ಲಿ ಸ್ಥಾಪನೆಯಾದ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿತ್ತು. ಮೂರು ಕೊಠಡಿಯ ಒಂದು ಕಟ್ಟಡ, ಒಂದು ಸಭಾಂಗಣ, ಎರಡು ಕೊಠಡಿ ಇರುವ ಇನ್ನೊಂದು ಕಟ್ಟಡ. ಇವೆರಡು 55 ವರ್ಷ ದಾಟಿದ ಹಳೆಯ ಕಟ್ಟಡಗಳು. ಇತ್ತೀಚೆಗೆ ಮುಖ್ಯ ಶಿಕ್ಷಕರ ಕೊಠಡಿ, ಗ್ರಂಥಾಲಯ, ಲ್ಯಾಬ್‌ಗಂದು ಹೊಸ ಕಟ್ಟಡ ಕಟ್ಟಲಾಗಿದೆ. ಅದನ್ನು ಹೊರತುಪಡಿಸಿ, ಉಳಿದೆರಡು ಕಟ್ಟಡಗಳು ಅಸುರಕ್ಷ ಸ್ಥಿತಿಯಲ್ಲಿವೆ.

ತರಗತಿ ಸ್ಥಳಾಂತರ
ಮೂರು ಕೊಠಡಿಯ ಹಳೆ ಕಟ್ಟಡ ಅಪಾಯಕಾರಿ ಹಂತದಲ್ಲಿರುವ ಕಾರಣ ಈ ಶೈಕ್ಷಣಿಕ ವರ್ಷದಿಂದ ಅಲ್ಲಿನ ಮೂರು ತರಗತಿಗಳನ್ನು ಸ್ಥಳಾಂತರಿಸಲಾಗಿದೆ. ತರಗತಿ ಹಾಲ್‌, ಗ್ರಂಥಾಲಯದ ನಡುವೆ ಪಾಠ ಕೇಳುವ ಸ್ಥಿತಿ ಮಕ್ಕಳದ್ದು. ಇನ್ನೊಂದು ಹಳೆ ಕಟ್ಟಡದ ಛಾವಣಿಯೂ ಭಾಗಿದ್ದು, ಅನಿವಾರ್ಯ ಸ್ಥಿತಿಯಲ್ಲಿ ಮಕ್ಕಳು ಅಲ್ಲೇ ಪಾಠ ಕೇಳುತ್ತಿದ್ದಾರೆ. ಅಲ್ಲಿಂದ ಮಕ್ಕಳನ್ನು ಸ್ಥಳಾಂತರಿಸಿದರೆ, ಕುಳಿತುಕೊಳ್ಳಲು ಬೇರೆ ಕೊಠಡಿ ಇಲ್ಲ. ಭಯದಿಂದಲೇ ಕಾಲ ಕಳೆಯಬೇಕಿದೆ ಅನ್ನುತ್ತಾರೆ ವಿದ್ಯಾರ್ಥಿಗಳು.

ಅಪಾಯದ ಸ್ಥಿತಿಯಲ್ಲಿ ಶೌಚಾಲಯ
ಶೌಚಾಲಯ ಕಟ್ಟಡವಂತೂ ಪೂರ್ಣವಾಗಿ ಶಿಥಿಲವಾಗಿದೆ. ಒರತೆ ರೂಪದಲ್ಲಿ ಬರುವ ನೀರು ಟ್ಯಾಯ್ಲೆಟ್‌ ಒಳಭಾಗದಲ್ಲಿ ತುಂಬಿ, ಮಲಿನ ನೀರಿನೊಂದಿಗೆ ಮಿಶ್ರಿತಗೊಂಡ ಹೊರಭಾಗಕ್ಕೆ ಹರಿಯುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಶೌಚಾಲಯದ ಕೊರತೆ ಕಾಡಿದೆ. ಮಳೆಗಾಲದಲ್ಲಿ ಶೌಚಾಲಯದೊಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲ. ಗುಡ್ಡ ಭಾಗದ ನೀರೆಲ್ಲವೂ ಒಳಭಾಗದಲ್ಲಿ ತುಂಬಿದೆ. ಜತೆಗೆ ಹೆಂಚಿನ ಮಾಡು ಶಿಥಿಲಗೊಂಡು ವಾಲಿದೆ.

ಗಡಿ ಬಿಕ್ಕಟ್ಟು..!
ಅಕ್ಷರ ಕೈ ತೋಟದಂತಹ ಕಾಮಗಾರಿ ಕೈಗೊಳ್ಳಲು ಇಲ್ಲಿನ ಗಡಿ ಗ್ರಾಮ ಅಡ್ಡಿಯೆನಿಸಿದೆ. ಈ ಶಾಲೆ ಕೊಳ್ತಿಗೆ ಪಂಚಾಯತ್‌ ವ್ಯಾಪ್ತಿಯೊಳಗಿದೆ. ಇಲ್ಲಿಗೆ ಬರುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು ಪೆರುವಾಜೆ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟವರು. ಅಕ್ಷರ ಕೈತೋಟ ನಿರ್ಮಾಣಕ್ಕೆ ಉದ್ಯೋಗ ಖಾತರಿ ಯೋಜನೆ ಅಳವಡಿಸಲು, ಪೆರುವಾಜೆ ಗ್ರಾಮದ ಪೋಷಕರಿಗೆ ಪಂಚಾಯತ್‌ ಬೇರೆ ಎಂಬ ಕಾರಣ ಅಡ್ಡಿಯೆನಿಸಿದೆ. ಹೀಗಾಗಿ ಇಲ್ಲಿನದ್ದು ಮೂಲ ಸೌಕರ್ಯದ ಕೊರತೆಯ ಜತೆಗೆ ಗ್ರಾ.ಪಂ. ಗಡಿ ಭಾಗದ ಸಮಸ್ಯೆಯೂ ಇದೆ.

Advertisement

ಮಕ್ಕಳ ಸಂಖ್ಯೆ ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಲ್ಲಿನ ದಾಖಲಾತಿ ಹೆಚ್ಚಿದೆ. ಈ ವರ್ಷ 1ರಿಂದ 7ನೇ ತರಗತಿ ತನಕ 73 ಮಕ್ಕಳು ಇದ್ದಾರೆ. ಸುಳ್ಯ ತಾಲೂಕಿನ ಪೆರುವಾಜೆ, ಪುತ್ತೂರು ತಾಲೂಕಿನ ಕೊಳ್ತಿಗೆ, ಕಡಬ ತಾಲೂಕಿಗೆ ಸೇರಿರುವ ಪಾಲ್ತಾಡಿ ಗ್ರಾಮದಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ. ಮೂರು ತಾಲೂಕಿನ ಮೂರು ಗ್ರಾಮಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ. ದಲಿತ ಸಮುದಾಯದ ಮಕ್ಕಳು ಗರಿಷ್ಠ ಸಂಖ್ಯೆಯಲ್ಲಿದ್ದಾರೆ.

ಹೊಸ ಕಟ್ಟಡ ಅಗತ್ಯ
ಮೂರು ವರ್ಷಗಳ ಹಿಂದೆಯೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಗಿರುವ ಹಳೆ ಕಟ್ಟಡ ತೆಗೆಯುವುದು, ಇನ್ನೊಂದು ಕಟ್ಟಡದ ಛಾವಣಿ ದುರಸ್ತಿಗೆ ಮಾಡುವುದು ಅನಿವಾರ್ಯ ಆಗಿದೆ. ಮನವಿ ಸಲ್ಲಿಸಿಯೂ ಆಗಿದೆ. ಪ್ರಯೋಜನ ಆಗಿಲ್ಲ. ಮಕ್ಕಳಿಗೆ ಪಾಠ ಕೇಳಲು ಕೊಠಡಿಯ ಕೊರತೆ ಕಾಡಿದೆ.
– ಇಬ್ರಾಹಿಂ ಅಂಬೆಟಡ್ಕ ಅಧ್ಯಕ್ಷರು, ಎಸ್‌ಡಿಎಂಸಿ, ಮಣಿಕ್ಕರ 

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next