ಕಲಬುರಗಿ: ವಿದ್ಯಾರ್ಥಿಗಳನ್ನು ಉನ್ನತ ವ್ಯಕ್ತಿಗಳನ್ನಾಗಿಸುವ ಆದರ್ಶ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ಆನಂದ ನಗರದಲ್ಲಿ ಹಣಮಂತರಾವ್ ದಿಂಡೂರೆ ಪ್ರಕಾಶನ ಪ್ರಕಟಿಸಿದ ಹಿರಿಯ ಇಂಗ್ಲಿಷ್ ಶಿಕ್ಷಕ ಚಂದ್ರಕಾಂತ ಬಿರಾದಾರ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಸಂಪಾದಿಸಿದ “ಸಿ.ಬೀಸ್ ಸಕ್ಸೆಸ್; ಎ ಪೋಸ್ಟ್ ಪೆಂಡಮಿಕ್ ಫ್ರೆಂಡ್ ಟು ಸ್ಟೂಡೆಂಟ್ಸ್’ ಎಂಬ ಪುಸ್ತಕದ 11ನೇ ಆವೃತ್ತಿಯನ್ನು ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಿಕ್ಷಕರು ತಮ್ಮ ಸ್ವಂತ ಮಕ್ಕಳನ್ನು ಯಾವ ರೀತಿ ಕಾಳಜಿ ಮಾಡುತ್ತಾರೋ, ಅದೇ ರೀತಿ ವಿದ್ಯಾರ್ಥಿಗಳನ್ನು ಕಾಣಬೇಕು. ವಿದ್ಯಾರ್ಥಿಗಳಿಗೆ ಜ್ಞಾನ, ಬುದ್ಧಿ, ಕೌಶಲ ನೀಡಿ, ಅವರು ಬದುಕು ಕಟ್ಟಿಕೊಳ್ಳಲು ಪೂರಕ ವಾತಾವರಣ ನಿರ್ಮಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ. ಶಿಕ್ಷಕರು ಅದನ್ನು ಗುರುತಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಪುಸ್ತಕದ ಸಂಪಾದಕ ಚಂದ್ರಕಾಂತ ಬಿರಾದಾರ ಮಾತನಾಡಿ, ಈ ಪುಸ್ತಕವು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿರುವ ಇಂಗ್ಲಿಷ ಭಯ ಹೋಗಲಾಡಿಸುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಯದಲ್ಲಿಯೇ, ಸರಳವಾಗಿ ಅರ್ಥವಾಗುವ ರೀತಿಯಲ್ಲಿ, ನೀಲನಕ್ಷೆಯೊಂದಿಗೆ, ಮಾದರಿ ಹಾಗೂ ಹಳೆ ಪ್ರಶ್ನೆಪತ್ರಿಕೆಗಳು, ಕಳೆದ ವರ್ಷ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳ ಬಗ್ಗೆ ಅಳವಡಿಸಿ ರಚಿಸಲಾಗಿದೆ ಎಂದು ತಿಳಿಸಿದರು.
ಉತ್ತರ ವಲಯದ ಬಿಇಒ ಚವ್ಹಾಣಶೆಟ್ಟಿ, ಕಮಲಾಪುರ ಡಯಟ್ ಪ್ರಾಂಶುಪಾಲ ಮಜರ್ ಹುಸೇನ್, ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಉಪನ್ಯಾಸಕ ಎಚ್.ಬಿ. ಪಾಟೀಲ ವೇದಿಕೆ ಮೇಲಿದ್ದರು. ಪ್ರಮುಖರಾದ ಕೆ.ಬಸವರಾಜ, ಚಂದ್ರಶೇಖರ ಪಾಟೀಲ, ಗಿರೀಶ ಕಡ್ಲೆವಾಡ, ವಿಶ್ವನಾಥ ಕಟ್ಟಿಮನಿ, ಸುನೀಲಕುಮಾರ ವಂಟಿ, ಸುರೇಶ ಬಡಿಗೇರ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ದಿಲೀಪ ಚವ್ಹಾಣ, ಮಹೇಶ ಹೂಗಾರ, ವಿಲಾಸರಾವ ಸಿನ್ನೂರಕರ್, ಸಂಜೀವ ಕುಮಾರ ಪಾಟೀಲ, ನಾಗೇಂದ್ರಪ್ಪ ಮಾಡ್ಯಾಳ್, ಗುಂಡೇರಾವ ಮುಡಬಿ ಮುಂತಾದವರು ಇದ್ದರು.