ಹೊಸದಿಲ್ಲಿ: ಸೋಮವಾರದಿಂದ ಎಕ್ಸ್ ಪ್ರಸ್ ವೇ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮತ್ತಷ್ಟು ದುಬಾರಿಯಾಗಲಿದೆ. ದೇಶಾದ್ಯಂತ ಸರಾಸರಿ ಶೇ. 5ರಷ್ಟು ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಪ್ರತೀ ವರ್ಷ ಟೋಲ್ ಶುಲ್ಕವನ್ನು ಪರಿಷ್ಕರಣೆ ಮಾಡುವಂತೆ ಈ ಬಾರಿ ಶೇ. 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸ ಲಾಗಿದೆ. ಈ ಹೊಸ ಶುಲ್ಕಗಳು ಎ. 1 ರಿಂದಲೇ ಜಾರಿಯಾಗಬೇಕಿತ್ತು. ಆದರೆ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ದರ ಏರಿಕೆಯನ್ನು ತಡೆಹಿಡಿಯಲಾಗಿತ್ತು. ಈಗ ಲೋಕಸಭೆ ಚುನಾವಣೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಟೋಲ್ ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೂತನ ಶುಲ್ಕದ ನಿರ್ಧಾರವನ್ನು 2 ತಿಂಗಳ ಅನಂತರ ತೆಗೆದುಕೊಳ್ಳಲು ಚುನಾವಣೆ ಆಯೋಗ ಹೆದ್ದಾರಿ ಪ್ರಾಧಿಕಾರವನ್ನು ಕೇಳಿಕೊಂಡಿತ್ತು. ಅದರಂತೆ ಪರಿಷ್ಕೃತ ಶುಲ್ಕ ಜೂ. 3ರಿಂದ ಜಾರಿಯಾಗುತ್ತಿದೆ.
ಪ್ರತಿವರ್ಷ ಆಗುವ ಶುಲ್ಕ ಪರಿಷ್ಕರಣೆಯ ಭಾಗವಾಗಿ ಹಾಗೂ ಹಣದುಬ್ಬರದಲ್ಲಿ ಬದಲಾವಣೆ, ಗ್ರಾಹಕ ಬೆಲೆ ಸೂಚ್ಯಂಕದ ಅನುಸಾರ ಈ ನೂತನ ಶುಲ್ಕ ಜಾರಿಯಾಗಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತ 855 ಟೋಲ್ ಪ್ಲಾಜಾಗಳು ಸೋಮವಾರದಿಂದಲೇ ಹೊಸ ಶುಲ್ಕ ವಿಧಿಸಲಿವೆ. ಕಳೆದ ಒಂದು ದಶಕದಿಂದ ಭಾರತ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಲ್ಲಿ ತೊಡಗಿದ್ದು, ಈ ವರೆಗೆ 14,600 ಕಿ.ಮೀ. ವಿಸ್ತರಿಸಿದೆ.