Advertisement
ಜಾನುವಾರುಗಳಿಗೆ ನೀರು, ಮೇವಿನ ಕೊರತೆ ತೀವ್ರ ವಾಗಿದ್ದಾಗ ಆಗಿನ ಶಾಸಕರಾಗಿದ್ದ ಬಿ.ಆರ್.ಪಾಟೀಲ ಅಂದಿನ ಸರ್ಕಾರಕ್ಕೆ ಬರಗಾಲದ ವರದಿ ಸಲ್ಲಿಸಿದ್ದರು. ಹೀಗಾಗಿ ಸರ್ಕಾರ ಆಳಂದ ತಾಲೂಕಿನಲ್ಲಿ ಐದಾರು ಕಡೆ ಗೋಶಾಲೆ ತೆರೆದಿತ್ತು. ರೈತರು ತಮ್ಮ ಜಾನುವಾರುಗಳನ್ನು ಬದುಕಿಸಲು ಗೋಶಾಲೆಯಲ್ಲಿ ದನಕರುಗಳೊಂದಿಗೆ ತಿಂಗಳಗಟ್ಟಲೆ ಬೀಡುಬಿಟ್ಟಿದ್ದರು. ಆಗ ರಾಜ್ಯದಲ್ಲಿ ಅತೀ ದೊಡ್ಡ ಗೋಶಾಲೆಯನ್ನು ಮಾದನಹಿಪ್ಪರಗಿಯಲ್ಲಿ ತೆರೆಯಲಾಯಿತು. ಇದನ್ನು ನೋಡಲು ರಾಜ್ಯದ ಕೆಲ ಸಚಿವರು, ಶಾಸಕರು ಗೋಶಾಲೆಗೆ ಭೇಟಿ ನೀಡಿದ್ದರು. ಆದರೀಗ ಆಳಂದ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಚಿತ್ರಣ ಬದಲಾಗಿದೆ.
Related Articles
Advertisement
ತಾಲೂಕಿನ ಬಬಲೇಶ್ವರ, ರುದ್ರವಾಡಿ, ಹೊದ ಲೂರು, ಜಂಬಗಾ(ಆರ್), ಕೋತನ ಹಿಪ್ಪರಗಾ, ಕಿಣ್ಣಿಸುಲ್ತಾನ, ಬಸವನ ಸಂಗೋಳಗಿ, ದೇಗಾಂವ್, ಪಡಸಾವಳಿ, ಖಾನಾಪುರ, ಹೆಬಳಿ, ಮಾದನಹಿಪ್ಪರಗಿ, ಚಲಗೇರಾ, ಮದಗುಣಕಿ, ಖೇಡಉಮರಗಾ, ದುತ್ತರ ಗಾಂವ್, ಸರಸಂಬಾ, ನಾಗಲೇಗಾಂವ್, ಸಕ್ಕರಗಾ, ಕಿಣ್ಣಿ ಅಬ್ಟಾಸ್, ಸಾವಳೇಶ್ವರ, ಮೋಘಾ(ಬಿ) ಮತ್ತು ಜಮಗಾ ಜೆ. ಸೇರಿದಂತೆ ಒಟ್ಟು 23 ಹಳ್ಳಿಗಳಲ್ಲಿ ಶಿರಪೂರ ಮಾದರಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿತ್ತು. ಹೀಗಾಗಿ ಮಣ್ಣು ತುಂಬಿದ ನಾಲಾ ಮತ್ತು ಹಳ್ಳಗಳಲ್ಲಿ ಅಗೆತ ಶುರುಮಾಡಲಾಗಿತ್ತು. 10 ಮೀಟರ್ ಅಗಲ ಮತ್ತು 3ಮೀಟರ್ ಆಳ ತೋಡಿ, ಒಟ್ಟು 56 ಕಿ.ಮೀ ಉದ್ದದ ನಾಲೆಗಳಲ್ಲಿ 52ಚೆಕ್ ಡ್ಯಾಂಗಳನ್ನು ನಿರ್ಮಿಸಲಾಯಿತು. ಪ್ರತಿಯೊಂದು ಚೆಕ್ ಡ್ಯಾಂಗಳಲ್ಲಿ ಮೂರು ಜಲಪೂರಣ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಯೋಜನೆಗೆ ಒಟ್ಟು 21.59ಲಕ್ಷ ರೂ. ತಗುಲಿದೆ.
ಈಗ ಎರಡು ವರ್ಷಗಳಿಂದ ಮಳೆ ಚೆನ್ನಾಗಿ ಬರುತ್ತಿದೆ. ಇಲ್ಲಿ ಬೇಸಿಗೆ ಕಾಲದಲ್ಲೂ ರೈತರು ನೀರಾವರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಚೆಕ್ ಡ್ಯಾಂಗಳನ್ನು ನಿರ್ಮಿಸಿದ ನಾಲ್ಕೈದು ಕಿ.ಮೀ ದೂರದ ಬಾವಿ, ಕೊಳವೆಬಾವಿಗಳಲ್ಲಿಯೂ ಬೇಸಿಗೆಯಲ್ಲೂ ನೀರು ಕಾಣಸಿಗುತ್ತದೆ. ಒಟ್ಟಾರೆಯಾಗಿ ಶಿರಪೂರ ಮಾದರಿ ಯೋಜನೆಯಿಂದ ರೈತರ ಬಾಳಿಗೆ ಸಂತೋಷ ಒದಗಿಬಂದಿದೆ.
ಮಾಡಿದ ಕೆಲಸ ಜನರಪರವಾಗಿರಬೇಕು. ನಮ್ಮ ಅನುಕೂಲಕ್ಕಾಗಿ ಅಲ್ಲ. ಜನಮಾನಸದಲ್ಲೂ ಉಳಿಯುವಂತಹ ಕಾರ್ಯಗಳು ಬಹಳಷ್ಟಿವೆ. ಆದರೆ ಮಾಡುವ ಇಚ್ಛಾಶಕ್ತಿ ಇಲ್ಲದಿದ್ದರೇ ಅಭಿವೃದ್ಧಿ ಕುಂಠಿತವಾಗುತ್ತದೆ. ಶಿರಪೂರ ಮಾದರಿ ಯೋಜನೆ ರೈತರಿಗೆ, ಸಾರ್ವಜನಿಕರಿಗೆ ಸಂತಸ ತಂದಿದೆ. ಸರ್ಕಾರ ಈ ಯೋಜನೆಯನ್ನು ನೀರಿನ ಅಭಾವ ಇರುವ ಪ್ರದೇಶಗಳಿಗೆ ವಿಸ್ತರಿಸಬೇಕು. –ಬಿ.ಆರ್.ಪಾಟೀಲ, ಮಾಜಿ ಶಾಸಕ, ಆಳಂದ
-ಪರಮೇಶ್ವರ ಭೂಸನೂರ