Advertisement

GDP ಹೆಚ್ಚಳ ಅಂದ್ರೆ ಗ್ಯಾಸ್‍-ಡಿಸೇಲ್-ಪೆಟ್ರೋಲ್ ಬೆಲೆ ಏರಿಕೆ ಎಂದರ್ಥ: ರಾಹುಲ್ ಗಾಂಧಿ

08:14 PM Sep 01, 2021 | Team Udayavani |

ನವದೆಹಲಿ: ಅಡುಗೆ ಅನಿಲ ಬೆಲೆ ಮತ್ತೆ 25 ರೂ. ಏರಿಕೆಯಾದ ಬೆನ್ನಲ್ಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ಯಾಸ್, ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿರುವ ಅವರು ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಇಂದು (ಸೆ.01) ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಕಳೆದ ಏಳು ವರ್ಷಗಳಲ್ಲಿ ಈ ವಸ್ತುಗಳ ಬೆಲೆ ಏರಿಕೆಯಿಂದ 23 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಲಾಗಿದೆ. ಈ ವಸ್ತುಗಳಿಂದ ಹಾಗೂ ಜಿಎಸ್‍ಟಿಯಿಂದ ಬಂದಂತಹ ಆದಾಯ ಬೆರಳೆಣೆಯಷ್ಟಿರುವ ಬಂಡವಾಳಶಾಯಿಗಳಿಗೆ ಲಾಭದಾಯಕವಾಗುತ್ತಿದೆ ಎಂದು ಟೀಕಿಸಿದ್ದಾರೆ.

2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು (ಜಿಡಿಪಿ) ಶೇಕಡಾ 20.1 ರಷ್ಟು ಬೆಳವಣಿಗೆಯಾಗಿದೆ ಎಂದು ಇಂದು ಅಂಕಿ ಅಂಶಗಳು ತಿಳಿಸಿವೆ. ಇದನ್ನು ಗ್ಯಾಸ್, ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಗೆ ಹೋಲಿಸಿ ಟೀಕಿಸಿರುವ ರಾಹುಲ್, ಜಿಡಿಪಿ ಏರಿಕೆ ಎಂದರೆ ಗ್ಯಾಸ್‍, ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಎಂದಿದ್ದಾರೆ.

ಯುಪಿಎ ಆಡಳಿತದಲ್ಲಿ ಎಲ್‍ಪಿಜಿ ಬೆಲೆ 410 ರೂ. ಇತ್ತು. ಅದು ಇಂದು 885 ರೂಪಾಯಿಗೆ ಏರಿದೆ. 2014 ರ ಬಳಿಕ ಪೆಟ್ರೋಲ್ ಬೆಲೆ ಶೇಕಡಾ 42 % ಹಾಗೂ ಡಿಸೇಲ್ ಬೆಲೆ ಶೇಕಡಾ 55 ರಷ್ಟು ಏರಿಕೆಯಾಗಿದೆ.

ರೈತರು, ಸಂಬಳದ ವರ್ಗ ಮತ್ತು ಕಾರ್ಮಿಕರು ಡಿಮಾನಿಟೈಸ್ ಆಗುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿಯ ಕೆಲವು ಕೈಗಾರಿಕೋದ್ಯಮಿ ಸ್ನೇಹಿತರು ಹಣಗಳಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.

Advertisement

ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದ ಬಂದ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂದು ದೇಶದ ಜನರು ಸರ್ಕಾರವನ್ನು ಕೇಳಬೇಕು. “ಒಂದೆಡೆ ನೋಟು ರದ್ದತಿ ಮತ್ತೊಂದೆಡೆ ಹಣಗಳಿಕೆ. ಯಾರ ನೋಟು ರದ್ದತಿ ನಡೆಯುತ್ತಿದೆ -ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಅನೌಪಚಾರಿಕ ವಲಯ, ಎಂಎಸ್‌ಎಂಇಗಳು, ಗುತ್ತಿಗೆ ಕಾರ್ಮಿಕರು, ಸಂಬಳದ ವರ್ಗ ಮತ್ತು ಪ್ರಾಮಾಣಿಕ ಕೈಗಾರಿಕೋದ್ಯಮಿಗಳ ನೋಟು ರದ್ದಾಗುತ್ತಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕೈದು ಸ್ನೇಹಿತರು ಮಾತ್ರ ಹಣ ಗಳಿಸುತ್ತಿದ್ದಾರೆ. ಬಡವರು ಮತ್ತು ದುರ್ಬಲರಿಂದ ಪ್ರಧಾನಿಯ ಸ್ನೇಹಿತರಿಗೆ ಸಂಪತ್ತಿನ ವರ್ಗಾವಣೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ವಾಗ್ದಾಳಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next