Advertisement

ಎಲೆಕ್ಟ್ರಿಕ್‌ ವಾಹನ ನೋಂದಣಿ ಹೆಚ್ಚ ಳ

09:36 AM Mar 31, 2022 | Team Udayavani |

ಪುತ್ತೂರು: ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಪುತ್ತೂರು ಸಾರಿಗೆ ಕಚೇರಿಯಲ್ಲಿ ಎಲೆಕ್ಟ್ರಿಕ್‌ ವಾಹನ ನೋಂದಣಿ ಸಂಖ್ಯೆ ಭಾರೀ ಹೆಚ್ಚಳ ಕಂಡಿದೆ. ಕಳೆದ ಎರಡು ವರ್ಷಗಳ ಅಂಕಿ-ಅಂಶಗಳು ಇದನ್ನು ದೃಢಪಡಿಸಿವೆ. ಪರಿಸರ ಮಾಲಿನ್ಯ ತಡೆಗಟ್ಟುವ ಸಲುವಾಗಿಯು ಎಲೆಕ್ಟ್ರಿಕ್‌ ವಾಹನದ ಕಡೆಗೆ ಆಸಕ್ತಿ ಮೂಡುತ್ತಿರುವುದು ಗಮನಾರ್ಹ ಸಂಗತಿ. ವಾಹನಗಳ ದರ ಇಳಿಕೆ, ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪನೆಯಾದಲ್ಲಿ ಈ ಸಂಖ್ಯೆ ಇನ್ನೂ ಏರಿಕೆ ಆಗುವ ನಿರೀಕ್ಷೆ ಮೂಡಿದೆ.

Advertisement

461 ಎಲೆಕ್ಟ್ರಿಕ್‌ ವಾಹನ ನೋಂದಣಿ

ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಸಾರಿಗೆ ಕಚೇರಿಯಲ್ಲಿ ಈ ತನಕ 461 ಎಲೆಕ್ಟ್ರಿಕ್‌ ವಾಹನ ನೋಂದಣಿ ಆಗಿದೆ. 2020ರ ಹಿಂದೆ ಕೇವಲ 61 ವಾಹನ ನೋಂದಣಿ ಆಗಿತ್ತು. 2021- 22ರಲ್ಲಿ 400 ವಾಹನಗಳ ನೋಂದಣಿ ಆಗಿದೆ. ಅಂದರೆ ಒಂದೇ ವರ್ಷ ಮೂರೂವರೆ ಪಟ್ಟು ನೋಂದಣಿ ಹೆಚ್ಚಳ ಗೊಂಡಿದೆ.

ಜಾಗೃತಿ ಹೆಚ್ಚಳ

ಪೆಟ್ರೋಲ್‌, ಡೀಸೆಲ್‌ ಬೆಲೆ  ಏರಿಳಿತ ಎಲೆಕ್ಟ್ರಿಕ್‌ ವಾಹನಗಳ ಕಡೆಗೆ ವಾಲುವಂತೆ  ಮಾಡುತ್ತಿರುವುದು  ಖರೀದಿ ಹೆಚ್ಚಳಕ್ಕೆ ಇರುವ ಪ್ರಮುಖ ಕಾರಣ. ಸಾಂಪ್ರದಾಯಿಕ ಇಂಧನ ಬಳಸುವ ವಾಹನಗಳಿಗಿಂತ ಎಲೆಕ್ಟ್ರಿಕ್‌ ವಾಹನಗಳ ದರ ಅಧಿಕ ಎನ್ನುವುದನ್ನು ಹೊರತುಪಡಿಸಿದರೆ ಉಳಿದಂತೆ ಇವುಗಳ ಸಾಮರ್ಥ್ಯ ಚೆನ್ನಾಗಿದೆ. ನಿರ್ವಹಣ ವೆಚ್ಚವೂ ಕಡಿಮೆ ಇದೆ. ಮಿತ ವ್ಯಯದ ಸಂಚಾರ ಸಾಧ್ಯ ಎನ್ನುತ್ತಾರೆ ವಾಹನ ಬಳಕೆದಾರರು.

Advertisement

ತೆರಿಗೆ ವಿನಾಯಿತಿ

ಎಲೆಕ್ಟ್ರಿಕ್‌ ವಾಹನ ಖರೀದಿಗೆ ಸರಕಾರ ವಿಶೇಷ ಉತ್ತೇಜನ ನೀಡುತ್ತಿದೆ. ವಾಹನಗಳ ನೋಂದಣಿಯ ಸಂದರ್ಭ ಕೇವಲ ರಸ್ತೆ ಸೇಫ್ಟಿ ನೆಸ್‌ ಮಾತ್ರ ಪಾವತಿಸಿದರೆ ಸಾಕು. ನೋಂದಣಿ ಶುಲ್ಕ ಸೇರಿದಂತೆ ಯಾವುದೇ ತೆರಿಗೆ ಕಟ್ಟಬೇಕಾದ ಆವಶ್ಯಕತೆ ಇಲ್ಲ. ಇದಕ್ಕೆ ಗ್ರೀನ್‌ ನಂಬರ್‌ ಪ್ಲೇಟ್‌ ಲಭಿಸುತ್ತದೆ. ಈ ಮೂಲಕ ಜನತೆ ಇಂಧನ ಖರ್ಚನ್ನು ಉಳಿಸುವ ಜತೆಗೆ ತೆರಿಗೆಯ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬಹುದು. ಇದು ಕೂಡ ವಾಹನ ಬಳಕೆದಾರರಿಗೆ ಅನುಕೂಲಕರ ಎಂದೆನಿಸಿದೆ.

ಚಾರ್ಜಿಂಗ್‌ ಸ್ಟೇಷನ್‌ ಇಲ್ಲ

ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸ್ಟೇಷನ್‌ ಗಳ ಕೊರತೆ, ರೇಂಜ್‌ನ ಕೊರತೆಯೂ ಎಲೆಕ್ಟ್ರಿಕ್‌ ವಾಹನಗಳ ಖರೀದಿ ಮೇಲೆ ಕೊಂಚ ಪರಿಣಾಮ ಬೀರಿದೆ. ಪುತ್ತೂರು ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸ್ಟೇಷನ್‌ಗಳಿಲ್ಲ. ಅದಾಗ್ಯೂ ಪರಿಸರ ಸ್ನೇಹಿ, ಮನೆಯಲ್ಲೇ ಚಾರ್ಜ್‌ ಮಾಡಿಕೊಳ್ಳಬಹುದಾದ ಅನುಕೂಲತೆ, ಕಡಿಮೆ ನಿರ್ವಹಣಾ ವೆಚ್ಚ, ಕನಿಷ್ಠ ಮಾಲಿನ್ಯ ಪ್ರಮಾಣ, ಪರಿಸರ ಸ್ನೇಹಿ, ಕಡಿಮೆ ಇಂಧನ ವೆಚ್ಚ ಮತ್ತಿತರ ಪೂರಕ ಅಂಶಗಳು ವಾಹನಕೊಳ್ಳುವಂತೆ ಮಾಡಿದೆ. ವಾಹನಗಳ ಉತ್ಪಾದನೆ, ಮಾರಾಟ ಹೆಚ್ಚಾದರೆ ಭವಿಷ್ಯದಲ್ಲಿ ಬೆಲೆ ಇಳಿಯಬಹುದು. ಜತೆಗೆ ಅಗತ್ಯಕ್ಕೆ ತಕ್ಕಂತೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸ್ಟೇಷನ್‌ ನಿರ್ಮಾಣದ ಕಡೆಗೂ ಗಮನ ಹರಿಸಿದರೆ ಇದರಿಂದ ಉತ್ತಮ ಫಲಿತಾಂಶ ದೊರೆಯಬಲ್ಲದು.

ಮಾಲಿನ್ಯ ನಿಯಂತ್ರಣ

ಎಲೆಕ್ಟ್ರಿಕ್‌ ವಾಹನ ನೋಂದಣಿ ಹೆಚ್ಚಾಗಿದೆ. ಇದು ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ಇಂಧನ ಬಳಕೆ ಪ್ರಮಾಣ ಕಡಿಮೆ ಆಗುವ ದೃಷ್ಟಿಯಿಂದಲೂ ಅನುಕೂಲವಾಗಿದೆ. ಆನಂದ ಗೌಡ, ಪ್ರಾದೇಶಿಕ ಸಾರಿಗೆ ತೆರಿಗೆ ಅಧಿಕಾರಿ, ಪುತ್ತೂರು

– ಕಿರಣ್‌ ಪ್ರಸಾದ್‌ ಕುಂಡಡ್ಕ

 

Advertisement

Udayavani is now on Telegram. Click here to join our channel and stay updated with the latest news.

Next