Advertisement

Ganesh Chaturthi; ಬೇಡಿಕೆ ಹೆಚ್ಚಳ, ಪೂರೈಕೆ ಕೊರತೆ: ಹಬ್ಬಕ್ಕೆ ಬಾಳೆಹಣ್ಣು ಬಲು ದುಬಾರಿ

12:55 AM Sep 05, 2024 | Team Udayavani |

ಬಂಟ್ವಾಳ: ವಿಪರೀತ ಮಳೆಯಿಂದಾಗಿ ಬಾಳೆ ಬೆಳೆ ತೀವ್ರ ಹಾನಿಯಾಗಿದ್ದು, ಜತೆಗೆ ಶ್ರೀ ಗಣೇಶ ಚತುರ್ಥಿ ಸಹಿತ ಸಾಲು ಸಾಲು ಹಬ್ಬಗಳ ಕಾರಣದಿಂದ ಬಾಳೆಹಣ್ಣಿನ ಬೆಳೆ ಗಗನಕ್ಕೇರಿಸಿದೆ. ಅತಿ ಹೆಚ್ಚು ಮಾರಾಟವಾಗುವ ಕದಳಿ ಬಾಳೆಹಣ್ಣಿನ ಬೆಲೆ ಕೆ.ಜಿ.ಗೆ 20ರಿಂದ 30 ರೂ.ನಷ್ಟು ಹೆಚ್ಚಾಗಿದೆ.

Advertisement

ಘಟ್ಟದ ಕದಳಿಗೆ 120 ರೂ.
ಬಿ.ಸಿ.ರೋಡಿನ ಮಾರುಕಟ್ಟೆಯಲ್ಲಿ ಊರಿನ ಕದಳಿ ಬಾಳೆಹಣ್ಣು ಕೆ.ಜಿ.ಗೆ 80 ರೂ.ಗಳಿಗೆ ಮಾರಾಟವಾಗುತ್ತಿದ್ದು, ಕೆಲವು ಸಮಯಗಳ ಹಿಂದೆ 50 ರೂ.ನಷ್ಟಿತ್ತು. ಘಟ್ಟದ ಕದಳಿ ಧಾರಣೆ ಕೆ.ಜಿ.ಗೆ 120 ರೂ. ಇದೆ. ಇದರ ಕಾಯಿ 88ರಿಂದ 90 ರೂ.ಗಳಿಗೆ ರಖಂ ವರ್ತಕರಿಗೆ ಬರುತ್ತಿದ್ದು, ಇದು ಕೂಡ 20ರಿಂದ 30 ರೂ.ಗಳನ್ನಷ್ಟು ದುಬಾರಿಯಾಗಿದೆ.

ಉಳಿದಂತೆ ಗಾಳಿ, ಬೂದಿ ಬಾಳೆಹಣ್ಣು ಬೆಲೆ 40 ರೂ., ಕ್ಯಾವಂಡೀಸ್‌ 40 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರಲ್ಲಿ ಉತ್ತಮ ಗುಣಮಟ್ಟದವು 50 ರೂ.ಗಳಿಗೆ ಮಾರಾಟವಾಗುತ್ತಿವೆ. ಘಟ್ಟದ ಮೇಲಿನ ಮೈಸೂರು ಬಾಳೆಹಣ್ಣು 60 ರೂ.ಗಳಿಗೆ ಮಾರಾಟವಾಗುತ್ತಿದ್ದು, ಊರಿನದ್ದಕ್ಕೆ 50 ರೂ. ಬೆಲೆ ಇದೆ.

ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
ಸದ್ಯಕ್ಕೆ ಈ ಧಾರಣೆ ಇದ್ದರೂ ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ವರ್ತಕರು ಹೇಳುತ್ತಿದ್ದು, ಹಬ್ಬದ ಋತು ಮುಗಿದರೆ ಧಾರಣೆ ಕಡಿಮೆಯಾಗಬಹುದು. ಆದರೆ ಬೇಡಿಕೆಯಷ್ಟು ಪೂರೈಕೆಯಾಗದಿದ್ದರೆ ಬೆಲೆ ಇಳಿಕೆ ಸಂಶಯ ಎನ್ನಲಾಗುತ್ತಿದೆ.

ಅರಸೀಕೆರೆ ಸಹಿತ ಘಟ್ಟ ಪ್ರದೇಶದ ಹಣ್ಣುಗಳು ಉತ್ತಮ ಗುಣಮಟ್ಟದಿಂದ ಕೂಡಿರುವುದರಿಂದ ಧಾರಣೆ ಕೊಂಚ ಹೆಚ್ಚಿದ್ದು, ಊರಿನ ಹಣ್ಣುಗಳು ಇಷ್ಟು ಗುಣಮಟ್ಟದಿಂದ ಕೂಡಿರುವುದಿಲ್ಲ ಎಂಬುದು ವರ್ತಕರ ಅಭಿಪ್ರಾಯ.

Advertisement

ನೇಂದ್ರ ಧಾರಣೆ ಕುಸಿತ
ನೇಂದ್ರ ಬಾಳೆ ಹಣ್ಣಿನ ಪೂರೈಕೆ ಹೆಚ್ಚಿರುವುದರಿಂದ ಧಾರಣೆ ಕೊಂಚ ಇಳಿಕೆಯಾಗಿದೆ. ಕೆಲವು ಸಮಯದ ಹಿಂದೆ 80ರಿಂದ 90 ರೂ.ಗೆ ಮಾರಾಟವಾಗುತ್ತಿದ್ದ ನೇಂದ್ರ, ಪ್ರಸ್ತುತ 60-70 ರೂ.ಗಳಿಗೆ ಇಳಿದಿದೆ.

20ರಿಂದ 30 ರೂ. ಹೆಚ್ಚಳ
ಮಳೆ ಹಾಗೂ ಹಬ್ಬದ ಸೀಸನ್‌ ಕಾರಣಕ್ಕೆ ಬಾಳೆ ಹಣ್ಣಿನ ಧಾರಣೆ ಹೆಚ್ಚಿದ್ದು, ಇನ್ನೆರಡು ದಿನಗಳಲ್ಲಿ ಮತ್ತಷ್ಟು ಏರುವ ಸಾಧ್ಯತೆಯೂ ಇದೆ. ಕದಳಿ ಹಣ್ಣಿನ ಧಾರಣೆ ಕೆಜಿಗೆ 20ರಿಂದ 30 ರೂ.ಗಳಷ್ಟು ಹೆಚ್ಚಾಗಿದೆ.
-ವೆಂಕಟೇಶ್‌, ವರ್ತಕರು, ಬಿ.ಸಿ.ರೋಡು.

Advertisement

Udayavani is now on Telegram. Click here to join our channel and stay updated with the latest news.

Next