Advertisement

Desi Swara: ಯಾರ್ಕ್‌ಶೈರ್‌: ಬೆಡಗಿನ ಗಣಪತಿಗೆ ಸಡಗರದ ಪೂಜೆ

01:26 PM Sep 14, 2024 | Team Udayavani |

ಡೋಂಕಾಸ್ಟರ್‌: ಡೋಂಕಾಸ್ಟರ್‌ನಲ್ಲಿ ಪ್ರತೀ ವರ್ಷ ಗಿರೀಶ್‌-ಸುಮನಾ ಅವರ ಮನೆಯಲ್ಲಿ ನಡೆಯುವ ಗಣೇಶೋತ್ಸವ ಈಗ ಯಾರ್ಕ್‌ಶೈರಿನಲ್ಲಿರುವ ನಮ್ಮೆಲ್ಲರ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಮೊದಲೇ ನಮೂದಿತವಾದ ತಿಥಿ. ಸಡಗರದಿ ಸುತ್ತಮುತ್ತಲಿನ ಕನ್ನಡ ಕುಟುಂಬಗಳೆಲ್ಲ ಬಂದು ಭಾಗಿಯಾಗಿ ಕಲೆತು ಬೆರೆತು ಹಬ್ಬದ ಶುಭಾಶಯಗಳೊಂದಿಗೆ ವೈಯಕ್ತಿಕ ಸುಖ-ದುಃಖಗಳನ್ನೂ ಹಂಚಿಕೊಳ್ಳುವುದು ಒಂದು ಹೊಸ ಸಂಪ್ರದಾಯವಾಗಿದೆ.

Advertisement

ಹೌದು, ಜೀವನದಲ್ಲಿ ಎಡರು ತೊಡರುಗಳು ಬರುವುದು ಸಾಮಾನ್ಯ. ಯುಗಾದಿಯಲ್ಲಿ ಬೇವು-ಬೆಲ್ಲ ಹಂಚಿಕೊಂಡಂತೆ ಯುಕೆಯ ಕನ್ನಡ ಬಳಗದ ಮತ್ತು ಯಾರ್ಕ್‌ಶೈರ್‌ ಕನ್ನಡಿಗರು ದೊಡ್ಡ ಕುಟುಂಬದಂತೆ ಒಂದುಗೂಡುವ, ಹಬ್ಬವನ್ನು ಆಚರಿಸುವ ಸಂಪ್ರದಾಯ ಇದೇ ಡೋಂಕಾಸ್ಟರ್‌ನಲ್ಲಿ ಯುಕೆ ಕನ್ನಡ ಬಳಗಕ್ಕೆ ನಲವತ್ತೆರಡು ವರ್ಷಗಳ ಹಿಂದೆ ನಾಂದಿ ಹಾಕಿದ್ದನ್ನು ನೆನಪಿಸುತ್ತ ಬಂದಿದೆ.

ಕಳೆದ ಶನಿವಾರ ತಮ್ಮತಮ್ಮ ಮನೆಯಲ್ಲಿ ಹೆಂಗಳೆಯರು ಹೂ ತೊಟ್ಟು ಹರ್ಷದಿ ಅಲಂಕರಿಸಿ, ತಮ್ಮನ್ನೂ ಅಲಂಕರಿಸಿಕೊಂಡು ಪೂಜೆ ಮಾಡಿದರು. ಕೆಲವರ ತಂದೆ-ತಾಯಂದಿರು ಭಾರತದಿಂದ ಈ ರಜೆಯ ಸಮಯದಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಬಂದವರಿಗೂ ಆಮಂತ್ರಣವಿತ್ತು. ಅವರು ಸಹ ತಮ್ಮ ಕಥೆ-ಅನುಭವ-ಆಶೀರ್ವಚನ-ಸಲಹೆ ಕೊಟ್ಟು ಎಳೆಯರನ್ನು ರಂಜಿಸಿದರು. ಆಂಗ್ಲಭಾಷೆಯ ಉಚ್ಚಾರದ ಉಪಯೋಗದ ವೈಚಿರ್ತ್ಯವನ್ನರಿತರು ಹೊಸಬರು.

ಅತ್ತ ಗೌರಿ-ಗಣೇಶರ ಪ್ರತಿಮೆಗಳು ಅಲಂಕರಿಸಿಕೊಂಡು ಕಂಗೊಳಿಸುತ್ತಿದ್ದುದು “ಟ್ಯೂಲಿಪ್‌ ಭಿತ್ತಿ’ಯ ಬದಿಯಲ್ಲಿ. ದೀಪ ಬೆಳಗಿ, ಗಂಟೆ ಬಾರಿಸಿ ಮಂತ್ರಹೇಳಿ, ಭಜನೆ ಹಾಡಿದರು ಸಾಮೂಹಿಕವಾಗಿ. ಈ ಸಲ ಮೊದಲ ಬಾರಿ ಇಂಗ್ಲೆಂಡ್‌-ವೇಲ್ಸ್‌ ಗಡಿಯಲ್ಲಿಯ ಶ್ರೂಸºರಿಯ ವೆಂಕಟೇಶ-ಲಾವಣ್ಯರೊಂದಿಗೆ ಶೆಫ್ಫೀಲ್ಡ್‌ -ಲೀಡ್ಸ್‌-ರೋದರಾಮ್‌ ತಂಡವೂ ಪ್ರತಿನಿಧಿತ್ವ ಪಡೆದಿತ್ತು.

ಐವತ್ತಕ್ಕೂ ಹೆಚ್ಚು ಜನ ಒಂದೇ ಮನೆಯಲ್ಲಿ ಸೇರುವುದು ಪ್ರತೀ ದಿನದ ಘಟನೆಯಲ್ಲ! ಪ್ರಸ್ತುತ ಸುಮನಾ ಗಿರೀಶ್‌ ಅವರು ಕನ್ನಡ ಬಳಗದ ಅಧ್ಯಕ್ಷೆ ಆಗಿರುವುದು ಕಾಕತಾಳೀಯವೇ. ಸಂಸ್ಕೃತ ಮಂತ್ರಗಳೊಂದಿಗೆ, ಕನ್ನಡದ ಮಾತ್ತು ಕತೆ, ಹರಟೆ, ತಾಂಬೂಲವಿರದಿದ್ದರೂ ಟ್ಯಾಂಬೋಲಾ ಆಟ- ಬಹುಮಾನ ನೆರೆದವರೆಲ್ಲರನ್ನು ಸಂತೋಷಗೊಳಿಸಿದವು. “ಗಣಪತಿ ಬಪ್ಪಾ ಮೋರಾಯಾ, ಮುಂದಿನ ವರ್ಷ ಮತ್ತೆ ಬಾ ಮಾರಾಯಾ!’ ಅನ್ನುತ್ತ ತಡರಾತ್ರಿ ಮನೆಗೆ ಮರಳಿದರು ಯಾರ್ಕ್‌ಶೈರ್‌ನ ಅನಿವಾಸಿ ಕನ್ನಡಿಗರು!

Advertisement

ವರದಿ: ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next