Advertisement

ಸಾಲದ ಹೊರೆ ಹೆಚ್ಚಳ; ಕೃಷಿ ಬೆಳವಣಿಗೆ ಕುಂಠಿತ

11:15 PM Jun 25, 2019 | Team Udayavani |

ಬೆಂಗಳೂರು: “ರಾಜ್ಯದಲ್ಲಿ ಒಂದೆಡೆ ಸಾಲದ ಹೊರೆ ಹೆಚ್ಚುತ್ತಿದ್ದರೆ ಮತ್ತೂಂದೆಡೆ ಕೃಷಿ ಬೆಳವಣಿಗೆ ಕುಂಠಿತಗೊಳ್ಳುತ್ತಿದ್ದು, ನಕಾರಾತ್ಮಕ ಹಾದಿಯಲ್ಲಿ ಸಾಗುತ್ತಿದೆ’ ಎಂದು 15ನೇ ಹಣಕಾಸು ಆಯೋಗ ಕಳವಳ ವ್ಯಕ್ತಪಡಿಸಿದೆ.

Advertisement

ದೇಶದಲ್ಲಿ ಆರ್ಥಿಕ ಹೊಣೆಗಾರಿಕೆ ಕಾಯ್ದೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಆ ಕಾಯ್ದೆ ವ್ಯಾಪ್ತಿಯೊಳಗೇ ರಾಜ್ಯವು ಆರ್ಥಿಕ ಶಿಸ್ತು ಕಾಪಾಡಿಕೊಂಡಿದೆ. ಆದರೆ, ಕಳೆದ ಏಳೆಂಟು ವರ್ಷಗಳಲ್ಲಿ ಬಜೆಟ್‌ಗೆ ಹೊರತಾದ ಸಾಲದ ಪ್ರಮಾಣ ಆರರಿಂದ ಏಳುಪಟ್ಟು ಹೆಚ್ಚಳ ಆಗಿದೆ.

2011-12ರಲ್ಲಿ 1,853.62 ಕೋಟಿ ಇತ್ತು. 2017-18ರಲ್ಲಿ 13,173.44 ಕೋಟಿ ರೂ. ತಲುಪಿದೆ. ಜತೆಗೆ ಕೃಷಿ ಬೆಳವಣಿಗೆಯೂ ಶೇ-0.3ಕ್ಕೆ ಕುಸಿದಿದೆ. ಈ ನಿಟ್ಟಿನಲ್ಲಿ ಸರ್ಕಾರ ಒತ್ತುಕೊಡುವ ಅವಶ್ಯಕತೆಯಿದೆ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‌.ಕೆ. ಸಿಂಗ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೀರಾವರಿಗೆ ವಿಪುಲ ಅವಕಾಶ: ರೈತರ ಅನುಕೂಲಕ್ಕಾಗಿ ರಾಷ್ಟ್ರೀಯ ಇ-ಮಾರುಕಟ್ಟೆ ಸೇವೆಗಳು (ಆರ್‌ಇಎಂಎಸ್‌), ಎಲೆಕ್ಟ್ರಾನಿಕ್‌ ಹರಾಜು ವ್ಯವಸ್ಥೆ ಸೇರಿ ಹಲವು ಉಪಕ್ರಮಗಳನ್ನು ಅಳವಡಿಸಿಕೊಂಡಿರುವುದು ತೃಪ್ತಿಕರವಾಗಿದೆ. ಆದರೆ, ಅವುಗಳು ನಿರೀಕ್ಷಿತ ಮಟ್ಟದಲ್ಲಿ ಫ‌ಲ ನೀಡುತ್ತಿಲ್ಲ.

ಇದಕ್ಕೆ ಪೂರಕವಾಗಿ ಕಳೆದ ಒಂದು ದಶಕದಲ್ಲಿ ರಾಜ್ಯವು ಎಂಟು ಬಾರಿ ಬರಕ್ಕೆ ತುತ್ತಾಗಿದೆ. ಆದರೆ, ರಾಜಸ್ತಾನದ ಸ್ಥಿತಿ ಇದಕ್ಕಿಂತ ಭೀಕರವಾಗಿದ್ದರೂ ಅಲ್ಲಿ ಕೃಷಿ ಬೆಳವಣಿಗೆ ಪ್ರಮಾಣ ಸಕಾರಾತ್ಮಕವಾಗಿದ್ದು, ಶೇ.3ರಷ್ಟು ವೃದ್ಧಿ ಕಾಣಬಹುದು. ಹಾಗಾಗಿ, ಈ ಹಿನ್ನೆಲೆಯಲ್ಲಿ ಕೃಷಿ ಬೆಳವಣಿಗೆಗೆ ಇನ್ನಷ್ಟು ಪೂರಕ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿರುವ ಒಟ್ಟಾರೆ ಕೃಷಿ ಭೂಮಿಯಲ್ಲಿ ಶೇ. 33ರಷ್ಟು ಮಾತ್ರ ನೀರಾವರಿ ಸೌಲಭ್ಯ ಒಳಗೊಂಡಿದೆ. ಈ ಮಧ್ಯೆ ಹಲವಾರು ನೀರಾವರಿ ಯೋಜನೆಗಳು ಅಪೂರ್ಣವಾಗಿವೆ. ಅಂದರೆ ನೀರಾವರಿಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಆದ್ಯತೆ ಮೇರೆಗೆ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು.

ಮಳೆ ನೀರು ಕೊಯ್ಲು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದ ಅವರು, ಕಳೆದೆರಡು ವರ್ಷಗಳಲ್ಲಿ ಮೂರು ಬೆಳೆ ಸಾಲ ಮನ್ನಾ ಯೋಜನೆಗಳನ್ನು ಘೋಷಿಸಿದ್ದು, ಅದರ ಅಂದಾಜು ಮೊತ್ತ 47,419 ಕೋಟಿ ರೂ. ಆಗುತ್ತದೆ ಎಂದು ಮಾಹಿತಿ ನೀಡಿದರು.

ತಲಾದಾಯವೂ ಅಧಿಕ – ಬಡತನವೂ ಹೆಚ್ಚು: ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ, ರಾಜ್ಯದ ತಲಾದಾಯವು ಸಾಕಷ್ಟು ಹೆಚ್ಚಿದೆ. ಆದರೆ, ಮತ್ತೂಂದೆಡೆ ಅತ್ಯಂತ ಬಡತನವೂ ಇಲ್ಲಿದೆ ಎಂದು ಎನ್‌.ಕೆ. ಸಿಂಗ್‌ ಅಚ್ಚರಿ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಅನೂಪ್‌ ಸಿಂಗ್‌, ರಮೇಶ್ಚಂದ್‌, ಅರವಿಂದ್‌ ಮೆಹ್ತಾ, ಅಜಯ್‌ ನಾರಾಯಣ್‌ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ಆದಾಯದಲ್ಲಿ ಕುಸಿತ: ಸರಕು ಸೇವಾ ತೆರಿಗೆ (ಜಿಎಸ್‌ಟಿ)ಯಿಂದ ರಾಜ್ಯದ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದ್ದು, ಶೇ. 23ರಷ್ಟು ಇಳಿಮುಖವಾಗಿದೆ ಎಂದು ಸರ್ಕಾರವು 15ನೇ ಹಣಕಾಸು ಆಯೋಗದ ಗಮನಸೆಳೆದಿದೆ. 2018-19ರಲ್ಲಿ 12,407.75 ಕೋಟಿ ರೂ.ಗಳಷ್ಟು ಆದಾಯ ಕುಸಿತವಾಗಿದೆ.

ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಜಾಹೀರಾತು ತೆರಿಗೆ ರೂಪದಲ್ಲಿ 200 ಕೋಟಿ ರೂ. ಬಂದಿದೆ. ಅದೂ ಈ ಜಿಎಸ್‌ಟಿಯಲ್ಲಿ ಹೋಗಿಬಿಟ್ಟಿದೆ ಎಂದು ಸರ್ಕಾರ ಬೇಸರ ವ್ಯಕ್ತಪಡಿಸಿದೆ. ಈ ಬಗ್ಗೆಯೂ ಆಯೋಗದ ಅಧ್ಯಕ್ಷ ಎನ್‌.ಕೆ. ಸಿಂಗ್‌ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next